
ಬೆಂಗಳೂರು (ಅ.26): ಕಾನೂನು ಶ್ರೀಮಂತರ ಕಡೆಗೆ ಜಾಸ್ತಿ ತೂಗುತ್ತದೆ ಅನ್ನೋದಕ್ಕೆ ಉದಾಹರಣೆ ಎನ್ನುವಂತೆ ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಕೇಸ್ ಸಾಗುತ್ತಿದೆ. ಬಿಗ್ ಬಾಸ್ ಸ್ಪರ್ಧಿ ಹಾಗೂ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎನ್ನುವ ಕಾರಣಕ್ಕೆ ಬಿಗ್ ಬಾಸ್ ಮನೆಗೆ ತೆರಳಿ ಅವರನ್ನು ರಾತ್ರೋರಾತ್ರಿ ಬಂಧಿಸಲಾಗಿದೆ. ಅವರ ಕೇಸ್‌ನಲ್ಲಿ ಹುಲಿ ಉಗುರು ಪೆಂಡೆಂಟ್ ಬಗ್ಗೆ ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ, ಒಂದೇ ದಿನದ ಅವಧಿಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೂ ಅಟ್ಟುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದರು.
ಆದರೆ, ಇದೇ ಧೈರ್ಯವನ್ನು ಅವರು ಸ್ಯಾಂಡಲ್‌ವುಡ್ ಸ್ಟಾರ್‌ಗಳಾದ ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್, ವಿನಯ್ ಗುರೂಜಿ, ಆರ್ಯವರ್ಧನ್ ಗುರೂಜಿ, ಅರ್ಚಕ ಧನಂಜಯ ವಿಚಾರದಲ್ಲಿ ತೋರಿಲ್ಲ. ಗುರುವಾರ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಅವರ ಹೇಳಿಕೆಯನ್ನು ನೋಡಿದರೆ, ದರ್ಶನ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಈಗಾಗಲೇ ಕ್ಲೀನ್‌ಚಿಟ್‌ಅನ್ನು ಕೊಡಲಾಗಿದೆ ಎನ್ನುವ ಲಕ್ಷಣ ಕಂಡಿದೆ. ಇನ್ನು ಜಗ್ಗೇಶ್ ಅವರ ಬಳಿಯಲ್ಲಿರುವುದು 40 ವರ್ಷದ ಹಿಂದಿನ ಉಗುರು ಎಂದು ಹೇಳುವ ಮೂಲಕ ಅದಕ್ಕೂ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ 5 ಕಡೆ ಸರ್ಚ್ ಮಾಡಿದ್ದೇವೆ. ಯಾರ ಮೇಲೆ ದೂರು ಬಂದಿತ್ತು ಅವರ ಮನೆ ಮೇಲೆ ದಾಳಿ ಮಾಡಿದ್ದೇವೆ. ದಾಳಿ ಮಾಡಿ ಉಗುರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ಉಗುರನ್ನು ಎಫ್‌ಎಫ್‌ಎಲ್‌ಗೆ ಕಳುಹಿಸಿದ್ದೇನೆ. ಅಲ್ಲಿಂದ ವರದಿ ಬಂದಮೇಲೆ ನಮಗೆ ಯಾವುದು ಹುಲಿ ಉಗುರು ಎನ್ನುವುದು ಖಾತ್ರಿಯಾಗುತ್ತದೆ. ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್,ರಾಕ್ ಲೈನ್ ವೆಂಕಟೇಶ್ ಮನೆಗೆ ಹೋಗಿ ವಿಚಾರಣೆ ಮಾಡಿದ್ದೇವೆ. ನಿಖಿಲ್ ,ದರ್ಶನ್ ಅವರಿಂದ ವಶಕ್ಕೆ ಪಡೆದ ಉಗುರು ಮೇಲ್ನೋಟಕ್ಕೆ ಒರಿಜಿಲ್ ಅಲ್ಲ ಎನ್ನುವ ರೀತಿ ಇದೆ. ಇನ್ನು ಜಗ್ಗೇಶ್ ಮನೆಯಲ್ಲಿ ಸಿಕ್ಕಿರುವುದು ತುಂಬಾ ಹಳೆಯದ್ದು. ಅದನ್ನು ಕೂಡ ಪರಿಶೀಲಿಸಲಾಗುತ್ತಿದೆ. ಉಗುರನ್ನ ಬದಲಾಯಿಸಿರುವ ಪ್ರಕರಣ ಕಂಡುಬಂದರೆ ಸಾಕ್ಷಿನಾಶದಡಿ ಪ್ರಕರಣ ದಾಖಲಿಸುತ್ತೇವೆ ಎಂದು ಕುಮಾರ್ ಪುಷ್ಕರ್ ಹೇಳಿದ್ದಾರೆ.
