North Karnataka Demand: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಾಗದಿದ್ದರೆ ಪದೇ ಪದೇ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಡುತ್ತೇನೆ ಎಂದು ಸಚಿವ ಕತ್ತಿ ಹೇಳಿದ್ದಾರೆ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜುಲೈ 26): ಉತ್ತರ ಕರ್ನಾಟಕದ (North Karnataka) ಅಭಿವೃದ್ಧಿ ನಿರ್ಲಕ್ಷ ವಹಿಸಿದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯ ಕೂಗು ನಾನು ಪದೇ ಪದೇ ಎತ್ತುವದು ನಿಜ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪುನರುಚ್ಚಿಸಿದ್ದಾರೆ. ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಕಳೆದ 20 ವರ್ಷಗಳಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಇಡುತ್ತಿದ್ದೇನೆ" ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ನನ್ನ ಕೂಗು: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಾಗದಿದ್ದರೆ ಪದೇ ಪದೇ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಡುತ್ತೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಪ್ರತ್ಯೇಕ ರಾಜ್ಯದ ಕೂಗಿನ ಹಿಂದೆ ಇರೋದು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ಹೊರತು ಬೇರೆನು ಅಲ್ಲ. ಯಾವಾಗ್ಯಾವಾಗ ಉತ್ತರ ಕರ್ನಾಟಕ ಅಭಿವೃದ್ಧಿಯಾಗೋದಿಲ್ಲವೋ ಆಗೆಲ್ಲ ಈ ಕೂಗು ಎತ್ತುತ್ತೇನೆ ಎಂದು ಕತ್ತಿ ಹೇಳಿದರು.
ಪ್ರತ್ಯೇಕ ಕೂಗಿಗೆ ಉತ್ತರ ಕರ್ನಾಟಕ ಶಾಸಕರ ಬೆಂಬಲ: ನನ್ನ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಉತ್ತರ ಕರ್ನಾಟಕದ ಹಲವು ಜನಪ್ರತಿನಿಧಿಗಳ ಬೆಂಬಲವಿದೆ ಎನ್ನುವ ಮೂಲಕ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೂಗು ನನ್ನೊಬ್ಬನದಾಗಿದ್ದರು ಬೆಂಬಲಕ್ಕೆ ಈ ಭಾಗದ ಶಾಸಕರಿದ್ದಾರೆ.
ಗ್ರಾಮೀಣ ರಸ್ತೆಗಳ ನವೀಕರಣಕ್ಕೆ ಹಸಿರು ನಿಶಾನೆ; ಸಚಿವ ಉಮೇಶ ಕತ್ತಿ ಪ್ರಯತ್ನಕ್ಕೆ ಫಲ
ಆದರೆ ಅವರು ನೇರವಾಗಿ ಧ್ವನಿ ಎತ್ತಲು ಹಿಂಜರಿಯುತ್ತಿದ್ದಾರೆ. ಏಕೆಂದರೆ ಅವರಿಗೆ ಮತ್ತೊಮ್ಮೆ ಶಾಸಕರಾಗಬೇಕು ಎನ್ನುವ ಹಂಬಲವಿದೆ. ಆದರೆ ತಾವು ಮಾತ್ರ ಇದಕ್ಕೆ ಹೆದರುವದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಉತ್ತರ ಕರ್ನಾಟಕದ ಶಾಸಕರ ಪಡೆ ತಮ್ಮ ಕೂಗಿನ ಜೊತೆಗಿದೆ ಅನ್ನೋದನ್ನ ಸೂಕ್ಷ್ಮ ರೀತಿಯಲ್ಲಿ ಹೇಳಲು ಕತ್ತಿ ಪ್ರಯತ್ನಿಸಿದರು.
ಈಗಲೂ ನಾನು ಸಿಎಂ ಸ್ಥಾನದ ಆಕಾಂಕ್ಷಿ: ಇನ್ನೂ 15ವರ್ಷ ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದ ಉಮೇಶ್ ಕತ್ತಿ, ಸಿಎಂ ರೇಸ್ ನಲ್ಲಿ ನಾನು ಇದ್ದೇನೆ ಎನ್ನುವ ಮೂಲಕ ತಾವು ಸಿಎಂ ಆಗಬೇಕು ಎನ್ನುವ ಕನಸನ್ನ ಬಿಚ್ಚಿಟ್ಟರು.
