
ಆಡಳಿತ, ತೆರಿಗೆ ಸುಧಾರಣೆಗೆ ಈ ಬಾರಿಯ ಬಜೆಟ್‌ನಲ್ಲಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಗ್ರಾಮೀಣ ಪ್ರದೇಶದಲ್ಲಿ ಸಾಲ ಮರುಪಾವತಿಯಲ್ಲಿ ಶಿಸ್ತು ತರುವ ಉದ್ದೇಶದಿಂದ ಗ್ರಾಮೀಣ ಕ್ರೆಡಿಟ್ ಸ್ಕೋರ್, ಇನ್ನಷ್ಟು ಕಾನೂನು ನಿಬಂಧನೆಗಳನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡುವಂಥ ಅನೇಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.
ಹಣಕಾಸು ಕ್ಷೇತ್ರದ ಸುಧಾರಣೆ ಮತ್ತು ಅಭಿವೃದ್ಧಿ
ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ
ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಈ ಹಿಂದಿದ್ದ ಶೇ.74ರ ಮಿತಿಯನ್ನು ಈ ಬಜೆಟ್‌ನಲ್ಲಿ ಶೇ.100ಕ್ಕೆ ಹೆಚ್ಚಿಸಲಾಗಿದೆ. ಲಾಭಾಂಶವನ್ನು ಭಾರತದಲ್ಲೇ ಹೂಡಿಕೆ ಮಾಡುವ ಕಂಪನಿಗಳಿಗೆ ಈ ಮಿತಿ ಹೆಚ್ಚಳದ ಲಾಭ ಸಿಗಲಿದೆ. ಇದರ ಜತೆಗೆ ವಿದೇಶಿ ಹೂಡಿಕೆಗೆ ಸಂಬಂಧಿಸಿದ ಹಾಲಿ ಷರತ್ತುಗಳನ್ನು ಮರುಪರಿಶೀಲಿಸಲಾಗುವುದು ಮತ್ತು ಸರಳಗೊಳಿಸಲು ನಿರ್ಧರಿಸಲಾಗಿದೆ.
ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆ ವಿಸ್ತರಣೆ
ದೇಶಾದ್ಯಂತ ಬೃಹತ್ ಜಾಲ ಹೊಂದಿರುವ ಪೋಸ್ಟ್ ಆಫೀಸ್‌ನ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟು ವಿಸ್ತರಣೆಗೊಳ್ಳಲಿದೆ. ಸಾಂಸ್ಥಿಕ ಖಾತೆ ಸೇವೆಗಳು, ಇಎಂಐ ಸೇವೆಗಳು, ಡಿಬಿಟಿ, ಕಿರು ಸಂಸ್ಥೆಗಳಿಗೆ ಸಾಲ ಸೇವೆಗಳು, ಇನ್ಶೂರೆನ್ಸ್‌ಗಳನ್ನು ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯಾಪ್ತಿಗೆ ನೀಡುವ ಪ್ರಸ್ತಾಪವಿದೆ.
ಎನ್‌ಎಬಿಎಫ್‌ಐಡಿಯಿಂದ ಸಾಲ
ಮೂಲಸೌಲಭ್ಯ ಮತ್ತು ಅಭಿವೃದ್ಧಿಗೆ ಹಣಕಾಸು ಒದಗಿಸುವ ರಾಷ್ಟ್ರೀಯ ಬ್ಯಾಂಕ್(ಎನ್‌ಎಬಿಎಫ್‌ಐಡಿ) ಮೂಲಸೌಲಭ್ಯಗಳ ಕಾರ್ಪೊರೇಟ್ ಬಾಂಡ್‌ಗಳಿಗೆ ಭಾಗಶಃ ಸಾಲವರ್ಧನೆ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ಎನ್‌ಎಬಿಎಫ್‌ಐಡಿಯು ದೇಶದಲ್ಲಿ ಮೂಲಸೌಲಭ್ಯಕ್ಕೆ ಹಣಕಾಸು ಬೆಂಬಲ ನೀಡುವ ಸಂಸ್ಥೆಯಾಗಿದೆ.
