
ವಿಧಾನ ಮಂಡಲ ಅಧಿವೇಶನದಲ್ಲೇ ಆಗಾಗ ವ್ಯಾಕರಣ ‘ಮೇಷ್ಟ್ರು’ ಆಗಿ ಶಾಸಕರಿಗೆ ಸಂಧಿ, ಸಮಾಸ ಕುರಿತು ‘ಕ್ಲಾಸ್’ ತೆಗೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಯೊಬ್ಬರಿಗೆ ಗುಂಟೆ, ಎಕರೆ, ಹೆಕ್ಟೇರ್ ಬಗ್ಗೆ ಪಾಠ ಮಾಡಿ ಗಮನ ಸೆಳೆದರು.
ಓಕಳಿಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಭಾಷಣ ಮಾಡುವಾಗ ಸಿದ್ದರಾಮಯ್ಯ ಅವರು ‘ರೇಷ್ಮೆ ಇಲಾಖೆಯು ಓಕಳೀಪುರಂನಲ್ಲಿ 1995ರಲ್ಲಿ 4.25 ಎಕರೆ ಜಮೀನನ್ನು ಖರೀದಿಸಿತ್ತು. ಈ ಎರಡೂವರೆ ಎಕರೆಗೂ ಅಧಿಕ ಜಾಗದಲ್ಲಿ ಸುಸಜ್ಜಿತ ಭವನ ನಿರ್ಮಾಣವಾಗಲಿದೆ’ ಎಂದು ಹೇಳುತ್ತಿದ್ದಾಗ, ಹಿಂದೆ ಇದ್ದ ಅಧಿಕಾರಿಯೊಬ್ಬರು, ‘ಎರಡೂ ಮುಕ್ಕಾಲು ಎಕರೆ ಜಾಗ ಸರ್’ ಎಂದು ಹೇಳಿದರು.
ಇದರಿಂದ ಕೊಂಚ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕರೆ, ಗುಂಟೆ ಪಾಠ ಶುರು ಮಾಡಿದರು.
‘ಏಯ್ ಯಾರ್ರೀ ಅವರು? 4.25 ಎಕರೆ ಹೇಗೆ ಎರಡೂ ಮುಕ್ಕಾಲು ಎಕರೆ ಆಗುತ್ತದೆ. ಒಂದು ಎಕರೆಗೆ ಎಷ್ಟು ಗುಂಟೆ ಗೊತ್ತೇನ್ರೀ ನಿಮಗೆ? ಒಂದು ಎಕರೆಗೆ 40 ಗುಂಟೆ ಇರುತ್ತದೆ. 4 ಎಕರೆ 30 ಗುಂಟೆ ಆದರೆ ನಾಲ್ಕು ಮುಕ್ಕಾಲು ಎಕರೆ ಆಗುತ್ತದೆ. 4.25 ಎಕರೆ ಹೇಗೆ ನಾಲ್ಕು ಮುಕ್ಕಾಲು ಎಕರೆ ಆಗುತ್ತದೆ. ಯಾರ್ರೀ ನೀವು, ಯಾವ ಇಲಾಖೆಯ ಸಿಬ್ಬಂದಿ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಆ ಅಧಿಕಾರಿ ಅಲ್ಲಿಂದ ಮೆತ್ತಗೆ ಕಾಲ್ಕಿತ್ತರು.
ಇಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ ಅವರು, ಇದನ್ನು ಹಿಂದೆ 10 ಕೋಟಿ 30 ಲಕ್ಷ ರುಪಾಯಿಗೆ ಖರೀದಿ ಮಾಡಲಾಗಿತ್ತು. ಈಗ 50 ಕೋಟಿ ರು. ಬೆಲೆಬಾಳುತ್ತದೆ ಅಲ್ವಾ ? ಮಾರುಕಟ್ಟೆಯಲ್ಲಿ ಈಗ ಎಷ್ಟು ಬೆಲೆ ಇದೆ ? ಒಂದು ಎಕರೆಗೆ ಎಷ್ಟಿದೆ? ಚದರ ಅಡಿಗೆ ಎಷ್ಟಿದೆ? ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಾ, ಅದಕ್ಕೆ ಉತ್ತರವನ್ನೂ ಹೇಳುತ್ತಾ ಹೋಗಿದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದರು. ಸಚಿವ ಸಂಪುಟ ಪುನರ್ ರಚನೆ ಮೇ ಅಂತ್ಯಕ್ಕೆ ಆಗುತ್ತದೆ. ಹೊಸಬರಿಗೆ, ಹಿರಿಯರಿಗೆ ಅವಕಾಶ ನೀಡುತ್ತಾರೆ ಎನ್ನುವುದು ನನ್ನ ನಂಬಿಕೆ. ಆದರೆ, ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದೆಲ್ಲ ಹೇಳುತ್ತಿದ್ದರು.
ನೀವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಪತ್ರಕರ್ತರೊಬ್ಬರು ಕೇಳಿದ್ದಕ್ಕೆ ನಾನು ಸಚಿವ ಸ್ಥಾನ ಕೇಳಿಲ್ಲ. ಕೇಳುವುದೂ ಇಲ್ಲ. ಎಷ್ಟು ಬಾರಿ ಹೇಳಿದ್ದೇನೆ, ನೀವು ಮತ್ತೆ ಮತ್ತೆ ಕೇಳುತ್ತೀರಿ, ದೇವರಾಣೆಗೂ ನಾನು ಕೇಳಿಲ್ಲ. ಇನ್ನೇನು ಹೇಳಬೇಕು ಎಂದರು. ಅಷ್ಟಕ್ಕೆ ಸುಮ್ಮನಾಗದ ಪತ್ರಕರ್ತರೊಬ್ಬರು ನೀವು ದೇವರನ್ನೇ ನಂಬುವುದಿಲ್ಲ ಎಂದಾಗ, ಆಯಿತು ನಿಮ್ಮಾಣೆಗೂ (ಪತ್ರಕರ್ತರ) ನಾನು ಸಚಿವ ಸ್ಥಾನ ಕೇಳಿಲ್ಲ, ಕೇಳಲ್ಲ ಎಂದಾಗ ಪತ್ರಕರ್ತರು ಸೇರಿದಂತೆ ಅಲ್ಲಿದ್ದವರು ಬಿದ್ದು ನಕ್ಕಿದ್ದೇ ನಕ್ಕಿದ್ದು.
ಪತಿ ಮೇಲಿನ ಹಲ್ಲೆ ಅಪರಾಧಕ್ಕೆ ಸಂಬಂಧಿಸಿದಂತೆ ಮಹಿಳೆ, ಮತ್ತವರ 7 ಮಂದಿ ಕುಟುಂಬ ಸದಸ್ಯರು ತಮ್ಮ ವಿರುದ್ಧ ಪತಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಕರೆದಾಗ ನ್ಯಾಯಮೂರ್ತಿಗಳು, ಅರ್ಜಿದಾರರ ವಕೀಲರೆ... ನಿಮ್ಮ ಅರ್ಜಿ ಸಂಬಂಧ ಪ್ರಕರಣದ ತನಿಖಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿದರು.
ಆಗ ಆರೋಪಿಗಳ (ಅರ್ಜಿದಾರ) ಪರ ವಕೀಲರು, ಸ್ವಾಮಿ.. ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿ ಎಂದು ಕೋರಿದರು. ಅದಕ್ಕೆ ನ್ಯಾಯಮೂರ್ತಿಗಳು, ಈ ಕೇಸು ಅಸಾಲ್ಟ್‌ದು, ತಡೆಯಾಜ್ಞೆ ಕೊಡಲ್ಲ ಎಂದು ನುಡಿದರು.
