ಬ್ರಾಹ್ಮಣರಿಗೆ ಹೆಣ್ಣು ಸಿಗ್ತಿಲ್ಲವೆಂದು ಅನಾಥಾಶ್ರಮದ ಹುಡುಗಿಯರನ್ನು ಮದುವೆಯಾದ ಅರ್ಚಕರು!

By Sathish Kumar KHFirst Published Dec 20, 2023, 8:59 PM IST
Highlights

ಬ್ರಾಹ್ಮಣ ಸಮುದಾಯದ ಅರ್ಚಕ ವೃತ್ತಿ ಹಾಗೂ ಕೃಷಿಕ ವೃತ್ತಿ ಮಾಡುವ ಯುವಕರು ಹೆಣ್ಣು ಸಿಗುತ್ತಿಲ್ಲವೆಂದು ಉಡುಪಿಯ ಅನಾಥಾಶ್ರಮದ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡಿದ್ದಾರೆ.

ಉಡುಪಿ (ಡಿ.20): ರಾಜ್ಯದಲ್ಲಿ ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ನೋವು ಹಳೆಯದಾಗಿದೆ. ಇನ್ನು ಬ್ರಾಹ್ಮಣ ವರರಿಗೂ ಹುಡುಗಿಯರು ಸಿಗುತ್ತಿಲ್ಲವೆಂದು ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ವಧುಗಳನ್ನು ಮದುವೆ ಮಾಡಿಕೊಂಡು ಬರುತ್ತಿದ್ದ ಪ್ರಸಂಗವೂ ಮುಗಿದು ಹೋಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬ್ರಾಹ್ಮಣ ಸಮುದಾಯದ ಯುವಕರು ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯರನ್ನು ಮದುವೆಯಾಗಿದ್ದಾರೆ.

ಹೌದು, ಬ್ರಾಹ್ಮಣ ಸಮುದಾಯದಲ್ಲಿ ಮದುವೆಯಾಗಲು ಹುಡುಗಿಯರ ಕೊರತೆ ಎದುರಾಗಿ ಹಲವು ವರ್ಷಗಳೇ ಕಳೆದಿವೆ. ಆದ್ದರಿಂದ ಮದುವೆಯಾಗಲು ಹೆಣ್ಣು ಸಿಗದ ಹಿನ್ನೆಲೆಯಲ್ಲಿ ಬ್ರಾಹ್ಮಣ ಯುವಕರು ಅನಾಥ ಹೆಣ್ಣು ಮಕ್ಕಳ ಪಾಲನೆ ಮಾಡುವ ಸ್ಟೇಟ್ ಹೋಮ್‌ಗಳಿಗೆ ಹೋಗಿ ಹೆಣ್ಣು ಕೇಳಲು ಮುಂದಾಗಿದ್ದಾರೆ. ಇನ್ನು ಕರಾವಳಿ ಜಿಲ್ಲೆಗಳ ಯುವಕರ ವಿಶೇಷ ಆಸಕ್ತಿಯಿಂದ ಅನಾಥ ಹೆಣ್ಣು ಮಕ್ಕಳಿಗೆ ಒಂದು ಉತ್ತಮ ಕುಟುಂಬ ಹಾಗೂ ಜೀವನ ಸಿಗುವ ಸಾಧ್ಯತೆಯೂ ಹೆಚ್ಚಾಗಿದೆ.

ಇಂದಿರಾ ಕ್ಯಾಂಟೀನ್ ಹೊಸ ಮೆನು ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ: ರಾಗಿಮುದ್ದೆ, ಮಂಗಳೂರು ಬನ್ಸ್ ಸೇರ್ಪಡೆ!

