ಟಿಪ್ಪು ಪಠ್ಯ ಮುಂದುವರಿಸಿ: ತಜ್ಞರ ವರದಿ| ಟಿಪ್ಪು ವಿಷಯ ತೆಗೆದರೆ ಮೈಸೂರು ಇತಿಹಾಸದ ಕೊಂಡಿ ಕಳಚಿದಂತೆ| ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಅಭಿಪ್ರಾಯ
ಎನ್.ಎಲ್. ಶಿವಮಾದು
ಬೆಂಗಳೂರು[ಡಿ.10]: ರಾಜ್ಯ ಪಠ್ಯಕ್ರಮದ 6, 7 ಮತ್ತು 10ನೇ ತರಗತಿ ಪುಸ್ತಕದಲ್ಲಿರುವ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಮುಂದುವರಿಸುವಂತೆ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.
‘ಟಿಪ್ಪು ವಿಷಯವನ್ನು ಪಠ್ಯದಿಂದ ತೆರವುಗೊಳಿಸಿದರೆ ಮೈಸೂರು ಇತಿಹಾಸ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮೈಸೂರು ಸಾಮ್ರಾಜ್ಯದ ಪಾತ್ರವನ್ನು ವಿವರಿಸುವ ಕೊಂಡಿ ಕಳಚಿದಂತಾಗುತ್ತದೆ. ದಕ್ಷಿಣ ಪ್ರಾಂತ್ಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರ ಪೈಕಿ ಟಿಪ್ಪು ಸುಲ್ತಾನ್ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಲ್ಕು ಮೈಸೂರು ಯುದ್ಧಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವ ಸಂಗತಿಯನ್ನು ವಿಶ್ಲೇಷಿಸಬೇಕಿರುವುದರಿಂದ ಟಿಪ್ಪು ಕುರಿತ ವಿಷಯ ಪಠ್ಯದಲ್ಲಿ ಇರಬೇಕು ಎಂದು ತಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರು, ‘ಟಿಪ್ಪು ಚಾರಿತ್ರ್ಯಹೀನ, ಮತಾಂಧನಾಗಿರುವುದರಿಂದ ವೈಭವೀಕರಿಸಿ ಮಕ್ಕಳಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಟಿಪ್ಪು ದೇಶಭಕ್ತನಲ್ಲ, ಕನ್ನಡಪ್ರೇಮಿಯಲ್ಲ. ಅವನು ಕೊಲೆಗೆಡುಕ. ಸದ್ಯ ಪುಸ್ತಕದಲ್ಲಿ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ. ಮತ್ತೊಂದು ಮುಖವನ್ನು ಕೂಡ ತೋರಿಸಬೇಕು. ಇಲ್ಲವಾದಲ್ಲಿ ತೆಗೆಯಬೇಕು’ ಎಂದು ಆಗ್ರಹಿಸಿದ್ದರು. ಇದಕ್ಕೆ ಕೆಲವು ದಾಖಲೆಗಳನ್ನು ಅವರು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಟಿಪ್ಪುರನ್ನು ಪಠ್ಯದಲ್ಲಿ ಇಡಬೇಕೇ ಬೇಡವೇ ಎಂಬ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿತ್ತು.
ಟಿಪ್ಪು ಜಯಂತಿ ರದ್ದುಗೊಳಿಸಲು ಕಾರಣ ಹೇಳಿದ ಹೈ ಕೋರ್ಟ್
ತಜ್ಞರು ಹೇಳಿರುವುದೇನು:
‘ಈಗಾಗಲೇ ಪಠ್ಯಪುಸ್ತಕದಲ್ಲಿ ಟಿಪ್ಪು ಕುರಿತ ಪುಸ್ತಕವಿದೆ. ಹೊಸದಾಗಿ ಯಾವುದನ್ನು ಸೇರಿಸುತ್ತಿಲ್ಲ. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ವಿಷಯಗಳಿಗೂ (ಉದಾ- ಕೊಲೆಗಡುಕ, ದೇಶದ್ರೋಹಿ) ಪಠ್ಯದಲ್ಲಿರುವ ವಿಷಯಗಳಿಲ್ಲ ಸಂಬಂಧವಿಲ್ಲ. 6, 7 ಮತ್ತು 10ನೇ ತರಗತಿ ಪಠ್ಯದ ಬೋಧನಾ ಚೌಕಟ್ಟಿನಲ್ಲಿ ಈ ವಿಷಯಗಳನ್ನು ಪ್ರಸ್ತಾಪ ಮಾಡಿಲ್ಲ. ಅಲ್ಲದೆ, ಟಿಪ್ಪುವನ್ನು ಕನ್ನಡಪ್ರೇಮಿ, ದೇಶಪ್ರೇಮಿ ಎಂದು ಕೂಡ ಬಿಂಬಿಸಿಲ್ಲ. ಪರಿಚಯಾತ್ಮಕವಾಗಿ ಸಕಾರಾತ್ಮಕ ವಿಷಯಗಳನ್ನು ಮಾತ್ರ ಚಿತ್ರಿಸಲಾಗಿದೆ.’
