
ತುಮಕೂರು(ಆ.16): ರಾಜಣ್ಣ ಅವರು ಸಹಕಾರಿ ಧುರೀಣರು, ಸಹಕಾರಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಸ್ಥಾನವನ್ನ ಅತ್ಯಂತ ಸಮರ್ಥವಾಗಿ ನಿಭಾಯಿಸ್ತಾ ಇದ್ದರು. ಈಗ ಇದ್ದಕ್ಕಿದ್ದಹಾಗೆ ಸಂಪುಟದಿಂದ ಕೈಬಿಟ್ಟಿದ್ದಾರೆ ಅನ್ನೋ ಸುದ್ದಿ ಕೇಳಿ ಆಘಾತ ಆಗಿದೆ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮಿಜಿ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದ ಮಾಜಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ ವಿಚಾರಕ್ಕೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, ರಾಜಣ್ಣ ಅವರ ನೇರವಾದ ವ್ಯಕ್ತಿತ್ವದವರು.ಯಾವುದೇ ಸಂದರ್ಭದಲ್ಲಿ ರಾಜಣ್ಣ ಒಳಗೊಂದು, ಹೊರಗೊಂದು ಮಾತನಾಡದೆ, ನೇರವಾಗಿ ಮಾತನಾಡುವವರು. ನೇರವಾದಿ ಲೋಕ ವಿರೋಧಿ ಅನ್ನುವ ಹಾಗೆ ರಾಜಣ್ಣರಿಗೆ ತೊಂದರೆಯಾಗಿದೆ ಎಂದರು.
ಅವರನ್ನು ಸಂಪುಟದಿಂದ ಕೈ ಬಿಟ್ಟಿರೋದು ನಿಜಕ್ಕೂ ಚಿಂತನೆ ಮಾಡುವ ವಿಚಾರವಾಗಿದೆ. ಅದರಲ್ಲೂ ತುಮಕೂರು ಜಿಲ್ಲೆಗೆ ವಿಶೇಷವಾಗಿ ನಷ್ಟವಾಗಿದೆ. ತುಮಕೂರಿನಲ್ಲಿ ಇಬ್ಬರು ಸಚಿವರಿದ್ದಾರೆ. ಇಬ್ಬರೂ ಒಳ್ಳೆ ಕೆಲಸ ಮಾಡುತ್ತಾ ಇದ್ದಾರೆ. ರಾಜಣ್ಣರನ್ನು ವಜಾಗೊಳಿಸಿರೋದು ನಿಜಕ್ಕೂ ನೋವುಂಟು ಮಾಡಿದೆ. ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ತಾರೆ ಅನ್ನೋ ಭರವಸೆ ಇದೆ. ಆದಷ್ಟು ಬೇಗ ಈ ಕಗ್ಗಂಟು ಬಗೆಹರಿದು ಅವರನ್ನು ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳಲಿ. ಅವರಿಗೆ ಮತ್ತೊಂದು ಅವಕಾಶ ಕೊಟ್ಟರೆ ಪಕ್ಚಕ್ಕೆ ಒಳ್ಳೆದಾಗುತ್ತದೆ, ಜನತೆಗೆ ಒಳ್ಳೆದಾಗುತ್ತದೆ. ಸಿಎಂ ಈ ವಿಚಾರದಲ್ಲಿ ಗಮನ ಹರಿಸಿ ಹೈ ಕಮಾಂಡ್ ಮನವೊಲಿಸಿ ಮತ್ತೆ ರಾಜಣ್ಣರಿಗೆ ಸಂಪುಟ ಸೇರಿಸಿಕೊಳ್ಳಲಿ ಎಂದರು.
ರಾಜಣ್ಣರ ವಜಾಕ್ಕೆ ಕಾರಣವೇನು?
ರಾಜಣ್ಣರ ವಜಾಕ್ಕೆ ಕಾರಣವಾಗಿದ್ದ ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಅವರ 'ಮತಗಳ್ಳತನ' ಆರೋಪದ ಬಗ್ಗೆ ರಾಜಣ್ಣರ ವಿರೋಧಾತ್ಮಕ ಹೇಳಿಕೆಯೇ ಈ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಶ್ರೀಗಳು ನೇರವಾಗಿ ಉಲ್ಲೇಖಿಸದಿದ್ದರೂ, ರಾಜಣ್ಣರ ಸೇವೆಯನ್ನು ಕೊಂಡಾಡಿದರು. ಅವರಿಗೆ ಮತ್ತೊಂದು ಅವಕಾಶ ನೀಡುವಂತೆ ಕೋರಿದ್ದಾರೆ. ರಾಜಣ್ಣರ ವಜಾಗೊಳಿಸಿದ ಘಟನೆಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ತುಮಕೂರಿನ ಮಧುಗಿರಿಯಲ್ಲಿ ರಾಜಣ್ಣರ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