ಸಂತೋಷ್ ಕೇಸ್ ಅಲ್ಲಿ ಹೊಸ ಹುಲಿ ಉಗುರಾಗಿತ್ತು. ಹಾಗಾಗಿ ಬೇಗ ಪತ್ತೆಯಾಯಿತು. ಜಗ್ಗೇಶ್ ಮನೆಯಲ್ಲಿ ಸಿಕ್ಕಿರುವುದು ತುಂಬಾ ಹಳೆಯದು. ಹಾಗಾಗಿ ನಾವು ನೈಜತೆಯ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಜಗ್ಗೇಶ್ ಅವರ ಹಳೆಯ ವಿಡಿಯೋ ಸ್ಟೇಟ್‌ಮೆಂಟ್‌ನ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ದಾಳಿ ವೇಳೆ ನಕಲಿ ಉಗುರು ಎಂದು ನಮ್ಮ ಅಧಿಕಾರಿಗಳಿಗೆ ದರ್ಶನ್ ಹೇಳಿದ್ದಾರೆ. ಎಲ್ಲವನ್ನು ನಾವು ತನಿಖೆ ಮಾಡುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಇನ್ನೊಂದೆಡೆ ಎಚ್‌ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಧರಿಸಿರೋಸು ಸಿಂಥೆಟಿಕ್ ಉಗುರು ಎಂದು ಸ್ವತಃ ತಾವೇ ಹೇಳಿಕೆ ನೀಡಿದ್ದಾರೆ. ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾಗಿ ಹೇಳಿದ್ದರೂ, ಈ ಕೇಸ್ ಎಲ್ಲಿಯವರೆಗೆ ಹೋಗಿ ಮುಟ್ಟುತ್ತದೆ ಅನ್ನೋದು ಗೊತ್ತಿಲ್ಲ.
ನಟ ದರ್ಶನ್ ಮನೆಗೆ ನುಗ್ಗಿದ ಅರಣ್ಯಾಧಿಕಾರಿಗಳ ತಂಡ: ಹುಲಿ ಉಗುರು ಪತ್ತೆಗೆ ಶೋಧ
ಎಲ್ಲರ ಮೇಲೆಯೂ ಕ್ರಮ ಕೈಗೊಳ್ಳಲಾಗುತ್ತೆ ಎಂದು ಕುಮಾರ್ ಪುಷ್ಕರ್ ಹೇಳಿದ್ದರೂ, ಒಟ್ಟಾರೆ ಪ್ರಕರಣದಲ್ಲಿ ಕಾಣುತ್ತಿರುವುದು ಹಣ ಹಾಗೂ ರಾಜಕೀಯ ಬಲ ಇಲ್ಲದವರ ಬವಣೆಯಷ್ಟೇ.
ಇನ್ನೊಂದೆಡೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಇರಿಸಿಕೊಂಡಿರುವ ಕಾರಣಕ್ಕೆ ಬಂಧಿಸಲಾಗಿಲ್ಲ. ವಿಚಾರಣೆಗೆ ಸ್ಪಂದಿಸದ ಕಾರಣದಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನುವ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸ್ಯಾಂಡಲ್‌ವುಡ್ ನಟರ ವಿಚಾರದಲ್ಲಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ದಿನವೇ ದರ್ಶನ್, ಜಗ್ಗೇಶ್, ರಾಕ್‌ಲೈನ್ ವೆಂಕಟೇಶ್, ಅರ್ಚಕ ಧನಂಜಯ ಅವರು ಹುಲಿ ಉಗುರು ಧರಿಸಿರುವ ಫೋಟೋ ವೈರಲ್ ಆಗಿತ್ತು. ಆದರೆ, ಕ್ರಮ ಕೈಗೊಳ್ಳಲು ಇಲಾಖೆ ಭರ್ತಿ ನಾಲ್ಕು ದಿನ ತೆಗೆದುಕೊಂಡಿತು.
ಹುಲಿ ಉಗುರು ಪೆಂಡೆಂಟ್ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್: ನಿಖಿಲ್ ಕುಮಾರಸ್ವಾಮಿ ಬಚಾವ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