‘ಟಿಪ್ಪು ಒಬ್ಬನನ್ನು ನಕಾರಾತ್ಮಕವಾಗಿ ನೋಡಿದರೆ ಎಲ್ಲಾ ಆಡಳಿತಗಾರರನ್ನು ಸಹ ನಕಾರಾತ್ಮಕವಾಗಿ ನೋಡಬೇಕಾಗುತ್ತದೆ. ಎಲ್ಲರ ವೈಯಕ್ತಿಕ ಬದುಕಿನಲ್ಲಿಯೂ ನಕಾರಾತ್ಮಕ ವಿಷಯಗಳಿರುತ್ತವೆ. ಟಿಪ್ಪು ಒಬ್ಬನನ್ನು ಚಿತ್ರಿಸಿದರೆ ಎಲ್ಲರನ್ನೂ ಚಿತ್ರಿಸಬೇಕಾಗುತ್ತದೆ. ರಾಜರು ಮತ್ತು ಆಡಳಿತಗಾರರ ಬೇರೆ ಬೇರೆ ವೈಯಕ್ತಿಕ ವಿಚಾರಗಳು ಇರುತ್ತವೆ. ಹೀಗೆ ಪ್ರತಿಯೊಬ್ಬರ ವಿಚಾರಗಳನ್ನು ಸಂಶೋಧನಾ ಮಾಡುತ್ತಾ ಹೋಗಬೇಕಾಗುತ್ತದೆ. ಅಂತಹ ವಿಚಾರಗಳು ಪಠ್ಯಪುಸ್ತಕದ ಆಚೆಗೆ ಬರುವಂತಹವುಗಳಾಗಿವೆ. ಇಂತಹ ವಿಷಯಗಳು ಅಗತ್ಯವೆನಿಸಿದರೆ ಉನ್ನತ ಶಿಕ್ಷಣದಲ್ಲಿ ವಿಸ್ತಾರವಾಗಿ ನೋಡಬೇಕು. ಶಾಲಾ ಹಂತದಲ್ಲಿ ಸಕಾರಾತ್ಮಕವಾಗಿ ವಿಷಯ ಹೇಳುವ ಮೂಲಕ ಮಕ್ಕಳ ಮನಸ್ಸನ್ನು ವಿಕಾಸಗೊಳಿಸಬೇಕೇ ವಿನಾ ನಕಾರಾತ್ಮಕ ವಿಷಯ ಹೇಳುವ ಮೂಲಕ ವಿಕಾರಗೊಳಿಸಬಾರದು.’
‘ಒಂದು ವೇಳೆ ಟಿಪ್ಪು ವಿಷಯವನ್ನು ತೆರವು ಮಾಡಿದರೆ, ಮೈಸೂರು ಪ್ರಾಂತ್ಯದ ಆಡಳಿತ ತಿಳಿಸುವ ವೇಳೆ ಟಿಪ್ಪುವಿನ ಆಡಳಿತ ಅವಧಿಯಾದ 1783ರಿಂದ 1799ರ ವರೆಗಿನ ಮೈಸೂರು ಇತಿಹಾಸವನ್ನು ತಿಳಿಸುವುದು ಹೇಗೆ ಎಂಬುದನ್ನು ತಿಳಿಸಲು ಸಾಧ್ಯವಾಗುವುದಿಲ್ಲ. ಮೈಸೂರು ಪ್ರಾಂತ್ಯದಲ್ಲಿ ಆಂಗ್ಲೋ- ಮೈಸೂರು ಯುದ್ಧ ಬಹಳ ಪ್ರಮುಖ ಮಹತ್ವಪೂರ್ಣವಾದ ಚಾರಿತ್ರಿಕ ವಿದ್ಯಮಾನವಾಗಿದೆ. ಇದನ್ನು ತೆರವುಗೊಳಿಸಿದರೆ ಚಾರಿತ್ರಿಕ ನಿರಂತರತೆ ಕೈ ತಪ್ಪುತ್ತದೆ. ಹೀಗಾಗಿ, ಟಿಪ್ಪು ಪಾಠವನ್ನು ತೆಗೆಯಬಾರದು’ ಎಂದು ತಿಳಿಸಿದೆ.
