ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದು ದುಂಡಾವರ್ತನೆ ತೋರಿರುವ ಘಟನೆ ರಾಜಧಾನಿಯ ಲಗ್ಗೆರೆ ಸಮೀಪ ಬುಧವಾರ ನಡೆದಿದೆ.
ಬೆಂಗಳೂರು (ಡಿ.26): ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದು ದುಂಡಾವರ್ತನೆ ತೋರಿರುವ ಘಟನೆ ರಾಜಧಾನಿಯ ಲಗ್ಗೆರೆ ಸಮೀಪ ಬುಧವಾರ ನಡೆದಿದೆ. ಇದರ ಬೆನ್ನಲ್ಲೇ ಘಟನೆಯನ್ನು ಖಂಡಿಸಿ ಹಾಗೂ ಮೊಟ್ಟೆ ಎಸೆದದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ಆರೋಪಿಸಿ ರಸ್ತೆಯಲ್ಲೇ ಕುಳಿತು ಶಾಸಕ ಮುನಿರತ್ನ ಧರಣಿ ಕುಳಿತರೆ, ಇದಕ್ಕೆ ಪ್ರತಿಯಾಗಿ ಶಾಸಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿದ್ದಾರೆ. ಆಗ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು, ಲಗ್ಗೆರೆ ವ್ಯಾಪ್ತಿಯಲ್ಲಿ ಕೆಲ ಹೊತ್ತು ಬಿಗುವಿನ ಪರಿಸ್ಥಿತಿ ನೆಲೆಸಿತು.
ಕೂಡಲೇ ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ನಿಯೋಜನೆಗೊಂಡ ಬಳಿಕ ಸಂಜೆ ವೇಳೆಗೆ ಪ್ರಕ್ಷುಬ್ಧ ವಾತಾವರಣ ಶಾಂತವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿತು. ಬಿಬಿಎಂಪಿ ಲಗ್ಗೆರೆ ವಾರ್ಡ್‌ನ ಲಕ್ಷ್ಮೀದೇವಿ ನಗರದಲ್ಲಿ ಬಿಜೆಪಿ ಘಟಕ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುವಾಗ ಶಾಸಕರ ಮೇಲೆ ದಿಢೀರನೇ ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದಾರೆ. ಆಗ ಶಾಸಕರ ತಲೆಗೆ ಮೊಟ್ಟೆ ಬಡಿದಿದೆ. ಈ ಕೃತ್ಯ ಎಸಗಿದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ವಿಶ್ವನಾಥ್, ಅಶ್ವತ್ಥ್, ವಿಶ್ವ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
undefined
ನನ್ನ ಮಾತಿಗೆ ಗೌರವ ಕೊಟ್ಟು ಬರುವುದಾದರೆ ಲಕ್ಷ್ಮಿ- ರವಿ ಮಧ್ಯೆ ಸಂಧಾನಕ್ಕೆಈಗಲೂ ರೆಡಿ: ಹೊರಟ್ಟಿ
ಭದ್ರತೆ ನಡುವೆ ತೂರಿ ಬಂತು ಮೊಟ್ಟೆ: ಅತ್ಯಾಚಾರ, ಹನಿಟ್ರ್ಯಾಪ್ ಹಾಗೂ ಜಾತಿ ನಿಂದನೆ ಆರೋಪಗಳ ಬಳಿಕ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಅವರ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ ಲಕ್ಷ್ಮೀದೇವಿ ನಗರದಲ್ಲಿ ಶನಿವಾರ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಸ್ಥಳೀಯ ಬಿಜೆಪಿ ಘಟಕ ಆಯೋಜಿಸಿತ್ತು. ಇನ್ನು ಲಕ್ಷ್ಮೀದೇವಿ ನಗರದ ಕಸ ವಿಲೇವಾರಿ ಗುತ್ತಿಗೆ ವಿಚಾರವಾಗಿ ಗುತ್ತಿಗೆದಾರ ಚೆಲುವರಾಜ್ ಅವರಿಗೆ ಬೆದರಿಕೆ ಹಾಕಿ ಲಂಚ ಕೇಳಿದ ಆರೋಪಕ್ಕೆ ಶಾಸಕ ಮುನಿರತ್ನ ತುತ್ತಾಗಿದ್ದರು. ಅದೇ ವಾರ್ಡ್‌ನ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರಿಗೆ ಶಾಸಕರು ಜಾತಿ ನಿಂದನೆ ಮಾಡಿದ್ದ ಆರೋಪವು ಎಸ್‌ಐಟಿ ತನಿಖೆಯಲ್ಲಿ ರುಜುವಾತಾಗಿತ್ತು.