ಗ್ರಾಮೀಣರಿಗೂ ಕ್ರೆಡಿಟ್ ಸ್ಕೋರ್
\Bಗ್ರಾಮೀಣ ಪ್ರದೇಶದಲ್ಲಿ ಸಾಲ ಮರುಪಾವತಿಯಲ್ಲಿ ಶಿಸ್ತು ತರುವ ಉದ್ದೇಶದಿಂದ \Bಸಾರ್ವಜನಿಕ ಬ್ಯಾಂಕ್‌ಗಳು ಪ್ರತ್ಯೇಕ ಗ್ರಾಮೀಣ ಕ್ರೆಡಿಟ್ ಸ್ಕೋರ್ ಗೆ ಸಂಬಂಧಿಸಿದ ರೂಪುರೇಷೆಗಳನ್ನು ಅಭಿವೃದ್ಧಿಪಡಿಸಲಿವೆ. ಸ್ವಸಹಾಯ ಸಂಘಗಳು ಹಾಗೂ ಗ್ರಾಮೀಣ ಪ್ರದೇಶದ ಜನರ ಸಾಲದ ಅಗತ್ಯವನ್ನು ಪೂರೈಸಲು ಈ ಕ್ರೆಡಿಟ್ ಸ್ಕೋರ್ ಅನುಕೂಲ ಮಾಡಿಕೊಡಲಿದೆ.
ಪಿಂಚಣಿ ಕ್ಷೇತ್ರದಲ್ಲಿ ಪ್ರತ್ಯೇಕ ವೇದಿಕೆ
ಪಿಂಚಣಿ ಸೇವೆಗಳ ನಿಯಂತ್ರಣ ಸಮನ್ವಯ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ವೇದಿಕೆಯೊಂದು ರಚನೆಯಾಗಲಿದೆ. ಉದ್ಯೋಗಿಯ ನಿವೃತ್ತಿ ನಂತರದ ಆದಾಯದಲ್ಲಿ ಸ್ಥಿರತೆ ತರುವ ಉದ್ದೇಶದಿಂದ ಈ ವೇದಿಕೆಯನ್ನು ಸರ್ಕಾರವೇ ರಚಿಸಲಿದೆ.
ಕೆವೈಸಿ ಪ್ರಕ್ರಿಯೆ ಇನ್ನಷ್ಟು ಸರಳ
ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಂಬಂಧ ಈ ಹಿಂದಿನ ಘೋಷಣೆಯಂತೆ ಪರಿಷ್ಕೃತ ಕೇಂದ್ರೀಯ ಕೆವೈಸಿ ರಿಜಿಸ್ಟ್ರಿ 2025ರಲ್ಲಿ ಬಿಡುಗಡೆ ಆಗಲಿದೆ. ಕಾಲಕಾಲಕ್ಕೆ ಅಪ್‌ಡೇಟ್ ಆಗುವಂತೆ ಈ ರಿಜಿಸ್ಟ್ರಿಯನ್ನು ಸಿದ್ಧಪಡಿಸಲಾಗುವುದು.
ಕಂಪನಿಗಳ ವಿಲೀನ
ಕಂಪನಿಗಳ ವಿಲೀನಕ್ಕೆ ಪ್ರಕ್ರಿಯೆಗೆ ತ್ವರಿತಗತಿಯಲ್ಲಿ ಒಪ್ಪಿಗೆ ಸಿಗುವಂಥ ವ್ಯವಸ್ಥೆಯು ಜಾರಿಯಾಗಲಿದೆ. ಉದ್ದಿಮೆ ಸ್ನೇಹಿ ಕ್ರಮದ ಭಾಗವಾಗಿ ವಿಲೀನ ಪ್ರಕ್ರಿಯೆಲ್ಲಿ ವಿಳಂಬವಾಗದಂತೆ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Union Budget 2025: ಮಧ್ಯಮ ವರ್ಗದವರಿಗೆ ಮೋದಿ ಬಂಪರ್ ಕೊಡುಗೆ,ಆದಾಯ ತೆರಿಗೆಯಲ್ಲಿನ ಮಹತ್ವದ ಬದಲಾವಣೆ ಬಗ್ಗೆ ತಿಳಿಯಿರಿ!
ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು
ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆ 2024ರಲ್ಲಿ ಎರಡು ದೇಶಗಳ ಜತೆಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮಾಡಲಾಗಿದೆ. ''ಭಾರತದ ಅಭಿವೃದ್ಧಿ ಮೊದಲು'' ಎಂಬ ಪರಿಕಲ್ಪನೆಯೊಂದಿಗೆ ಮತ್ತು ವಿದೇಶಿ ಬಂಡವಾಳದ ಹರಿವಿಗೆ ಪೂರಕವಾಗಿ ಈ ಒಪ್ಪಂದದಲ್ಲಿ ಬದಲಾವಣೆ ಮಾಡಿ ಒಪ್ಪಂದವನ್ನು ಇನ್ನಷ್ಟು ಹೂಡಿಕೆದಾರರ ಸ್ನೇಹಿ ಮಾಡಲಾಗುವುದು.
ನಿಯಂತ್ರಣ ಸುಧಾರಣೆ
ಕಳೆದ 10 ವರ್ಷಗಳಲ್ಲಿ ಹಣಕಾಸು ಮತ್ತು ಹಣಕಾಸೇತರ ವಿಚಾರಗಳಲ್ಲಿ ಕೇಂದ್ರ ಸರ್ಕಾರ ವ್ಯಾಪಾರ ಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಈ ನಿಯಂತ್ರಣ ಕ್ರಮಗಳು ತಾಂತ್ರಿಕ ಆವಿಷ್ಕಾರ ಮತ್ತು ಅಂತಾರಾಷ್ಟ್ರೀಯ ನೀತಿಗೆ ಅನುಗುಣವಾಗಿರುವಂತೆ ಸರ್ಕಾರ ನೋಡಿಕೊಳ್ಳಲು ಬದ್ಧವಾಗಿದೆ. ಹಿಂದಿನ ಕಾನೂನಿಗನುಗುಣವಾಗಿ ರಚಿಸಲಾದ ನಿಯಂತ್ರಣ ಕ್ರಮಗಳನ್ನು ಪರಿಷ್ಕರಣೆಗೊಳ್ಳಲಿದೆ. 21ನೇ ಶತಮಾನಕ್ಕೆ ಆಧುನಿಕ, ಚಲನಶೀಲ, ಜನಸ್ನೇಹಿ ಮತ್ತು ನಂಬಿಕೆ ಆಧಾರಿತ ನಿಯಂತ್ರಣ ಕ್ರಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎ) ಉನ್ನತಮಟ್ಟದ ಸಮಿತಿ ರಚನೆ
ಹಣಕಾಸೇತರ ಕ್ಷೇತ್ರಗಳ ನಿಯಂತ್ರಣಗಳು, ಪ್ರಮಾಣಪತ್ರಗಳು, ಪರವಾನಗಿಗಳು ಮತ್ತು ಅನುಮತಿಗಳ ಪರಾಮರ್ಶೆಗೆ ಉನ್ನತಮಟ್ಟದ ನಿಯಂತ್ರಣ ಸುಧಾರಣಾ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಒಂದು ವರ್ಷದೊಳಗೆ ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಮಾಡಬೇಕಿದೆ. ಪರಿಶೀಲನೆ ಮತ್ತು ಪಾಲನೆ ವಿಚಾರದಲ್ಲಿ ನಂಬಿಕೆ ಆಧಾರಿತ ಆರ್ಥಿಕ ಆಡಳಿತ ಹಾಗೂ ಉದ್ಯಮ ಸ್ನೇಹಿ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡುವುದೇ ಇದರ ಉದ್ದೇಶ ಆಗಿದೆ. ರಾಜ್ಯಗಳು ಕೂಡ ಈ ಪ್ರಯತ್ನದಲ್ಲಿ ಕೈಜೋಡಿಸಲು ಅವಕಾಶ ಮಾಡಿಕೊಡಲಾಗುವುದು.
