ನಾಡಗೀತೆಗೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಅಧಿಕೃತಗೊಳಿಸಿ; ಹಕ್ಕೊತ್ತಾಯ

By Suvarna News  |  First Published Jan 29, 2020, 10:08 PM IST

ಮೈಸೂರು ಅನಂತಸ್ವಾಮಿ ಕುಟುಂಬದ ಬೇಸರ/ ಅನಂತಸ್ವಾಮಿಯವರ ಮಗಳಾದ ಸುನೀತಾ ಅನಂತಸ್ವಾಮಿ ಹಾಗೂ ಪತ್ನಿ ಶಾಂತ ಅನಂತಸ್ವಾಮಿ ಬೇಸರ/ ನಾಡಗೀತೆಗೆ ಮೈಸೂರು ಅನಂತಸ್ವಾಮಿಯವರ ರಾಗ ಸಂಯೋಜನೆಯನ್ನು ಅಧಿಕೃತಗೊಳಿಸಿ 


ಬೆಂಗಳೂರು(ಜ. 29)  ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯನ್ನು ಅಧಿಕೃತ ಎಂದು ಇನ್ನೂ ಘೋಷಿಸದಿರುವ ಬಗ್ಗೆ  ಮೈಸೂರು ಅನಂತಸ್ವಾಮಿ ಕುಟುಂಬ ತೀವ್ರ ಬೇಸರ ವ್ಯಕ್ತಪಡಿಸಿದೆ.

'ಅವಧಿ' ಅಂತರ್ಜಾಲ ತಾಣ ಇಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಬಹುರೂಪಿ' ಪ್ರಕಾಶನ ಪ್ರಕಟಿಸಿರುವ 'ನನ್ನ ಅಣ ಮೈಸೂರು ಅನಂತಸ್ವಾಮಿ' ಕೃತಿ ಬಿಡುಗಡೆ ಸಮಾರಂಭದಲ್ಲಿ ಈ ಬೇಸರ ವ್ಯಕ್ತವಾಯಿತು.

Tap to resize

Latest Videos

ಕೃತಿಯ ಲೇಖಕಿ, ಅನಂತಸ್ವಾಮಿಯವರ ಮಗಳಾದ ಸುನೀತಾ ಅನಂತಸ್ವಾಮಿ ಹಾಗೂ ಪತ್ನಿ ಶಾಂತ ಅನಂತಸ್ವಾಮಿ ಬೇಸರ ವ್ಯಕ್ತಪಡಿಸಿದರು. 2006ರಲ್ಲಿಯೇ ನಾಡಗೀತೆಗೆ ಯಾವ ರಾಗ ಸಂಯೋಜನೆಯನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಲು ಸರ್ಕಾರ ರಚಿಸಿದ್ದ ಸಮಿತಿಯು ಮೈಸೂರು ಅನಂತಸ್ವಾಮಿಯವರ ರಾಗವನ್ನು ಶಿಫಾರಸು ಮಾಡಿತ್ತು. ಆದರೂ ಸಹಾ ಅದನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿಲ್ಲ. ಇದರಿಂದ ನಾಡಗೀತೆಯ ರಾಗ ವಿವಾದಕ್ಕೆ ತುತ್ತಾಗಿದೆ ಎಂದರು.

ನಾಡಗೀತೆ 2.5 ನಿಮಿಷಕ್ಕೆ ಇಳಿಸಲು ಸರ್ಕಾರದ ನಿರ್ಧಾರ

ಮೈಸೂರು ಅನಂತಸ್ವಾಮಿಯವರು 'ಜಯ ಭಾರತ ಜನನಿಯ ತನುಜಾತೆ' ಹಾಡಿಗೆ ಸಂಯೋಜಿಸಿದ ರಾಗವನ್ನು ಸ್ವತಃ ಕುವೆಂಪುರವರೇ ಮೆಚ್ಚಿದ್ದರು. ಸರ್ಕಾರ ಈ ಗೀತೆಯನ್ನು ನಾಡಗೀತೆ ಎಂದು ಪರಿಗಣಿಸುವ ಸಾಕಷ್ಟು ಮುಂಚೆಯೇ ಅನಂತಸ್ವಾಮಿಯವರು ಇದನ್ನು ನಾಡಿನ ಎಲ್ಲೆಡೆ ಹಾಡಿ ಜನಪ್ರಿಯಗೊಳಿಸಿದ್ದರು. ಖ್ಯಾತ ಹಾಡುಗಾರರಾದ ಪಿ.ಕಾಳಿಂಗರಾಯರೂ ಸಹಾ ತಮ್ಮ ದಾಟಿಯನ್ನು ಬಿಟ್ಟು ಮೈಸೂರು ಅನಂತಸ್ವಾಮಿಯವರ ಸಂಯೋಜನೆಯನ್ನು ಮೆಚ್ಚಿ ಅದನ್ನು ಅಳವಡಿಸಿಕೊಂಡಿದ್ದರು. 

ಅನಂತಸ್ವಾಮಿ ಅವರು ಭಾವಗೀತೆಯ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ. ನಾಡಗೀತೆಯ ರಾಗವನ್ನು ವಿವಾದಗೊಳಿಸುವ ಮೂಲಕ ಅವರಿಗೆ ಅವಮಾನ ಮಾಡಬೇಡಿ ಎಂದು ಅವರ ಕುಟುಂಬದವರು ಮನವಿ ಮಾಡಿದರು.   ಮೈಸೂರು ಅನಂತಸ್ವಾಮಿಯವರನ್ನು ಆಪ್ತವಾಗಿ ಚಿತ್ರಿಸುವ ಈ ಕೃತಿಯನ್ನು ಪ್ರಸ್ತುತ ಅಮೆರಿಕಾದಲ್ಲಿರುವ ಸುನೀತಾ ಅನಂತಸ್ವಾಮಿ ರಚಿಸಿದ್ದು ಅಪರೂಪದ ಛಾಯಾಚಿತ್ರಗಳನ್ನು ಹೊಂದಿದೆ.  ಕೃತಿಯನ್ನು bahuroopi.in ನಲ್ಲಿ ಕೊಳ್ಳಲು ಅವಕಾಶ ಇದೆ.

click me!