
ತುಮಕೂರು (ಮೇ.19): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಬುಧವಾರ (ಮೇ 20ಕ್ಕೆ) ಮೂರು ವರ್ಷಗಳು ತುಂಬಲಿವೆ. ಆ ಸಂಭ್ರಮ ಆಚರಿಸಲು ತುಮಕೂರಿನಲ್ಲಿ ಮಂಗಳವಾರವೇ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಈ ಬೃಹತ್ ರ್‍ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಸಚಿವರು, ಶಾಸಕರು, ಮುಖಂಡರ ದಂಡೇ ಭಾಗಿಯಾಗಲಿದೆ.
ಸಮಾವೇಶದ ಸಂದರ್ಭದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ. ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟೊಂದು ಮಂದಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ಇದೇ ಮೊದಲು. ಈ ಸಾಧನೆ ಗಿನ್ನೆಸ್ ದಾಖಲೆಗೆ ಸೇರಲಿದೆ. ಆ ಕುರಿತು ಪ್ರಮಾಣ ಪತ್ರವನ್ನು ಪ್ರದಾನ ಮಾಡಲು ಇಂಗ್ಲೆಂಡ್‌ನಿಂದ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳು ಮಂಗಳವಾರ ತುಮಕೂರಿಗೆ ಆಗಮಿಸುತ್ತಿರುವುದು ವಿಶೇಷ ಎಂದು ಗೃಹ ಸಚಿವ ಡಾ। ಪರಮೇಶ್ವರ್ ತಿಳಿಸಿದ್ದಾರೆ.
ಸಮಾವೇಶದಲ್ಲಿ ಕಂದಾಯ ಇಲಾಖೆಯ 60 ಸಾವಿರ, ಗ್ರಾಮೀಣಾಭಿವೃದ್ಧಿ ಇಲಾಖೆಯ 80 ಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಒಟ್ಟಾರೆ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಕಾರ್ಯಕ್ರಮ ನಡೆಯಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿನ ಪೂರ್ವ ಸಿದ್ಧತೆಯನ್ನು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಸೋಮವಾರ ವೀಕ್ಷಿಸಿದರು.
ಗಿನ್ನೆಸ್ ದಾಖಲೆ:
ಒಮ್ಮೆಗೇ 1.50 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಯು ದಾಖಲೆ ಆಗಿದೆ. ತುಮಕೂರು ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ- 1.6 ಲಕ್ಷ, ದರಖಾಸ್ತು ಪೋಡಿ - 24,256, ಕಂದಾಯ ಗ್ರಾಮ ಹಕ್ಕು ಪತ್ರ - 20,666 ಮತ್ತು ಪೋಡಿ ಮುಕ್ತ ಅಭಿಯಾನ - 1570 ಸೇರಿದಂತೆ ಒಟ್ಟು 1,52,492 ಫಲಾನುಭವಿಗಳಿಗೆ ಹಕ್ಕು ಪತ್ರ/ಆದೇಶ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಟ್ಟು 600 ಹುದ್ದೆಗಳ ನೇಮಕಾತಿ ಆದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.
ಇದೇ ವೇಳೆ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು, ತಹಶೀಲ್ದಾರರು ಹಾಗೂ ಭೂಮಾಪನಾ ಇಲಾಖೆಯ ಸರ್ವೆಯರ್‌ಗಳು, ಸಹಾಯಕ ಭೂ ದಾಖಲೆಗಳ ಉಪನಿರ್ದೇಶಕರಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಗುತ್ತದೆ.
2 ಲಕ್ಷ ಜನ:
ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಹಂತದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು 3 ಸಾವಿರ ಬಸ್ಸುಗಳಲ್ಲಿ ಫಲಾನುಭವಿಗಳು ಆಗಮಿಸುತ್ತಿದ್ದು, ಬಸ್ಸು ಹೊರಡುವ ಜಾಗದಲ್ಲಿಯೇ ಫಲಾನುಭವಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಫಲಾನುಭವಿಗಳ ಸುರಕ್ಷತೆ ದೃಷ್ಟಿಯಿಂದ ಕರೆತರಲು ಮತ್ತು ವಾಪಸ್ ಕರೆದುಕೊಂಡು ಹೋಗಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬಸ್ ಹೊರಡುವ ಜಾಗದಿಂದ ಜಿಪಿಎಸ್ ವ್ಯವಸ್ಥೆ ಮೂಲಕ ಮಾರ್ಗದ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ.
ಚುನಾವಣಾ ಪ್ರಣಾಳಿಕೆಯನ್ನು ನನ್ನ ಅಧ್ಯಕ್ಷತೆಯಲ್ಲಿಯೇ ಮಾಡಲಾಗಿತ್ತು. ಐದು ಗ್ಯಾರಂಟಿ ಸೇರಿ ಆದ್ಯತಾ ವಿಷಯಗಳನ್ನು ಈಡೇರಿಸುವ ಬಗ್ಗೆ ಜನರಿಗೆ ಆಶ್ವಾಸನೆ ನೀಡಲಾಗಿತ್ತು. ಕಳೆದ 3 ವರ್ಷಗಳು ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನತೆಗೆ ಅರ್ಪಿಸಲಾಗಿದೆ. ಈ ಸುಸಂದರ್ಭದಲ್ಲಿ ಉತ್ತರದಾಯಿತ್ವವಾಗಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಆಗಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ. ತುಮಕೂರು ಜಿಲ್ಲೆಯಲ್ಲಿ ಆಗಿರುವ ಪ್ರಗತಿಯು ಗಿನ್ನಿಸ್ ದಾಖಲೆಗೆ ಸೇರಲಿದೆ.
-ಡಾ। ಜಿ.ಪರಮೇಶ್ವರ್, ಗೃಹ ಸಚಿವ.
ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ- 1.6 ಲಕ್ಷ, ದರಖಾಸ್ತು ಪೋಡಿ - 24,256, ಕಂದಾಯ ಗ್ರಾಮ ಹಕ್ಕು ಪತ್ರ - 20,666 ಮತ್ತು ಪೋಡಿ ಮುಕ್ತ ಅಭಿಯಾನ - 1570 ಸೇರಿದಂತೆ ಒಟ್ಟು 1,52,492 ಫಲಾನುಭವಿಗಳಿಗೆ ಹಕ್ಕು ಪತ್ರ/ಆದೇಶ ಪತ್ರಗಳನ್ನು ಸಮಾವೇಶದಲ್ಲಿ ವಿತರಣೆ ಮಾಡಲಾಗುತ್ತಿದೆ.
ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟೊಂದು ಮಂದಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ಇದೇ ಮೊದಲು. ಈ ಸಾಧನೆ ಗಿನ್ನೆಸ್ ದಾಖಲೆಗೆ ಸೇರಲಿದೆ. ಆ ಕುರಿತು ಪ್ರಮಾಣ ಪತ್ರವನ್ನು ಪ್ರದಾನ ಮಾಡಲು ಇಂಗ್ಲೆಂಡ್‌ನಿಂದ ಗಿನ್ನೆಸ್ ಸಂಸ್ಥೆಯ ಪ್ರತಿನಿಧಿಗಳು ಮಂಗಳವಾರ ತುಮಕೂರಿಗೆ ಬರಲಿದ್ದಾರೆ ಎಂದು ಗೃಹ ಸಚಿವ ಡಾ। ಪರಮೇಶ್ವರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