
ತಿಪಟೂರು (ಜುಲೈ.24): ತುಮಕೂರು ಜಿಲ್ಲೆಯ ತಿಪಟೂರು ನಗರದ ಇಂದಿರಾನಗರದ ಆಂಜನೇಯ ದೇವಾಲಯ ಸರ್ಕಲ್ ಬಳಿ ವರಹ ಧ್ವಜ ಹಾರಿಸಿದ್ದಕ್ಕೆ ಐವರು ಹಿಂದೂ ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಘಟನೆಯನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ನಗರಸಭೆ ಆಯುಕ್ತರ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿವೆ. ಐದು ದಿನಗಳ ಹಿಂದೆ ಇಂದಿರಾನಗರ ನಿವಾಸಿಗಳಾದ ವಿಘ್ನೇಶ್, ಪ್ರಜ್ವಲ್, ಸಚಿನ್, ಶ್ರೇಯಸ್ ಮತ್ತು ಅಭಿಷೇಕ್ ಎಂಬ ಯುವಕರು ಧ್ವಜ ಹಾರಿಸಿದ್ದರು. ತಿಪಟೂರು ನಗರಸಭೆ ಆಯುಕ್ತರ ಆದೇಶದ ಮೇರೆಗೆ ಹೆಲ್ತ್ ಇನ್ಸ್ಪೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ ಈ ಯುವಕರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಈ ಕ್ರಮವನ್ನು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದ್ದು, ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ನಗರಸಭೆ ಆಯುಕ್ತರ ಮೇಲೆ ಪೊಲೀಸರು ಒತ್ತಡ?
ದೂರು ನೀಡುವಂತೆ ನಗರಸಭೆ ಆಯುಕ್ತರ ಮೇಲೆ ಪೊಲೀಸರು ಒತ್ತಡ ಹೇರಿದ್ದಾರೆ ಎಂದು ಪ್ರತಿಭಟನೆನಿರತ ಹಿಂದೂಪರ ಸಂಘಟನೆಗಳ ಆರೋಪಿಸಿವೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವಾಗಿದೆ. ಯುವಕರು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಕೇಸ್ ತಕ್ಷಣ ವಾಪಸ್ ತೆಗೆದುಕೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.
ನಗರದಲ್ಲಿ ಈ ಘಟನೆಯಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ಒಡ್ಡಿದ್ದಾರೆ. ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಈ ವಿವಾದ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಪೊಲೀಸರು ಮತ್ತು ಆಡಳಿತವು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