ಬುಧವಾರ ಉಡುಪಿ ಸ್ಟೇಟ್ ಹೋಂನಲ್ಲಿ ಎರಡು ಅನಾಥ ಯುವತಿಯರಿಗೆ ಕಂಕಣ ಭಾಗ್ಯ ನೆರವೇರಿಸಲಾಗಿದೆ. ಇನ್ನು ಅನಾಥಾಶ್ರಮದ ಹೆಣ್ಣು ಮಕ್ಕಳನ್ನು ಮದುವೆ ಆಗುವ ವರ್ಗ ಹೆಚ್ಚಾಗಿ ಅರ್ಚಕ ವರ್ಗದವರೇ ಆಗಿದ್ದಾರೆ. ಈ ಬಗ್ಗೆ ಮೇಲ್ವರ್ಗವೆಂದು ಹೇಳಿಕೊಳ್ಳುವವರೇ ಆಸಕ್ತಿ ವಹಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಇಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಮದುವೆಯಾಗದ ಹೊರತು ಕೆಲ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವಂತಿಲ್ಲ. ಆದರೆ, ಅರ್ಚಕ, ಪೌರೋಹಿತ್ಯ ವೃತ್ತಿ ಮಾಡುವವರಿಗೆ ಬ್ರಾಹ್ಮಣ ಸಮುದಾಯದಲ್ಲಿ ಹೆಣ್ಣಿನ ಕೊರತೆಯಾಗಿದೆ. ಹೀಗಾಗಿ, ಅನಾಥ ಹೆಣ್ಣು ಮಕ್ಕಳನ್ನು ಮದುವೆಯಾಗಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಅರ್ಚಕ ವೃತ್ತಿ ಮಾಡುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ಟ ಮತ್ತು ಕುಮಾರಿ ವಿವಾಹ ನೆರವೇರಿತು. ಮತ್ತೊಂದೆಡೆ ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಮತ್ತು ಶೀಲಾ ವಿವಾಹ ನೆರವೇರಿಸಲಾಯಿತು. ಈ ಎರಡು ಜೋಡಿಗಳ ವಿವಾಹಕ್ಕೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ, ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಅನೇಕ ಗಣ್ಯರು ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Ayodhya Ground Report: ಅಯೋಧ್ಯೆ ಭದ್ರತಾ ವ್ಯವಸ್ಥೆ ಹೇಗಿರಲಿದೆ? ಇಲ್ಲಿದೆ ಡೀಟೇಲ್ಸ್‌

ಬ್ರಾಹ್ಮಣ ವರರಿಗೆ ಹೆಣ್ಣು ಸಿಗುತ್ತಿಲ್ಲವೆಂದು ಲಕ್ಷಾಂತರ ರೂ. ಹಣ ಕೊಟ್ಟರೂ ಪರವಾಗಿಲ್ಲ ನಮ್ಮದೇ ಸಮುದಾಯದ ಹೆಣ್ಣನ್ನು ತಂದುಕೊಳ್ಳಬೇಕು ಎಂದು ಉತ್ತರ ಭಾರತದತ್ತ ಮುಖ ಮಾಡಿದ ಕೆಲವು ಯುವಕರು ಕೈ ಸುಟ್ಟುಕೊಂಡಿದ್ದಾರೆ. ಸಂಸಾರದಲ್ಲಿ ಎಲ್ಲವೂ ಸರಿಯಾಗಿದ್ದರೆ ನೆಮ್ಮದಿ ಜೀವನ ಮಾಡಬಹುದು. ಆದರೆ, ತವರು ಮನೆ ತುಂಬಾ ದೂರವಾಗಿದ್ದರಿಂದ ಕೆಲವರು ಮದುವೆಯನ್ನು ಮುರಿದುಕೊಂಡಿರುವುದೂ ಉಂಟು. ಆದ್ದರಿಂದ ದೂರದಿಂದಲ ಹೆಣ್ಣು ತರುವ ಬದಲು ಅನಾಥಾಶ್ರಮದಲ್ಲಿ ಬೆಳೆದ ಹೆಣ್ಣು ಮಕ್ಕಳಿಗೆ ಜೀವನ ಕೊಡಲು ಮುಂದಾಗಿದ್ದಾರೆ. ಈಗ ಉಡುಪಿಯಲ್ಲಿ ಗಮನಾರ್ಹ ಬೆಳವಣಿಗೆ ಹಲವು ತಿಂಗಳ ಹಿಂದೆಯೇ ಕಂಡುಬಂದಿದೆ. ಈವರೆಗೆ ಉಡುಪಿಯ ಕೇಂದ್ರದಲ್ಲಿ 24 ಜೋಡಿಗೆ ವಿವಾಹವಾಗಿದೆ. ಈ ಪೈಕಿ ಬ್ರಾಹ್ಮಣ, ಲಿಂಗಾಯಿತ ಸಮುದಾಯದ ಯುವಕರೇ ಹೆಚ್ಚಾಗಿದ್ದಾರೆ ಎಂದು ಸ್ಟೇಟ್‌ ಹೋಮ್‌ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

click me!