ಅದಕ್ಕೆ ವಕೀಲರು, ನೋ.. ನೋ. ಅಸಾಲ್ಟೇ ಇಲ್ಲ ಎಂದರು. ಆಗ ನ್ಯಾಯಮೂರ್ತಿಗಳು, ಏನು?.... ಅಸಾಲ್ಟ್ ಇಲ್ವೇ? ಮತ್ತೆ ಬರೀ ಸಾಲ್ಟ್ ಇದಿಯಾ? ಪ್ರಶ್ನಿಸಿದರು.
ವಕೀಲರು, ಎಫ್ಐಆರ್‌ನಲ್ಲಿ ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿಲ್ಲ ಎಂದಾಗ ನ್ಯಾಯಮೂರ್ತಿ, ಕೇವಲ ಸಾಲ್ಟ್ ಇರುವ ಕೇಸು ಇದಲ್ಲ. ಪ್ರಕರಣದಲ್ಲಿ ಅಸಾಲ್ಟ್ ಇದೆ ಎಂದು ಬಲವಾಗಿ ಹೇಳಿದರು.
ವಕೀಲರು, ಎಫ್‌ಐಆರ್‌ನಲ್ಲಿ ಆರೋಪಿಗಳು 7ರಿಂದ 19 ಎಂದು ಹೇಳುತ್ತಾರೆ ಹೊರತು ಅರ್ಜಿದಾರರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳು ಇಲ್ಲ ಎಂದು ಪುನರುಚ್ಚರಿಸಿದರು. ಹಾಗೆಯೇ, ಪ್ರಕರಣದಲ್ಲಿ ಏನಿಲ್ಲ. ತಡೆಯಾಜ್ಞೆ ಕೊಡಬೇಕು ಎಂದು ಪದೇ ಪದೇ ಕೋರಿದರು. ಅದರಿಂದ ತುಸು ಕೋಪಗೊಂಡ ನ್ಯಾಯಮೂರ್ತಿಗಳು, ಏನು ಏನಿಲ್ಲ? ಏನಿಲ್ಲ ಎಂದರೆ ಅರ್ಜಿಯನ್ನೇ ವಜಾಗೊಳಿಸುತ್ತೇನೆ ಎಂದು ಎಚ್ಚರಿಸಿದರು. ಈ ಮಾತು ಕೇಳಿ ವಕೀಲರು ಮೆತ್ತಗಾದರು.
ನಂತರ ನ್ಯಾಯಮೂರ್ತಿಗಳು, ಕೇಸಿನಲ್ಲಿ ಅಸಾಲ್ಟ್ ಬದಲಾಗಿ ಬರೀ ಸಾಲ್ಟ್ ಇದ್ದಿದ್ದರೆ ನಿಜವಾಗಿಯೂ ಸ್ಟೇ ಕೊಡುತ್ತಿದ್ದೆ ಎಂದು ನುಡಿದು, ತನಿಖಾಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದರು. ಈ ಸಾಲ್ಟ್-ಅಸಾಲ್ಟ್ ಪದಗಳನ್ನು ಕೇಳಿ ಕೋರ್ಟ್ ಹಾಲ್‌ನಲ್ಲಿದ್ದವರೆಲ್ಲಾ ಜೋರಾಗಿ ನಗಾಡುತ್ತಿದ್ದರು.
ಬಿಸಿಲ ಧಗೆ, ಮುಗಿಯದ ಕಾರ್ಯಕ್ರಮ, ಊಟದ ಸಾಲಲ್ಲಿ ನಿಂತ ಸಭಿಕರು!
