ನಗರದ ಮೂಲೆ-ಮೂಲೆಗೂ ಕೊರೋನಾ!| 30 ಹೊಸ ಪ್ರದೇಶಗಳಲ್ಲಿ ಕೊರೋನಾ ಕೇಸ್| ಲಾಲ್‌ಬಾಗ್ ಪಾರ್ಕ್ನಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿಗೆ ಪಾಸಿಟಿವ್| ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಸೋಂಕು| 36 ಸೋಂಕಿತರಲ್ಲಿ 35 ಮಂದಿ ಸ್ಥಳೀಯರು| ಸಾರ್ವಜನಿಕರಲ್ಲಿ ಆತಂಕ
ಬೆಂಗಳೂರು(ಜೂ.13): ರಾಜ್ಯ ಸರ್ಕಾರವು ಜೂ. 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಜ್ಜಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಇಬ್ಬರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಪರೀಕ್ಷೆ ಬರೆಯಲು ಮುಂದಾಗುತ್ತಿದ್ದ ವಿದ್ಯಾರ್ಥಿಗಳಲ್ಲಿ ಮತ್ತಷ್ಟುಆತಂಕ ಮನೆ ಮಾಡಿದೆ.
ಇದಲ್ಲದೆ, ಕೊರೋನಾ ಮಹಾಮಾರಿ ಬೆಂಗಳೂರಿನ ಮೂಲೆ-ಮೂಲೆಗೂ ಹರಡುತ್ತಿದ್ದು ಶುಕ್ರವಾರ ನಗರದ 30 ಹೊಸ ಪ್ರದೇಶಗಳಿಂದ ಸೋಂಕು ವರದಿಯಾಗಿದೆ. ಲಾಲ್‌ಬಾಗ್‌ನಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದ 51 ವರ್ಷದ ವ್ಯಕ್ತಿಗೂ ಸೋಂಕು ಹರಡಿದ್ದು ಉದ್ಯಾನನಗರಿ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ನಗರದ ಕಲಾಸಿಪಾಳ್ಯದಲ್ಲಿ ಸೋಂಕಿನಿಂದ ಜೂ.5 ರಂದು ಮೃತರಾಗಿದ್ದ ಮಹಿಳೆ ಸಂಪರ್ಕದಲ್ಲಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇವರ ಸಂಪರ್ಕದಲ್ಲಿದ್ದ 5 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಮೃತ ಮಹಿಳೆ ಮಗನಿಗೆ ಪಾಸಿಟಿವ್ ಕಂಡುಬಂದಿತ್ತು. ಅವರ ಮನೆಯಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರಿಗೂ ಕೋವಿಡ್-19 ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಗಲ್ಲಿಗಲ್ಲಿಗೂ ಕೊರೋನಾ:
ಬೆಂಗಳೂರಿನಲ್ಲಿ ಶುಕ್ರವಾರ ಎರಡನೇ ದಾಖಲೆಯ (36) ಸೋಂಕು ವರದಿಯಾಗಿದೆ. ಈ ಪೈಕಿ ಒಬ್ಬರು ಮಾತ್ರ ಮಹಾರಾಷ್ಟ್ರದಿಂದ ವಾಪಸಾಗಿದ್ದು, 35 ಮಂದಿಗೆ ಸ್ಥಳೀಯವಾಗಿಯೇ ಸೋಂಕು ವರದಿಯಾಗಿದೆ. ಈ ಪೈಕಿ 30 ಮಂದಿಗೆ ಹೊಸ ಪ್ರದೇಶಗಳಿಂದ ಸೋಂಕಿನ ಲಕ್ಷಣ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಕಂಡು ಬಂದಿದೆ. ಇದರಿಂದಾಗಿ ಗುರುವಾರದವರೆಗೆ 113ರಷ್ಟಿದ್ದ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆಗೆ ಮತ್ತೆ ಮೂರು ಸೇರ್ಪಡೆಯಾಗಿವೆ.