ರಾಜ್ಯಗಳ ಹೂಡಿಕೆ ಸ್ನೇಹಿ ಇಂಡೆಕ್ಸ್
ಸ್ಪರ್ಧಾತ್ಮಕ ಸಹಭಾಗಿತ್ವದ ಒಕ್ಕೂಟ ವ್ಯವಸ್ಥೆಯ ಸ್ಪೂರ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಗಳ ಹೂಡಿಕೆ ಸ್ನೇಹಿ ಇಂಡೆಕ್ಸ್ ಅನ್ನು 2025ರಲ್ಲಿ ಬಿಡುಗಡೆ ಮಾಡಲಾಗುವುದು. ಇದರಡಿ ಹೂಡಿಕೆಯ ಸಾಮರ್ಥ್ಯಕ್ಕನುಗುಣವಾಗಿ ರಾಜ್ಯಗಳಿಗೆ ರ್‍ಯಾಂಕಿಂಗ್ ಅನ್ನು ನೀಡಲಿದೆ. ಈ ಮೂಲಕ ಹೂಡಿಕೆ ಆಕರ್ಷಿಸಲು ರಾಜ್ಯ ರಾಜ್ಯಗಳ ನಡುವೆ ಸ್ಪರ್ಧಾತ್ಮಕತೆಗೆ ಪ್ರೋತ್ಸಾಹ ನೀಡುವ ಗುರಿ ಇದೆ.
ಎಫ್‌ಎಸ್‌ಡಿಸಿ ವ್ಯವಸ್ಥೆ
ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಕೌನ್ಸಿಲ್( ಎಫ್‌ಎಸ್‌ಡಿಸಿ) ಅಡಿ ಹೊಸ ವ್ಯವಸ್ಥೆಯೊಂದು ರಚನೆಗೊಳ್ಳಲಿದೆ. ಇದು ಹಾಲಿ ಹಣಕಾಸು ನಿಯಂತ್ರಣಗಳ ಪರಿಣಾಮವನ್ನು ಮೌಲ್ಯಮಾಪನ ಮಾಡಲಿದೆ ಮತ್ತು ಹಣಕಾಸು ಕ್ಷೇತ್ರದ ಅಭಿವೃದ್ದಿ ಮತ್ತು ಜವಾಬ್ದಾರಿಗೆ ಸಂಬಂಧಿಸಿದ ರೂಪುರೇಷೆಗಳನ್ನು ರೂಪಿಸಲಿದೆ.
ಜನ್ ವಿಶ್ವಾಸ ವಿಧೇಯಕ 2.0
ಜನ ವಿಶ್ವಾಸ ಕಾಯ್ದೆ 2023ರಲ್ಲಿ ಸುಮಾರು 180ಕ್ಕೂ ಹೆಚ್ಚು ಕಾನೂನು ನಿಬಂಧನೆಗಳನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದೀಗ ಕೇಂದ್ರ ಸರ್ಕಾರ ಹೊಸದಾಗಿ ಜನ್ ವಿಶ್ವಾಸ್ ವಿಧೇಯಕ 2.0 ಅನ್ನು ಮತ್ತೆ ಜಾರಿಗೆ ತರಲಿದ್ದು, ಇದು ವಿವಿಧ ಕಾನೂನುಗಳಲ್ಲಿರುವ 100ಕ್ಕೂ ಹೆಚ್ಚು ನಿಬಂಧನೆಗಳನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