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾಗವಹಿಸುವುದು ಬಹಳಷ್ಟು ಮಟ್ಟಿಗೆ ಕಡಿಮೆಯಾಗಿದೆ. ಹೀಗಾಗಿ, ಸಾರ್ವಜನಿಕರನ್ನು ಕಾರ್ಯಕ್ರಮದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳಲು ಸಮಾರಂಭದ ಕೊನೆಯಲ್ಲಿ ಉಪಹಾರ-ಊಟ ವಿತರಣೆ ಮಾಡುವ ಉಪಾಯವನ್ನು ಸಂಘಟಕರು ಕಂಡು ಕೊಂಡಿದ್ದಾರೆ.
ಆದರೆ ಇದಕ್ಕೂ ಕೆಲವರು ಬಗ್ಗುವುದಿಲ್ಲ, ಕಾರ್ಯಕ್ರಮ ನಡೆಯುತ್ತಿದ್ದರೂ ಸಹ ಊಟಕ್ಕೆ ಸರದಿ ಸಾಲಿನಲ್ಲಿ ನಿಲ್ಲುವ ಭೂಪರು ಇದ್ದಾರೆ. ಇಂತಹ ಪ್ರಸಂಗ ಇತ್ತೀಚೆಗೆ ನಡೆಯಿತು.
ಬಸವ ವೇದಿಕೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮ ಸುಮಾರು ಮೂರು ತಾಸಿಗೂ ಹೆಚ್ಚು ಕಾಲ ಸಾಗಿತು. ಬಿಸಿಲಿನ ಧಗೆಯಲ್ಲಿ ಮುಖ್ಯ ಭಾಷಣಕಾರರ ಭಾಷಣ ಆರಂಭಕ್ಕೂ ಮೊದಲೇ ಸಭಿಕರು ಸುಸ್ತಾಗಿ ಹೋಗಿದ್ದರು. ಊಟಕ್ಕಾಗಿ ಊಟದ ಹಾಲ್ ಕಡೆ ಹೊರಟರು.
ಜನ ಎದ್ದು ಹೋಗುವುದನ್ನು ನೋಡಿದ ಆಯೋಜಕರು ‘ಊಟ ವಿತರಣೆ ಆರಂಭಿಸಬೇಡಿ’ ಎಂದು ಹೇಳಿದರು. ಆದರೆ, ಊಟ ನೀಡದಿದ್ದರೇನಂತೆ, ನಾವು ಸಾಲಿನಲ್ಲಿ ನಿಲ್ಲುತ್ತೇವೆ ಎಂದು ನೂರಾರು ಜನರು ಕಾರ್ಯಕ್ರಮ ಬಿಟ್ಟು ಊಟದ ಸರತಿ ಸಾಲಿನಲ್ಲಿ ನಿಂತಿದ್ದರು!
ಆಯೋಜಕರ ಮಾತು ಕೇಳಿಸಿಕೊಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಸಾಕಷ್ಟು ಸಮಯ ಹಿಡಿದಿರುವ ಕಾರ್ಯಕ್ರಮದಲ್ಲಿ ಸಭಿಕರ ತಾಳ್ಮೆ ಪರೀಕ್ಷೆ ಮಾಡುವುದಿಲ್ಲ. ನನ್ನ ಭಾಷಣ ಬೇಗ ಮುಗಿಸುವೆ ಎಂದು ಸಂಕ್ಷಿಪ್ತವಾಗಿ ಮಾತನಾಡಿದರು. ಅದಾದ ಬಳಿಕ ಮುಖ್ಯ ಅತಿಥಿಯ ಭಾಷಣ ಆರಂಭವಾಗುವ ವೇಳೆಗೆ ಅನೇಕರು ಕುರ್ಚಿ ಖಾಲಿ ಮಾಡಿದ್ದರು!
-ಸಿದ್ದು ಚಿಕ್ಕಬಳ್ಳೇಕೆರೆ
-ಸೋಮರಡ್ಡಿ ಅಳವಂಡಿ
-ವೆಂಕಟೇಶ್ ಕಲಿಪಿ
-ಮಂಜುನಾಥ್ ನಾಗಲೀಕರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