ಬೆಲೆ ಏರಿಕೆ ನಡುವೆಯೇ ಯುಗಾದಿ ಹಬ್ಬಕ್ಕೆ ಹೂ, ಹಣ್ಣು ಖರೀದಿ ಜೋರು! ಇಂದಿನ ಬೆಲೆಗಳ ಪಟ್ಟಿ ಇಲ್ಲಿದೆ

Kannadaprabha News   | Kannada Prabha
Published : Mar 19, 2026, 06:23 AM IST
Ugadi 2026 Heavy Crowds for Flower Fruit Shopping Despite Rising Prices rav

ಸಾರಾಂಶ

ನೂತನ ವರ್ಷದ ಮೊದಲ ಹಬ್ಬ ಯುಗಾದಿ ಆಚರಣೆಗೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಏರಿಕೆಯ ನಡುವೆಯೂ, ಜನರು ಹೂವು, ಹಣ್ಣು, ಹೊಸ ಬಟ್ಟೆ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸುವುದರಲ್ಲಿ ತೊಡಗಿದ್ದು, ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂತು.

ಬೆಂಗಳೂರು (ಮಾ.19): ನೂತನ ವರ್ಷದ ಮೊದಲ ಹಬ್ಬ ‘ಯುಗಾದಿ’ ಸಂಭ್ರಮಾಚರಣೆಗೆ ನಗರದಲ್ಲಿ ಬುಧವಾರ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಏರಿಕೆ ನಡುವೆಯೂ ಜನರು ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.

ವರ್ಷದ ಮೊದಲ ಹಬ್ಬ ಇದಾಗಿದ್ದು ಹೊಸ ಬಟ್ಟೆ, ಹೂವು, ಹಣ್ಣು, ತರಕಾರಿ, ದಿನಸಿ, ಪೂಜಾ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಖರೀದಿಯಲ್ಲಿ ತೊಡಗಿದ್ದರು. ಇದರಿಂದಾಗಿ ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಮಡಿವಾಳ, ವಿಜಯನಗರ, ಜಯನಗರ ಸೇರಿದಂತೆ ನಗರದ ಮಾರುಕಟ್ಟೆಯಲ್ಲಿ ಭರ್ಜರಿ ವಹಿವಾಟು ನಡೆಯಿತು.

ಬೇರೆ ಹಬ್ಬಗಳಿಗೆ ಹೋಲಿಸಿದರೆ ಯುಗಾದಿಗೆ ತರಕಾರಿಯಲ್ಲಿ ಅಷ್ಟೊಂದು ಬೆಲೆ ಏರಿಕೆ ಕಂಡುಬರಲಿಲ್ಲ. ಆದರೆ ಹೂವು, ಹಣ್ಣುಗಳ ಬೆಲೆ ಅಧಿಕವಾಗಿತ್ತು. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲವೇ ಪ್ರಧಾನವಾಗಿದೆ. ಇದರಿಂದಾಗಿ ಬೇವಿನ ಸೊಪ್ಪು ಒಂದು ಕಟ್ಟು 20 ರು. ಹಾಗೂ ಮಾವಿನ ಸೊಪ್ಪು 30 ರುಪಾಯಿಗೆ ಮಾರಾಟವಾಗುತ್ತಿತ್ತು. ಜನರು ಚೌಕಾಸಿ ಮಾಡುತ್ತಾ ಖರೀದಿಯಲ್ಲಿ ತೊಡಗಿದ್ದರು.

ಹೊಸ ಬಟ್ಟೆ ಖರೀದಿ

ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿ ಧರಿಸುವ ಸಂಪ್ರದಾಯ ಇರುವುದರಿಂದ ಬುಧವಾರ ಚಿಕ್ಕಪೇಟೆ, ಜಯನಗರ, ಮೆಜೆಸ್ಟಿಕ್‌ ಸೇರಿದಂತೆ ಶಾಪಿಂಗ್‌ ಮಾಲ್‌ಗಳಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಟ್ಟೆ ಖರೀದಿಗೆ ಮುಂದಾಗಿದ್ದರು. ಇದರಿಂದಾಗಿ ಪ್ರಮುಖ ಶಾಪಿಂಗ್‌ ಸ್ಥಳಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

