ಬೆಳಗಾವಿಯಲ್ಲಿ ಐದು ದಿನಗಳ ಅವಧಿಯಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಎಂಬ ಆರೋಪ ಕೇಳಿಬಂದಿದೆ. ಮರಣೋತ್ತರ ಪರೀಕ್ಷೆಗೆ ಪೋಷಕರು ಅವಕಾಶ ನೀಡದೆ ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸುವಂತೆ ಪಟ್ಟು ಹಿಡಿದಿದ್ದಾರೆ.
ಬೆಳಗಾವಿ ಡಿ23: ಬೆಳಗಾವಿ ಜಿಲ್ಲಾಸ್ಪ್ರತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ಮುಂದುವರಿದಿದ್ದು, ಐದು ದಿನಗಳ ಅವಧಿಯಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷವೇ ಬಾಣಂತಿಯರ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಟಬಾಗಿ ( 20) ಮೃತ ಭಾನುವಾರ ಮೃತಪಟ್ಟಿದ್ದು, ಶನಿವಾರ ಬೆಳಗ್ಗೆ ಸಿಜೇರಿಯನ್ ಮೂಲಕ ಹೆಣ್ಣು ಮಗುವಿಗೆ ವೈಶಾಲಿ ಜನ್ಮ ನೀಡಿದ್ದರು. ಭಾನುವಾರ ಬೆಳಗ್ಗೆಯವರೆಗೂ ಹುಷಾರಾಗಿಯೇ ಇದ್ದರು. ಬೆಳಗ್ಗೆ 7 ಗಂಟೆಯಿಂದ ಎದೆನೋವು ಶುರುವಾಗಿದೆ. ವೈದ್ಯರು ಸಮರ್ಪಕ ಚಿಕಿತ್ಸೆ ನೀಡದ ಕಾರಣ ಬಾಣಂತಿ ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪತಿಯ ಜೊತೆ ವೈಶಾಲಿ ಸಂಭ್ರಮದಿಂದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
undefined
ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವು; ನಿನ್ನೆ ಕಲಬುರಗಿ ಭಾಗ್ಯ, ಇಂದು ಚಿಕ್ಕಮಗಳೂರು ಸವಿತಾ ಬಲಿ!
ಬಾಣಂತಿ ವೈಶಾಲಿ ಕೊಟವಾಗಿ ಅನುಮಾನಾಸ್ಪದ ಸಾವು ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಶವಾಗಾರಕ್ಕೆ ಮೃತದೇಹ ಸ್ಥಳಾಂತರಿಸಲಾಯಿತು. ಆದರೆ, ಪೋಷಕರು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲಿಲ್ಲ. ನಾವು ಬಿಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸುತ್ತೇವೆ ಎಂದು ಪಟ್ಟು ಹಿಡಿದರು. ಬಿಮ್ಸ್ ಎದುರು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಡಿ.17ರಂದು ಬಾಣಂತಿ ಸಾವು:ಡಿ.17 ರಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಾಗೀಡಾದ ಆರೋಪ ಕೇಳಿಬಂದಿತ್ತು. ಮೃತರನ್ನು ಕಳೆದುಕೊಂಡ ನೋವಿನಿಂದ ರೊಚ್ಚಿಗೆದ್ದ ಕುಟುಂಬಸ್ಥರು ಬಿಮ್ಸ್ ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ಅನಿಲ ಲಮಾಣಿ (26) ಮೃತಪಟ್ಟಿದ್ದರು. ಅಂದು ಮಧ್ಯರಾತ್ರಿ 2.30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಕಲ್ಪನಾ ಜನ್ಮ ನೀಡಿದ್ದರು. ಈ ವೇಳೆ ಮಗು ಮತ್ತು ತಾಯಿ ಆರೋಗ್ಯದಿಂದ ಇರುವುದಾಗಿ ವೈದ್ಯರು ಹೇಳಿದ್ದರಂತೆ. ಬೆಳಗ್ಗೆ 8.30ರವರೆಗೂ ಆರೋಗ್ಯವಾಗಿದ್ದ ಕಲ್ಪನಾ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವಾಗಿದೆ. ಎರಡು ಬಾರಿ ಸಿಜೇರಿಯನ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಹಸಗೂಸು ಆಸ್ಪತ್ರೆಯ ಐಸಿಯುನಲ್ಲಿದೆ. ತರಾತುರಿಯಲ್ಲಿ ಸಿಜೇರಿಯನ್ ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರು ಆದಾಗ ಬೇರೆಡೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕುಟುಂಬಸ್ಥರು ಮನವಿ ಮಾಡಿದರೂ, ಬೇರೆ ಆಸ್ಪತ್ರೆಗೆ ಕಳುಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರನ್ನು ಈ ಕೂಡಲೇ ವಜಾ ಮಾಡಬೇಕು ಎಂದು ಕಲ್ಪನಾ ಕುಟುಂಬಸ್ಥರು ಪಟ್ಟು ಹಿಡಿದಿದ್ದರು.'
ಬಾಣಂತಿಯರ ಸಾವು ಪ್ರಕರಣ: ಲ್ಯಾಬ್‌ಗಳಿಂದ ರಿಂಗರ್ ಲ್ಯಾಕ್ಟೇಟ್‌ಗೆ ಕ್ಲೀನ್‌ಚಿಟ್
ಹೆರಿಗೆ ಶಾಸ್ತ್ರ ಮತ್ತು ಶಿಶುವೈದ್ಯಶಾಸ್ತ್ರ ವಿಭಾಗಕ್ಕೆ ಬಿಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ ಆಗಮಿಸುತ್ತಿದ್ದಂತೆಯೇ ಆಸ್ಪತ್ರೆ ಬಾಗಿಲಿನಲ್ಲಿಯೇ ಕಲ್ಪನಾ ಕುಟುಂಬಸ್ಥರು ಘೇರಾವ್ ಹಾಕಿ, ಮಗಳ ಸಾವಿಗೆ ನ್ಯಾಯ ಸಿಗಬೇಕು, ನಮಗೆ ಆದಂತಹ ಪರಿಸ್ಥಿತಿ ಯಾರಿಗೂ ಆಗಬಾರದು. ಈ ಕೂಡಲೇ ನಿರ್ಲಕ್ಷ ತೋರಿದ ವೈದ್ಯರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದರು.
ಬಾಣಂತಿಯರ ಸಾವಿನ ಪ್ರಕರಣ ಸಂಬಂಧ ಮೂವರು ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಿಸಲಾಗುವುದು. ತಪ್ಪಿತಸ್ಥ ವೈದ್ಯರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.
-ಅಶೋಕ ಶೆಟ್ಟಿ, ಬಿಮ್ಸ್ ನಿರ್ದೇಶಕ