'ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಂತೆ ಗುಡಿಯಲ್ಲೇಕೆ ಕುಳಿತೆ? ಬಾ...'

By Web DeskFirst Published Oct 18, 2019, 7:48 AM IST
Highlights

ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಂತೆ ಗುಡಿಯಲ್ಲೇಕೆ ಕುಳಿತೆ? ಬಾ...| ತನ್ನ ತಾಯಿ, ಮಕ್ಕಳ ಮೇಲಾಣೆ ಮಾಡಿದ ಮೇಲೆ ನನ್ನನ್ನು ಖರೀದಿಸಿದವನನ್ನು ಕರೆತರದ ಸಾ.ರಾ.ಮಹೇಶ್‌ ಒಬ್ಬ ಹೇಡಿ, ಪಲಾಯನವಾದಿ: ವಿಶ್ವನಾಥ್‌| 

ಮೈಸೂರು[ಅ.18]: ‘ನಾನು 25 ಕೋಟಿ ರು.ಗಳಿಗೆ ಮಾರಾಟವಾಗಿದ್ದೇನೆ ಎಂದು ತನ್ನ ತಾಯಿ, ಮಕ್ಕಳ ಮೇಲಾಣೆ ಮಾಡಿದ ಮೇಲೆ ನನ್ನನ್ನು ಖರೀದಿಸಿದವನನ್ನು ಕರೆತರದ ಸಾ.ರಾ.ಮಹೇಶ್‌ ಒಬ್ಬ ಹೇಡಿ, ಪಲಾಯನವಾದಿ, ಸುಳ್ಳಿನ ಸರದಾರ ಎಂದು ಜರಿದ ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಅವರು ‘ನೀನು ಕೊಂಡುಕೊಂಡವರನ್ನು ಕರೆತಂದ್ರೆ ಸಂಜೆವರೆಗೂ ಇಲ್ಲೇ ಕಾಯುತ್ತೇನೆ. ಹೀಗ್ಯಾಕೆ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಂತೆ ಗುಡಿಯ ಒಳಗೆ ಕುಳಿತ್ತಿದ್ದೀಯಾ? ಹೊರಗೆ ಬಾ’ ಎಂದು ಸವಾಲೆಸೆದರು.

ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಹೊರಗೆ ಸಾ.ರಾ. ಮಹೇಶ್‌ಗಾಗಿ ಕಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾರಾಟವಾಗಿದ್ದೇನೆ ಎಂದು ಸುಳ್ಳು ಆರೋಪ ಮಾಡಿರುವುದಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹುಸಿ ಮಾತನ್ನು ಹೇಳಿದ್ದ ಸಾ.ರಾ.ಮಹೇಶ್‌ ಸ್ವಾಗತಿಸುವ ಜತೆಗೆ ನನ್ನನ್ನು ಕೊಂಡುಕೊಂಡ ಭೂಪನನ್ನು ಸ್ವಾಗತಿಸಲು ಬಂದಿದ್ದೇನೆ. ಆಣೆ ಮಾಡುವಂತೆ ಮಹೇಶ್‌ ಸಾವಿರ ಕೇಳ್ತಾನೆ. ನನ್ನ ವಯಸ್ಸೇನು, ಅನುಭವವೇನು? 25 ಕೋಟಿ ರು. ಕೊಟ್ಟು ಕೊಂಡವನು ಬರಲಿಲ್ಲ ಅಂದ್ರೆ ಸುಮ್ಮ ಸುಮ್ಮನೇ ಪ್ರಮಾಣ ಯಾಕೆ ಮಾಡಲಿ ಎಂದು ಗುಡುಗಿದರು. ‘ಏಯ್‌ ಮಹೇಶ್‌, ನೀನೇನು ಟಾಟಾ, ಬಿರ್ಲಾನ? ಹುಣಸೂರಿನಲ್ಲಿ ನಾನೇ ಚುನಾವಣೆಗೆ ನಿಲ್ಲೋದು, ಮೂರನೇ ಸ್ಥಾನಕ್ಕೆ ಹೋಗುವವನು ನಾನಲ್ಲ, ನಿಮ್ಮ ಪಕ್ಷ’ ಎಂದು ಟೀಕಾ ಪ್ರಹಾರ ನಡೆಸಿದರು.

ಚಾಮುಂಡಿ ಸನ್ನಿಧಿಯಲ್ಲಿ ಆಣೆ- ಪ್ರಮಾಣದ ಭರಾಟೆ: ಏನೇನಾಯ್ತು? ಎಲ್ಲಾ ಸುದ್ದಿಗಳು ಒಂದು ಕ್ಲಿಕ್‌ನಲ್ಲಿ

ಕಣ್ಣೀರಿಗೆ ತಿರುಗೇಟು:

ಜೆಡಿಎಸ್‌ ಅಂದ್ರೆ ಕಣ್ಣೀರು, ಕಣ್ಣೀರು ಅಂದ್ರೆ ಜೆಡಿಎಸ್‌. ಸಾ.ರಾ. ಮಹೇಶ್‌ ಅಂದ್ರೇನೂ ಕಣ್ಣೀರು ಅಂತ ಎಂದು ವಿಶ್ವನಾಥ್‌ ಕುಟುಕಿದರು. ಸಾ.ರಾ ಮಹೇಶ್‌ ಕಣ್ಣೀರು ಹಾಕಿದ್ದ ಬಗ್ಗೆ ಟೀಕಿಸಿದ ಅವರು ನಾನು ಅವರ ತಂಟೆಗೆ ಹೋಗಲ್ಲ. ಅವರು ನನ್ನ ತಂಟೆಗೆ ಬರಬಾರದು. ಇದನ್ನು ಇಲ್ಲಿಗೆ ಕೊನೆ ಮಾಡೋಣ ಎಂದು ತಿಳಿಸಿದರು. ಸಾ.ರಾ. ಮಹೇಶ್‌ ಹುಸಿ ರಾಜೀನಾಮೆ ನೀಡಿದ್ದಾರೆ. ಹಾಗಾದರೆ ಅವರು ಜೆಡಿಎಸ್‌ ಬಿಟ್ಟು ಹಳೆಯ ಶೆಡ್‌ ಬಿಜೆಪಿಗೆ ಬರ್ತಾರಾ ಎಂದು ಟೀಕಿಸಿದರು.

ಹುಣಸೂರಲ್ಲಿ ನಾನೇ ಅಭ್ಯರ್ಥಿ

ಹುಣಸೂರು ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ. ನಾನು ಮೂರನೇ ಸ್ಥಾನಕ್ಕೆ ಹೋಗಲ್ಲ. ನಿಮ್ಮ ಪಾರ್ಟಿ ಮೂರನೇ ಸ್ಥಾನಕ್ಕೆ ಹೋಗುತ್ತದೆ. ಸಾ.ರಾ.ಮಹೇಶ್‌ರಿಂದ ಏನಾಗಿದೆ ಅಂತ ದೊಡ್ಡವರಾದ ದೇವೇಗೌಡರು ನೋಡಲಿ, ನಾಯಕರಾದ ಕುಮಾರಸ್ವಾಮಿ ನೋಡಲಿ. ನಾಡಿನ ಜನರಿಗೂ ಗೊತ್ತಾಗಬೇಕಿದೆ.

-ಎಚ್‌.ವಿಶ್ವನಾಥ್‌, ಅನರ್ಹಗೊಂಡ ಶಾಸಕ

click me!