ಕರ್ನಾಟಕದ 10 ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಸಿಡಿಲಿಗೆ ಮೂವರು ಸಾವು

Published : Apr 12, 2024, 05:15 AM IST
ಕರ್ನಾಟಕದ 10 ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಸಿಡಿಲಿಗೆ ಮೂವರು ಸಾವು

ಸಾರಾಂಶ

ಕಲ್ಯಾಣ ಕರ್ನಾಟಕದ ಬಹುತೇಕ ಕಡೆ ತಾಪಮಾನ 40 ದಾಟಿ ಜನ ಸಂಕಷ್ಟ ಅನುಭವಿಸುತ್ತಿದ್ದ ಹೊತ್ತಿನಲ್ಲೇ ವಿಜಯಪುರ, ಕಲಬುರಗಿ, ಧಾರವಾಡ, ಗದಗ, ಯಾದಗಿರಿ, ಬೀದರ್‌, ರಾಯಚೂರು, ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಕಡೆ ಮಳೆಯ ಸಿಂಚನ ಮಾಡುವ ಮೂಲಕ ವರುಣ ತಂಪಿನ ಅನುಭವ ನೀಡಿದ್ದಾನೆ.

ಬೆಂಗಳೂರು(ಏ.12): ನೆತ್ತಿ ಸುಡುವ ಬಿಸಿಲಿನಲ್ಲೇ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ಜನತೆಗೆ ಕೊನೆಗೂ ಮಳೆರಾಯ ತಂಪಿನ ಸಿಂಚನ ನೀಡಿದ್ದಾನೆ. ಬುಧವಾರ ರಾತ್ರಿಯಿಂದೀಚೆಗೆ ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಲಕಾಲ ಭಾರೀ ಗಾಳಿ ಸಹಿತ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನ ಕೊಂಚ ನಿರಾಳರಾಗಿದ್ದಾರೆ. ಏತನ್ಮಧ್ಯೆ, ಹೊಸ ವರ್ಷದ ಮೊದಲ ಮಳೆಗೆ ವಿಜಯಪುರ ಜಿಲ್ಲೆಯಲ್ಲಿ ಬಾಲಕ ಸೇರಿ ಮೂವರು ಬಲಿಯಾಗಿದ್ದಾರೆ.

ಕಲ್ಯಾಣ ಕರ್ನಾಟಕದ ಬಹುತೇಕ ಕಡೆ ತಾಪಮಾನ 40 ದಾಟಿ ಜನ ಸಂಕಷ್ಟ ಅನುಭವಿಸುತ್ತಿದ್ದ ಹೊತ್ತಿನಲ್ಲೇ ವಿಜಯಪುರ, ಕಲಬುರಗಿ, ಧಾರವಾಡ, ಗದಗ, ಯಾದಗಿರಿ, ಬೀದರ್‌, ರಾಯಚೂರು, ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಕಡೆ ಮಳೆಯ ಸಿಂಚನ ಮಾಡುವ ಮೂಲಕ ವರುಣ ತಂಪಿನ ಅನುಭವ ನೀಡಿದ್ದಾನೆ.

ನಾಳೆಯಿಂದ 5 ದಿನ ಕರ್ನಾಟಕದಲ್ಲಿ ಮಳೆ ಸಾಧ್ಯತೆ

ವಿಜಯಪುರದಲ್ಲಿ ಸಿಡಿಲಬ್ಬರ:

