
ತುಮಕೂರು: ಚಿರತೆ ಎಂದರೆ ಎಲ್ಲರೂ ಎದ್ದು ಬಿದ್ದು ಓಡೋರೆ ಹೆಚ್ಚು, ಇನ್ನು ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಂದರೆ ಜನ ಹಿಂದೆ ಹಿಂದೆ ಸಾಗುತ್ತಾ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಗೂ ಅಡ್ಡಿಪಡಿಸುತ್ತಾ ಕ್ವಾಟ್ಲೆ ನೀಡ್ತಾರೆ. ಆದರೆ ಇಲ್ಲೊಂದು ಕಡೆ ಯುವಕನೇ ಅರಣ್ಯ ಇಲಾಖೆಯವರಿಗೆ ಚಿರತೆ ಹಿಡಿದು ಕೊಟ್ಟಿದ್ದಾನೆ. ತುಮಕೂರಿನ ತಿಪಟೂರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.
ಊರಿಗೆ ಚಿರತೆ ನುಗ್ಗಿದ ವಿಚಾರ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬಲೆಯೊಂದಿಗೆ ಚಿರತೆ ಹಿಡಿಯುವ ಕಾರ್ಯಾಚರಣೆಗೆ ಸಿದ್ಧರಾಗಿ ಬಂದಿದ್ದಾರೆ. ಆದರೆ ಅರಣ್ಯ ಇಲಾಖೆಯವರ ಕೈಗೆ ಚಿರತೆ ಸಿಕ್ಕಿಲ್ಲ, ಇದೇ ವೇಳೆ ಅಲ್ಲಿದ್ದ ಯುವಕನೋರ್ವ ಚಿರತೆಯ ಬಾಲದಲ್ಲಿ ಹಿಡಿದಿದ್ದಾನೆ. ಆತನ ಅದೃಷ್ಟ ಚೆನ್ನಾಗಿತ್ತೇನೋ ಚಿರತೆ ತನ್ನ ಬಾಲ ಹಿಡಿದವನ ಮೇಲೆ ತಿರುಗಿ ದಾಳಿ ಮಾಡಿಲ್ಲ, ಒಂದು ವೇಳೆ ಚಿರತೆ ದಾಳಿ ಮಾಡಿದ್ದರೆ ದೊಡ್ಡ ಅನಾಹುತ ಆಗುವುದರಲ್ಲಿತ್ತು.
ಇತ್ತ ಯುವಕ ಚಿರತೆ ಹಿಡಿದ ಕೂಡಲೇ ಅರಣ್ಯ ಇಲಾಖೆಯವರು ಚಿರತೆ ಮೇಲೆ ಬಲೆ ಹಾಕಿದ್ದು, ಅದನ್ನು ರಕ್ಷಿಸಿ ಬೇರೆಡೆ ತೆಗೆದುಕೊಂಡು ಹೋಗಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಹೀಗೆ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾದ ವ್ಯಕ್ತಿಯನ್ನು ಆನದಂಸ್ ಎಂದು ಗುರುತಿಸಲಾಗಿದೆ. ಇನ್ನು ಹೀಗೆ ಸಿಕ್ಕಾ ಚಿರತೆಯನ್ನು ಅರಣ್ಯ ಇಲಾಖೆಯವರು ಅದರ ಆವಾಸ ಸ್ಥಾನಕ್ಕೆ ಬಿಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಯುವಕನ ಸಾಧನೆಗೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