
ಬೆಂಗಳೂರು : ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಭಕ್ತರಿಗಾಗಿ ಬೆಳಗಾವಿಯಲ್ಲಿ ತಿರುಪತಿ-ತಿರುಮಲ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದ್ದು, ಬಹುತೇಕ ವರ್ಷಾಂತ್ಯದಿಂದ ದೇವಸ್ಥಾನ ಕಾಮಗಾರಿ ಆರಂಭವಾಗಲಿದೆ ಎಂದು ಟಿಟಿಡಿ ಸದಸ್ಯ ಎಸ್.ನರೇಶ್ ಕುಮಾರ್ ತಿಳಿಸಿದ್ದಾರೆ.
ಶನಿವಾರ ನಗರದ ವೈಯಾಲಿಕಾವಲ್ ಟಿಟಿಡಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸೆ.16ರಂದು ನಡೆದ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಬೆಳಗಾವಿಯಲ್ಲಿ ತಿಮ್ಮಪ್ಪನ ದೇವಾಲಯ ನಿರ್ಮಿಸುವುದರಿಂದ ಆ ಭಾಗದ ಭಕ್ತರಿಗೆ ಅನುಕೂಲವಾಗಲಿದೆ. ಪ್ರತಿ ಬಾರಿಯೂ ತಿರುಪತಿ-ತಿರುಮಲಕ್ಕೆ ಭೇಟಿ ನೀಡುವ ಬದಲಾಗಿ ಸ್ಥಳೀಯವಾಗಿಯೇ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಭಾಗ್ಯ ಲಭಿಸಲಿದೆ ಎಂದರು.
ಬೆಳಗಾವಿ ಬಾಲಾಜಿ ಟ್ರಸ್ಟ್‌ನವರು ಸುವರ್ಣ ಸೌಧ ಬಳಿಯ 7ಎಕರೆ ಖಾಸಗಿ ಜಾಗ ದೇವಸ್ಥಾನಕ್ಕೆ ನೀಡಿದ್ದಾರೆ. ಮುಂದಿನ ತಿಂಗಳು ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರು ಬೆಳಗಾವಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಲಿದ್ದಾರೆ. ಪ್ರಾಥಮಿಕವಾಗಿ ಸುಮಾರು ₹ 70-₹100 ಕೋಟಿ ಮೊತ್ತದಲ್ಲಿ ದೇವಸ್ಥಾನ ನಿರ್ಮಾಣ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ವರ್ಷಾಂತ್ಯದಿಂದ ಕಾಮಗಾರಿ ಆರಂಭಿಸುವ ಉದ್ದೇಶವಿದೆ ಎಂದು ಹೇಳಿದರು.
- ಬೆಳಗಾವಿ ಸುವರ್ಣ ಸೌಧ ಬಳಿ ದೇಗುಲ ನಿರ್ಮಾಣಕ್ಕೆ 7 ಎಕರೆ ಜಾಗ
- ಸುಮಾರು ₹ 70-₹100 ಕೋಟಿ ಮೊತ್ತದಲ್ಲಿ ದೇವಸ್ಥಾನ ನಿರ್ಮಾಣ
- ವರ್ಷಾಂತ್ಯಕ್ಕೆ ದೇಗುಲ ನಿರ್ಮಾಣ ಕಾಮಗಾರಿ ಆರಂಭ ಉದ್ದೇಶ
- ತಿರುಮಲ ಬದಲು ಬೆಳಗಾವಿಯಲ್ಲೇ ವೆಂಕಟೇಶ್ವರ ದರ್ಶನ ಲಭ್ಯ
- ಗೋವಾ, ಮಹಾರಾಷ್ಟ್ರ. ಉತ್ತರ ಕರ್ನಾಟಕ ಭಕ್ತರಿಗೆ ಅನುಕೂಲ
ತಿರುಮಲಕ್ಕೆ ಉಚಿತ ಬಸ್ಸು ಇದೆಯಾ?
ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಇತ್ತೀಚೆಗೆ ಆರಂಭವಾದ ಉಚಿತ ಬಸ್ ಯೋಜನೆ ತಿರುಮಲಕ್ಕೆ ಅನ್ವಯಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ತಿರುಪತಿಯಿಂದ ತಿರುಮಲಕ್ಕೆ ಹೋಗುವ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ಯೋಜನೆ ಜಾರಿಯಾಗುವುದಿಲ್ಲ ಎಂದು ತಿರುಮಲ ಡಿಪೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಿರುಮಲಕ್ಕೆ ಹೋಗಬೇಕೆಂದರೆ ಟಿಕೆಟ್ ಖರೀದಿಸಲೇಬೇಕು. ಈ ನಿರ್ಧಾರದ ಹಿಂದೆ ಕೆಲವು ವಿಶೇಷ ಕಾರಣಗಳಿವೆ ಎಂದು ಆರ್‌ಟಿಸಿ ತಿಳಿಸಿದೆ. ಇದರಿಂದ ತಿರುಮಲಕ್ಕೆ ಹೋಗಲು ಬಯಸಿದ್ದ ರಾಜ್ಯದ ಮಹಿಳೆಯರಿಗೆ ನಿರಾಸೆ ಉಂಟಾಗಿದೆ.
ತಿರುಮಲಕ್ಕೆ ವಿನಾಯಿತಿ- ಭಕ್ತರಿಂದ ಅಸಮಾಧಾನ
ಆಗಸ್ಟ್ 15 ರಂದು ಸಿಎಂ ಚಂದ್ರಬಾಬು ನಾಯ್ಡು ವಿಜಯವಾಡದಲ್ಲಿ ಅದ್ದೂರಿಯಾಗಿ ಉಚಿತ ಬಸ್ ಯೋಜನೆಗೆ ಚಾಲನೆ ನೀಡಿದರು. ಮಹಿಳೆಯರಿಗೆ ವಿಶೇಷ ಟಿಕೆಟ್ ನೀಡುವ ಮೂಲಕ ಈ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಿದರು. ಬಳಿಕ ಅವರೊಂದಿಗೆ ಡಿಸಿಎಂ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್ ಕೂಡ ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು.
ರಾಜ್ಯಾದ್ಯಂತ ಈ ಯೋಜನೆ ಜಾರಿಯಲ್ಲಿದ್ದರೂ ತಿರುಮಲ ಮಾರ್ಗವನ್ನು ಹೊರತುಪಡಿಸಿರುವುದು ಗಮನಾರ್ಹ. ಇದರಿಂದ ಕೆಲವು ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