ಕೊಡಗಿನಲ್ಲಿ ಆಗಸ್ಟ್ ತಿಂಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಇದಕ್ಕೆ ಜಿಲ್ಲೆಯ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಡಗು : ಕೊಡಗು ಜಿಲ್ಲೆ ಈ ಬಾರಿ ಭೀಕರ ಪ್ರವಾಹ ಪರಿಸ್ಥಿತಿ ಎದುರಿಸಿ ತತ್ತರಿಸಿ ಹೋಗಿತ್ತು. ಜನರು ಅನ್ನ ಆಶ್ರಯ ಕಳೆದುಕೊಂಡು ಪರದಾಡುತ್ತಿದ್ದ ವೇಳೆ ಈ ವಿನಾಶಕಾರಿ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿರ್ವಹಿಸಿದ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಸ್ಥಾನಕ್ಕೆ ಹೊಸ ಜಿಲ್ಲಾಧಿಕಾರಿ ಆಗಮಿಸಿದ್ದಾರೆ.
ಕೊಡಗಿಗೆ ಹೊಸ ಜಿಲ್ಲಾಧಿಕಾರಿಯಾಗಿ ಅನೀಸ್ ಕನ್ಮಣಿ ಜಾಯ್ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2 ತಿಂಗಳ ರಜೆ ಮೇರೆಗೆ ತೆರಳಿದ್ದ ಡಿಸಿ ಶ್ರೀ ವಿದ್ಯಾ ಸ್ಥಾನ ತೆರವಾಗಿದ್ದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಆಗಿದ್ದ ಜಾಯ್ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿದೆ. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕವಾದರೂ ಶ್ರೀ ವಿದ್ಯಾ ಅವರಿಗೆ ಇನ್ನೂ ಸರ್ಕಾರ ಪ್ಲೇಸ್‌ಮೆಂಟ್ ತಿಳಿಸಿಲ್ಲ.
ಜನರ ವಿರೋಧ : ಕೊಡಗು ಪ್ರಾಕೃತಿಕ ವಿಕೋಪ ನಿರ್ವಹಿಸಿ ಹಗಲಿರುಳು ದುಡಿದು ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಿದ್ದ ಪಿ ಐ ಶ್ರೀ ವಿದ್ಯಾ ವರ್ಗಾವಣೆ ಹಿಂದೆ ಕಾಣದ ಕೈಗಳಿವೆ ಎಂದು ಕೊಡಗಿನ ಜನತೆ ಆರೋಪಿಸಿದ್ದು, ಅವರ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವರ್ಗಾವಣೆ ಮಾಡದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿತ ಪೋಸ್ಟರ್ ಗಳನ್ನು ಹಾಕಿ ಅಭಿಯಾನ ಆರಂಭಿಸಿದ್ದಾರೆ.