
ಉಡುಪಿ (ನ.24): ಯಕ್ಷಗಾನ ಕಲಾವಿದರ ಸಲಿಂಗಕಾಮ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಉಡುಪಿಯ ಪೇಜಾವರ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಿರುಗೇಟು ನೀಡಿದ್ದಾರೆ. ಯಕ್ಷಗಾನ ಕಲಾವಿದರು ಮಹಾನ್ ಕಲಾತಪಸ್ವಿಗಳು, ಯಕ್ಷಗಾನವನ್ನು ಮೆಚ್ಚುವ ಎಲ್ಲರಿಗೂ ಇದೇ ಅಭಿಪ್ರಾಯವಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸಮಾಜದಲ್ಲಿ ಹಿರಿಯರು, ಸಾಹಿತಿಗಳು ಎಂದು ಅನಿಸಿಕೊಂಡಿರುವ ಒಬ್ಬರು ಕಲಾ ತಪಸ್ವಿಗಳ ಬಗ್ಗೆ ಕೀಳು ಅಭಿರುಚಿಯ ಮಾತುಗಳನ್ನಾಡಿದ್ದಾರೆ. ಅವರ ಈ ಹೇಳಿಕೆ ಆಕಾಶವನ್ನು ನೋಡಿ ಉಗುಳಿದ ಹಾಗಾಗಿದೆ ಎಂದು ಪೇಜಾವರ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. ಅವರ ಮಾತಿನಿಂದ ಯಾವುದೇ ಕಲಾರಸಿಕರು ಕಿಂಚಿತ್ತೂ ವಿಚಲಿತರಾಗಲಿಲ್ಲ. ಕಲಾವಿದರು ಕೂಡ ಈ ಹೇಳಿಕೆಯ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.
ಯಕ್ಷಗಾನ ಕಲಾವಿದರ ಸಾಧನೆ ಮತ್ತು ಗುಣಗಳನ್ನು ಇಡೀ ಸಮಾಜ ಗೌರವಿಸುತ್ತದೆ. ಕಲಾವಿದರಾದ ನಿಮ್ಮ ಕಾಲು ಮುಟ್ಟಿ ನಮಸ್ಕರಿಸಬೇಕು, ಅಂತಹ ಯೋಗ್ಯತೆ ಇರುವವರು ನೀವು. ಇಡೀ ಸಮಾಜ ನಿಮ್ಮನ್ನು ಹಾಡಿ ಹೊಗಳುತ್ತಿದೆ ಎಂದು ಪೇಜಾವರ ಶ್ರೀಗಳು ಯಕ್ಷಗಾನ ಕಲಾವಿದರಿಗೆ ಬೆಂಬಲವಾಗಿ ನಿಂತು ಪುರುಷೋತ್ತಮ ಬಿಳಿಮಲೆ ಅವರ ಹೇಳಿಕೆಯನ್ನು ತಳ್ಳಿಹಾಕಿದರು.
ಪುರುಷೋತ್ತಮ ಬಿಳಿಮಲೆ ಹೇಳಿಕೆ ವಿವಾದ:
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಅವರು, ಕರಾವಳಿ ಭಾಗದ ಜನಪ್ರಿಯ ಕಲೆಯಾದ ಯಕ್ಷಗಾನದ ಸ್ತ್ರೀ ವೇಷಧಾರಿ ಕಲಾವಿದರ ನಡುವಿನ ಸಲಿಂಗಕಾಮ ಸಂಬಂಧಗಳ ಕುರಿತು ನೇರವಾಗಿ ಮತ್ತು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ತೀವ್ರ ವಿವಾದಕ್ಕೆ ಕಾರಣರಾಗಿದ್ದರು. ಅವರ ಈ ಹೇಳಿಕೆಯು ಯಕ್ಷಗಾನ ಕಲಾವಿದರು ಮತ್ತು ಕಲಾರಸಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿತ್ತು, ಈ ಹಿನ್ನೆಲೆಯಲ್ಲಿ ಉಡುಪಿಯ ಪೇಜಾವರ ಶ್ರೀಗಳು ಬಿಳಿಮಲೆ ಅವರಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