ತಾವು ಮುಂದಿನ ಸಿಎಂ ರೇಸ್ ನಲ್ಲಿ ಇದ್ದೀರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಕತ್ತಿ, ನಾನು ಇನ್ನೂ 15ವರ್ಷ ಬಿಜೆಪಿಯಲ್ಲಿ ಇರುತ್ತೇನೆ ನನ್ನ ಹಣೆಬರಹದಲ್ಲಿ ಸಿಎಂ ಆಗುವ ಅದೃಷ್ಟವಿದ್ದರೆ, ಖಂಡಿತ ಸಿಎಂ ಆಗುತ್ತೇನೆ ಎಂದರು. ಈ ಮೂಲಕ ಮುಂದೆ ಸಿಎಂ ಆಗುವ ಆಸೆಯನ್ನು ಹೊರ ಹಾಕಿದರು.
ಕಾಂಗ್ರೆಸ್ ಒಡೆದು ಚೂರು-ಚೂರು ಆಗುತ್ತೆ: ಕಾಂಗ್ರೆಸ್ ನಲ್ಲಿ ಸಿಎಂ ಸೀಟ್ ಗಾಗಿ ರೇಸ್ ವಿಚಾರವಾಗಿಯೂ ಮಾತನಾಡಿದ ಸಚಿವ ಉಮೇಶ ಕತ್ತಿ, ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕಾಗಿ ಕಾದಾಟ ನಡೆದಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಡೆಯುವೆ ಮುಸುಕಿನ ಗುದ್ದಾಟ ನಡೆದಿದೆ. ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ ಆ ಮೇಲೆ ಸಿಎಂ ಕುರ್ಚಿಗೆ ಬಡಿದಾಡಲಿ, ಅದು ಬಿಟ್ಟು ಕೂಸು ಹುಟ್ಟುವ ಮುನ್ನ ಕುಲಾಯಿ ಹೋಲದಂತೆ ಮಾಡುತ್ತಿದ್ದಾರೆ ಎಂದು ಕತ್ತಿ ಕಾಂಗ್ರೆಸ್ ನಾಯಕರ ಬಗ್ಗೆ ವ್ಯಂಗ್ಯವಾಡಿದರು.
ಅಲ್ಲದೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಒಡೆಯಬಹುದು, ಒಡೆದು ಚೂರು ಚೂರು ಆಗಬಹುದು ಎಂದಿದ್ದಾರೆ. ಸಿಎಂ ಸ್ಥಾನದ ಕುರಿತಾಗಿಯೇ ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ಕಾಂಗ್ರೆಸ್ ಒಡೆಯಬಹುದು ಎಂದು ಉಮೇಶ್ ಕತ್ತಿ ಭವಿಷ್ಯ ನುಡಿದಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಸಚಿವ ಕತ್ತಿ ಹೇಳಿಕೆಗೆ ಮಹೇಶ್ ಜೋಶಿ ಕಿಡಿ
ಬಿಜೆಪಿಗೆ ಸ್ಪಷ್ಟ ಬಹುಮತ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ಹೊಡೆದಾಟ ನಡೆಯುತ್ತಿದ್ದು, ಹೈಕಮಾಂಡ್ ಎಲ್ಲರಿಗೂ ವಾರ್ನಿಂಗ್ ಮಾಡಿದೆ. ಜಮೀರ್ ಅಹ್ಮದ್‌ಗು ವಾರ್ನಿಂಗ್ ನೀಡಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಸರಿ ಇಲ್ಲ. ಈ ಬಾರಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಸರಿ ಇಲ್ಲದಿರೋದರ ಲಾಭವನ್ನ ಬಿಜೆಪಿ ಪಡೆದುಕೊಳ್ಳಲಿದೆ ಅನ್ನೋದನ್ನ ಪರೋಕ್ಷವಾಗಿ ಉಮೇಶ ಕತ್ತಿ ಹೇಳಿದ್ದಾರೆ