ಈ ಹಿಂದೆ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ, ವಿಷಯ ತಜ್ಞರಾದ 10ನೇ ತರಗತಿ ಇತಿಹಾಸ ಪುಸ್ತಕ ತಯಾರಿಸಿದ್ದ ಪ್ರೊ.ಅಶ್ವತ್‌್ಥ ನಾರಾಯಣ, ಏಳನೇ ತರಗತಿ ಪುಸ್ತಕ ರಚನೆ ಮಾಡಿದ್ದ ಪ್ರೊ.ರಾಜೇಶ್ ಹಾಗೂ ಆರನೇ ತರಗತಿ ಪುಸ್ತಕದ ನೇತೃತ್ವ ಹಿಸಿದ್ದ ಪ್ರೊ. ಟಿ.ಆರ್. ಚಂದ್ರಶೇಖರ್ ಅವರನ್ನು ಒಳಗೊಂಡ ತಜ್ಞರ ಸಮಿತಿ ಟಿಪ್ಪು ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ನೀಡಿದೆ.
ಅಪ್ಪಚ್ಚು ರಂಜನ್ ಆಕ್ಷೇಪಗಳೇನು?
ಬಿಜೆಪಿಯ ಹಿರಿಯ ಶಾಸಕ ಅಪ್ಪಚ್ಚು ರಂಜನ್ ಅವರು ಟಿಪ್ಪು ಚಾರಿತ್ರ್ಯಹೀನ, ಮತಾಂಧನಾಗಿರುವುದರಿಂದ ವೈಭವೀಕರಿಸಿ ಮಕ್ಕಳಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಟಿಪ್ಪು ದೇಶಭಕ್ತನಲ್ಲ, ಕನ್ನಡಪ್ರೇಮಿಯಲ್ಲ. ಅವನೊಬ್ಬ ಮತಾಂಧ, ಕೊಲೆಗಡುಕನಾಗಿದ್ದಾನೆ. ಸದ್ಯ ಪುಸ್ತಕದಲ್ಲಿ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ. ಮತ್ತೊಂದು ಮುಖವನ್ನು ಕೂಡ ತೋರಿಸಬೇಕು. ಇಲ್ಲವಾದಲ್ಲಿ ತೆಗೆಯಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪರ್ಷಿಯನ್ ಭಾಷೆಯಲ್ಲಿ ವಿವಿಧ ಅಧಿಕಾರಿಗಳಿಗೆ ಟಿಪ್ಪು ಬರೆದಿರುವ ಪತ್ರಗಳು, ಫರ್ಗಾಟನ್ ಬುಕ್ಸ್ ಪ್ರಕಾಶನ ಪ್ರಕಟಿಸಿರುವ ಟಿಪ್ಪು ಸುಲ್ತಾನ್ ರಚಿತ ಪುಸ್ತಕ ‘ಸೆಲೆಕ್ಟ್ ಲೆಟರ್ಸ್ ಆಫ್ ಟಿಪ್ಪು ಸುಲ್ತಾನ್ ಟು ವೇರಿಯೇಸ್ ಪಬ್ಲಿಕ್ ಫಂಕ್ಷನರೀಸ್’ ಎಂಬ ಪುಸ್ತಕ ಹಾಗೂ ಬ್ರಿಟೀಷರ ಕಾಲದಲ್ಲಿ ‘ಕೀ ಪ್ಯಾಟ್ರಿಕ್’ ಎಂಬುವವರು ಟಿಪ್ಪು ಸುಲ್ತಾನ್ ಕುರಿತು ಬರೆದಿರುವ ದಾಖಲೆಗಳನ್ನು ಒದಗಿಸಲಾಗಿತ್ತು.
ಈ ದಾಖಲೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತು ಈಗ ಇರುವ ಎಲ್ಲ ಅಂಶಗಳು ಸಮರ್ಪಕವಾಗಿಲ್ಲ. ಅವುಗಳನ್ನು ತೆಗೆದು ಹಾಕಿ ಟಿಪ್ಪುವಿನ ನೈಜ ಇತಿಹಾಸ ತಿಳಿಸುವ ಪ್ರಯತ್ನ ಮಾಡಬೇಕು. ಇದು ಸಾಧ್ಯವಿಲ್ಲದಿದ್ದರೆ ಟಿಪ್ಪು ಸುಲ್ತಾನ್ ಕುರಿತಾದ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಪಠ್ಯದಿಂದ ತೆಗೆದು ಹಾಕಿ ದೇಶಪ್ರೇಮ, ರಾಷ್ಟ್ರಭಕ್ತಿಗೆ ಪ್ರೇರಣೆ ನೀಡುವ ಅಂಶಗಳನ್ನು ಸೇರಿಸಬೇಕು ಎಂದು ಅಪ್ಪಚ್ಚು ರಂಜನ್ ಆಗ್ರಹಿಸಿದ್ದರು.
ಟಿಪ್ಪು ಜಯಂತಿ ರದ್ದುಗೊಳಿಸಲು ಕಾರಣ ಹೇಳಿದ ಹೈ ಕೋರ್ಟ್