ವಿಜಯಪುರ ಜಿಲ್ಲೆಯಲ್ಲಿ ಸಿಡಿಲಬ್ಬರದೊಂದಿಗೆ ಬುಧವಾರ ರಾತ್ರಿ ಮತ್ತು ಗುರುವಾರ ಸಂಜೆ ಕೆಲಕಾಲ ಸಾಧಾರಣ ಮಳೆಯಾಗಿದ್ದು, ಮೂವರನ್ನು ಬಲಿಪಡೆದಿದೆ. ಇಂಡಿ ತಾಲೂಕಿನಲ್ಲಿ ಗಿಡದ ಕೆಳಗೆ ಆಡು ಕಟ್ಟುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಬೀರಪ್ಪ, ಮಸಳಿ ಬಿ.ಕೆ.ಗ್ರಾಮದಲ್ಲಿ ಹೊಲದಲ್ಲಿ ಈರುಳ್ಳಿ ತುಂಬುತ್ತಿದ್ದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (45) ಹಾಗೂ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿ ಸುನಂದಾ ಶ್ರೀಮಂತ ಡೊಳ್ಳಿ (50) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಇದರ ಜತೆಗೆ ಎಮ್ಮೆ ಸೇರಿ ಕೆಲ ಜಾನುವಾರುಗಳೂ ಸಿಡಿಲಬ್ಬರಕ್ಕೆ ಬಲಿಯಾಗಿವೆ.

ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಕೆಲಕಾಲ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಕೆಲಕಾಲ ಮಳೆಯಾಗಿದ್ದು, 44 ಡಿಗ್ರಿ ಉಷ್ಣಾಂಶದಿಂದ ತತ್ತರಿಸಿದ್ದ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲೂ ಸಿಡಿಲಬ್ಬರಕ್ಕೆ ಎಮ್ಮೆ ಮೃತಪಟ್ಟಿದ್ದು, ದಣ್ಣೂರ ಗ್ರಾಮದಲ್ಲಿ ಎತ್ತೊಂದು ಬಲಿಯಾಗಿದೆ.

ಮಲೆನಾಡಲ್ಲಿ ಮಳೆ: ಮಲೆನಾಡಲ್ಲಿ ಕೆಲ ದಿನಗಳ ಹಿಂದಷ್ಟೇ ಮಳೆಯಾಗಿ ಆ ನಂತರ ಬಿಸಿಲ ತಾಪ ಮತ್ತಷ್ಟು ಏರಿಕೆಯಾಗಿತ್ತು. ಇದೀಗ ಈ ಭಾಗದಲ್ಲಿ ಮತ್ತೆ ಮಳೆಯಾಗಿದ್ದು, ಕಾಫಿ ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು, ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾದರೆ, ಕೊಡಗು ಜಿಲ್ಲೆಯ ವಿರಾಜಪೇಟೆ, ಕರಡ, ಪಾಲಂಗಾಲ ಸೇರಿ ವಿವಿಧೆಡೆ ಉತ್ತಮ ಮಳೆ ಸುರಿದಿದೆ.

ಹಲವು ರಾಜ್ಯಗಳಲ್ಲಿ ಭಾರಿ ಸೆಖೆ ಬಿಸಿಗಾಳಿ: ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

ಬೊಮ್ಮಾಯಿ ಪ್ರಚಾರಕ್ಕೆ ಅಡ್ಡಿ

ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಮಧ್ಯಾಹ್ನ ಸುಮಾರು 1 ಗಂಟೆ ಉತ್ತಮ ಮಳೆಯಾಗಿದ್ದು, ಈ ವೇಳೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಚುನಾವಣಾ ಪ್ರಚಾರ ಸಭೆಯನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು.

ಹಾರಿಹೋದ ಚೆಕ್‌ಪೋಸ್ಟ್‌

ಧಾರವಾಡದಲ್ಲಿ ಜಿಟಿಜಿಟಿ ಮಳೆಯಾಗಿದ್ದರೂ ಗಾಳಿ ಅಬ್ಬರ ತುಸು ಜೋರೇ ಇತ್ತು. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊರವಲಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಚೆಕ್‌ಪೋಸ್ಟ್‌ನ ತಗಡುಗಳು ಭಾರೀ ಗಾಳಿಗೆ ಹಾರಿ ಹೋಗಿದೆ. ಅದೃಷ್ಟವಶಾತ್‌ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!