ಎಲ್ಲ ಹಬ್ಬಗಳ ಸಂದರ್ಭದಲ್ಲಿ ಹೂಗಳ ಬೆಲೆ ಹೆಚ್ಚಳವಾಗುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ಯುಗಾದಿಗೆ ಬೆಲೆ ಅಷ್ಟೇನೂ ಅಧಿಕವಾಗಿಲ್ಲ. ಕೆಜಿ ಗುಲಾಬಿ ಹೂ 200 ರಿಂದ 250 ರುಪಾಯಿ, ಸೇವಂತಿಗೆ 200 ರು, ಮಲ್ಲಿಗೆ ಮತ್ತು ಕನಕಾಂಬರ ಕೆಜಿಗೆ ತಲಾ ಸಾವಿರ ರುಪಾಯಿ ಇತ್ತು. ಪಚ್ಚಬಾಳೆ ಕೆಜಿಗೆ 40 ರು, ಏಲಕ್ಕಿ ಬಾಳೆ 80 ರು, ದ್ರಾಕ್ಷಿ 130, ದಾಳಿಂಬೆ 240, ಕಿತ್ತಳೆ 120, ಕಲ್ಲಂಗಡಿ ಹಣ್ಣು ಕೆಜಿಗೆ 25 ರಿಂದ 30 ರುಪಾಯಿಗೆ ಮಾರಾಟ ಮಾಡಲಾಗುತ್ತಿತ್ತು.

ಹಬ್ಬಕ್ಕೆ ಹೋಳಿಗೆ ತಯಾರಿಸುವುದು ಸಾಮಾನ್ಯವಾಗಿದ್ದು ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಅಡುಗೆ ಎಣ್ಣೆಯ ಬೆಲೆ ಹೆಚ್ಚಳವಾಗಿದ್ದು ಗ್ರಾಹಕರಲ್ಲಿ ಒಂದಷ್ಟು ಬೇಸರ ಉಂಟು ಮಾಡಿತು. ಬೆಲ್ಲ, ಮೈದಾಹಿಟ್ಟಿನ ಬೆಲೆಯೂ ಸ್ವಲ್ಪ ಅಧಿಕವಾಗಿರುವುದು ಕಂಡುಬಂತು.

ತರಕಾರಿ ಸೋವಿ, ಹೂ ಸ್ವಲ್ಪ ದುಬಾರಿ

ಅನಿಲ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಒಂದಷ್ಟು ಹೋಟೆಲ್‌ಗಳು ಬಂದ್‌ ಆಗಿದ್ದು ಮತ್ತಷ್ಟು ಹೋಟೆಲ್‌ಗಳು ಮೆನು ಕಡಿತ ಮಾಡಿರುವುದರಿಂದ ಹೋಟೆಲ್‌ನವರು ತರಕಾರಿ ಖರೀದಿಗೆ ಮುಂದಾಗುತ್ತಿಲ್ಲ. ಇದರ ಪರಿಣಾಮವಾಗಿ ಯುಗಾದಿ ಹಬ್ಬವಾಗಿದ್ದರೂ ತರಕಾರಿ ಬೆಲೆ ಇಳಿಕೆ ಕಂಡಿದೆ. ಟೊಮ್ಯಾಟೊ, ಕ್ಯಾರೇಟ್‌, ನುಗ್ಗೆಕಾಯಿ, ಆಲೂಗಡ್ಡೆ, ಬೀನ್ಸ್‌ ಸೇರಿದಂತೆ ತರಕಾರಿಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿಲ್ಲ. ಮಾಮೂಲಿಯಾಗಿ ಹಬ್ಬದ ಸಮಯದಲ್ಲಿ ಹೂವಿಗೆ ಎಷ್ಟು ದರವಿರುತ್ತಿತ್ತೋ ಅದರಲ್ಲಿ ಒಂದಷ್ಟು ಮಾತ್ರ ಹೆಚ್ಚಳವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ! ಸಾಕು ನಾಯಿಗೋ, ಬೀದಿ ನಾಯಿಗಳ ಮೇಲೋ?
Mangaluru: ಎಂಆರ್‌ಪಿಎಲ್ ಹೊಸ ಮೈಲಿಗಲ್ಲು 1000ನೇ ಪೆಟ್‌ಕೋಕ್ ರೈಲು ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ರವಾನೆ