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಲಾಲ್‌ಬಾಗ್‌ನಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿಗೆ ಸೋಂಕು ಖಚಿತಪಟ್ಟಿರುವುದು ವರದಿಯಾಗಿಲ್ಲ. ಆದರೆ, 51 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು ನಾಲ್ಕು ದಿನ ತಾವು ಲಾಲ್‌ಬಾಗ್‌ನಲ್ಲಿ ವಾಯುವಿಹಾರಕ್ಕೆ ತೆರಳಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಉದ್ಯಾನಗಳಿಗೆ ಹೋಗುವವರೂ ಸಹ ಹೆದುರುವಂತಾಗಿದೆ.
ಉಳಿದಂತೆ ಬೆಂಗಳೂರಿನಲ್ಲಿ ಶುಕ್ರವಾರ 2ನೇ ಅತ್ಯಧಿಕ (36) ಸೋಂಕು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 617ಕ್ಕೆ ಏರಿಕೆಯಾಗಿದೆ. ಉಳಿದಂತೆ 299 ಮಂದಿ ಗುಣಮುಖರಾಗಿದ್ದು, 290 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರದ ಬುಲೆಟಿನ್‌ನಲ್ಲಿ ವರದಿಯಾದ ನಾಲ್ಕು ಸಾವು ಸೇರಿ ಕೊರೋನಾ ಮರಣ ಪ್ರಕರಣ 27ಕ್ಕೆ ಏರಿಕೆಯಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ಹಾಸ್ಟೆಲ್‌ನಲ್ಲಿ ಸೋಂಕು!
ಶುಕ್ರವಾರ ವರದಿಯಾದ ಪ್ರಕರಣಗಳಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಹಾಸ್ಟೆಲ್‌ನಲ್ಲಿದ್ದ 25 ವರ್ಷದ ಆರೋಗ್ಯ ಸಿಬ್ಬಂದಿಗೆ ಸೋಂಕು ಹರಡಿದೆ. ಹೀಗಾಗಿ ಬಿಎಂಸಿಆರ್‌ಐನ ಹಾಸ್ಟೆಲ್‌ನ್ನು ಮುಚ್ಚಿ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಸೋಂಕು:
ಶುಕ್ರವಾರ ವರದಿಯಾದ ಪ್ರಕರಣಗಳಲ್ಲಿ ಪ್ಯಾಲೆಸ್ ಗ್ರೌಂಡ್ಸ್ ಬಳಿಯ ಇಂಡಸ್ ಟವರ್, ಕೆ.ಜಿ. ನಗರದ ವಿನಾಯಕ ಎಕ್ಸ್‌ಟೆನ್ಷನ್, ಸುಲ್ತಾನ್‌ಪೇಟೆಯ ಜಾಲಿ ಮೊಹಲ್ಲಾ, ಕರಗಪ್ಪ ನಗರ 9ನೇ ಅಡ್ಡ ರಸ್ತೆ, ಎಲ್.ಎನ್. ಪುರಂ 4ನೇ ಮುಖ್ಯ ರಸ್ತೆ, ಸಿ.ಕೆ. ಬಡಾವಣೆಯ 3ನೇ ಅಡ್ಡ ರಸ್ತೆ, ಸಂಜಯನಗರದ ಕುವೆಂಪು ಆದರ್ಶ ಪಬ್ಲಿಕ್ ಶಾಲೆ ಬಳಿಯ ಮುನೇಶ್ವರ ದೇವಸ್ಥಾನ ಬೀದಿಯ ಎದುರಿನ ರಸ್ತೆ, ದೊಡ್ಡಮಾವಳ್ಳಿಯ ಮುದ್ದಾಲಪ್ಪ ಬೀದಿ, ಕುಮಾರಪಾರ್ಕ್ನ ಅಯ್ಯಪ್ಪ ಬ್ಲಾಕ್ ಎದುರು (2 ಪ್ರಕರಣ), ದೇವರಾಜ ಅರಸು ನಗರದ 7ನೇ ಅಡ್ಡ ರಸ್ತೆ, ಕೋಲ್ಸ್‌ಪಾರ್ಕ್ನ ನಾರಾಯಣ ಪಿಳ್ಳೈ ಬೀದಿ, ರಣಸಿಂಗ್‌ಪೇಟೆಯ ಬೈರಪ್ಪ ಲೇನ್‌ನಲ್ಲಿ ಸೋಂಕು ಪ್ರಕರಣ ವರದಿಯಾಗಿದೆ.