ಐತಿಹಾಸಿಕ ಜುಮ್ಮಾ ಮಸೀದಿಯಲ್ಲಿ ಅನಧಿಕೃತ ಮದರಸಾ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

By Kannadaprabha News  |  First Published Jan 18, 2024, 2:37 PM IST

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಐತಿಹಾಸಿಕ ಜುಮ್ಮಾ ಮಸೀದಿಯಲ್ಲಿ ಅನಧಿಕೃತವಾಗಿ ಮದರಸ ನಡೆಯುತ್ತಿರುವುದನ್ನು ತಡೆ ಹಿಡಿಯಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.


ಬೆಂಗಳೂರು (ಜ.18) : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಐತಿಹಾಸಿಕ ಜುಮ್ಮಾ ಮಸೀದಿಯಲ್ಲಿ ಅನಧಿಕೃತವಾಗಿ ಮದರಸ ನಡೆಯುತ್ತಿರುವುದನ್ನು ತಡೆ ಹಿಡಿಯಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹೊಸ ಕಬ್ಬಾಳು ಗ್ರಾಮದ ನಿವಾಸಿ ಅಭಿಷೇಕ್‌ ಗೌಡ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

Tap to resize

Latest Videos

 

ಮಂಡ್ಯ: ಮೈಸೂರು-ಬೆಂಗಳೂರು ಎಕ್ಸಪ್ರೆಸ್‌ವೇನಲ್ಲಿ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರ ದುರ್ಮರಣ

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶರು, ಕರ್ನಾಟಕ ಕಂದಾಯ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜುಮ್ಮಾ ಮಸೀದಿಯನ್ನು ಮೈಸೂರು ಅರಸ ಟಿಪ್ಪು ಸುಲ್ತಾನ್‌ ತನ್ನ ಆಡಳಿತಾವಧಿಯಲ್ಲಿ ನಿರ್ಮಿಸಿದ್ದರಿಂದ ಈ ಮಸೀದಿಯನ್ನು ಐತಿಹಾಸಿಕ ಮತ್ತು ಪ್ರಾಚೀನ ಸ್ಮಾರಕ ಎಂಬುದಾಗಿ ಭಾರತೀಯ ಸರ್ವೇಕ್ಷಣಾ ಇಲಾಖೆ ಘೋಷಿಸಿ, ಸಂರಕ್ಷಣೆ ಮಾಡುತ್ತಿದೆ. ಆದರೆ, ಈ ಸ್ಮಾರಕದ ಒಳಗೆ ಅನಧಿಕೃತವಾಗಿ ವಸತಿ ಮದರಸ ನಡೆಸಲಾಗುತ್ತಿದೆ. ಅಲ್ಲಿ ಸುಮಾರು 50-60 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾ, ಅಲ್ಲಿಯೇ ತಂಗಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಮಸೀದಿ ಆವರಣದಲ್ಲಿಯೇ ವಿದ್ಯಾರ್ಥಿಗಳಿಗೆ ಹಾಗೂ ಮದಸರ ಸಿಬ್ಬಂದಿಗೆ ಅಡುಗೆ ಮಾಡಲಾಗುತ್ತದೆ. ಶೌಚಾಲಯ, ಸ್ನಾನ ಗೃಹ, ವಿಶ್ರಾಂತಿ ಕೋಣೆ, ಅಡುಗೆ ಮನೆ ನಿರ್ಮಿಸಲಾಗಿದೆ. ಬಟ್ಟೆಗಳನ್ನು ಶುಚಿಗೊಳಿಸಿ ಒಣಗಿ ಹಾಕಲಾಗುತ್ತಿದೆ. ಹಲವು ತಾತ್ಕಾಲಿಕ ಕಟ್ಟಡ ನಿರ್ಮಿಸಿ, ಸ್ಮಾರಕವನ್ನು ಹಾನಿ ಮಾಡಲಾಗಿದೆ. ಇದು ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಜಾಗಗಳು, ಉಳಿಕೆಗಳ ಕಾಯ್ದೆ-1958ರ ಸೆಕ್ಷನ್‌ 7, 8 ಮತ್ತು 16ರ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮುಳಬಾಗಿಲಲ್ಲಿ ರಾಮನ ಬ್ಯಾನರ್ ಹರಿದುಹಾಕಿದ ಕಿಡಿಗೇಡಿಗಳು!

ಈ ಎಲ್ಲ ವಿಚಾರಗಳು ಕೇಂದ್ರ ಸರ್ಕಾರ, ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ, ರಾಜ್ಯ ಸರ್ಕಾರದ ಮೂಗಿನ ಕೆಳಗೆ ನಡೆಯುತ್ತಿದೆ. ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿ, ಮಸೀದಿಯಲ್ಲಿನ ಒತ್ತುವರಿ ತೆರವುಗೊಳಿಸಲು 2022ರ ಮೇ 20ರಂದು ಮನವಿ ಪತ್ರ ನೀಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ಜುಮ್ಮಾ ಮಸೀದಿಯಲ್ಲಿ ಮದರಸ ನಡೆಸುತ್ತಿರುವುದನ್ನು ತಡೆಹಿಡಿಯಬೇಕು. ಮಸೀದಿಯನ್ನು ಪ್ರಾಚೀನ ಸ್ಮಾರಕವಾಗಿ ಸಂರಕ್ಷಣೆ ಮಾಡಬೇಕು. ಮಸೀದಿಯಲ್ಲಿ ನಿರ್ಮಿಸಲಾಗಿರುವ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

click me!