ಈ ಎರಡು ಪ್ರಕರಣಗಳು ಭಾರಿ ವಿವಾದಕ್ಕೀಡಾಗಿದ್ದವು. ಈ ಪ್ರಕರಣಗಳ ಕಾವು ತಣ್ಣಾಗುವ ಮುನ್ನವೇ ಲಕ್ಷ್ಮೀದೇವಿ ನಗರದಲ್ಲೇ ಶಾಸಕ ಮುನಿರತ್ನ ಸಾರಥ್ಯದಲ್ಲಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಸಮಾರಂಭ ಆಯೋಜಿಸಿದ್ದು ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಯಿತು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸುವ ಮಾಹಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಮಾರು 100ಕ್ಕೂ ಹೆಚ್ಚಿನ ಪೊಲೀಸರನ್ನು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ನಿಯೋಜಿಸಿದ್ದರು.
ಈ ಭದ್ರತೆ ನಡುವೆಯೇ ಕಾರ್ಯಕ್ರಮ ಮುಗಿಸಿ ಸ್ಥಳೀಯ ಬಿಜೆಪಿ ಮುಖಂಡರ ಜತೆ ಮಾತನಾಡುತ್ತಾ ಹೊರ ಬರುತ್ತಿದ್ದ ಮುನಿರತ್ನ ಮೇಲೆ ಕಿಡಿಗೇಡಿಗಳು ಮೊಟ್ಟೆ ತೂರಿದ್ದಾರೆ. ಆಗ ಶಾಸಕರ ತಲೆಗೆ ಮೊಟ್ಟೆ ಬಿದ್ದಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು, ಮೊಟ್ಟೆ ಎಸೆದವರ ಮೇಲೆರಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಹಿಡಿದು ಥಳಿಸಿದ್ದಾರೆ. ಅಷ್ಟರಲ್ಲಿ ಅಲ್ಲೇ ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸರು, ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೈಕ್ ಜಖಂ, ಕಚೇರಿ ಮುತ್ತಿಗೆ ಯತ್ನ: ಮೊಟ್ಟೆ ಎಸೆತ ಘಟನೆಯಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು, ಮೊಟ್ಟೆ ಎಸೆದಿದ್ದ ಎನ್ನಲಾದ ವ್ಯಕ್ತಿಗೆ ಸೇರಿದ ಬೈಕ್ ಅನ್ನು ಜಖಂಗೊಳಿಸಿದರು. ಅಲ್ಲದೆ ಲಕ್ಷ್ಮೀದೇವಿ ನಗರ ವಾರ್ಡ್‌ನ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ತೋರಿದರು.
ರಸ್ತೆಯಲ್ಲೇ ಶಾಸಕರ ಧರಣಿ: ಮೊಟ್ಟೆ ಎಸೆತ ಘಟನೆಯಿಂದ ವಿಚಲಿತರಾದ ಮುನಿರತ್ನ, ತಕ್ಷಣವೇ ಲಕ್ಷ್ಮೀದೇವಿ ನಗರದಲ್ಲಿ ನಡು ರಸ್ತೆಯಲ್ಲೇ ಧರಣಿ ಕುಳಿತು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಕೊಲೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸ್ಥಳೀಯ ಕಾಂಗ್ರೆಸ್ ನಾಯಕರಾದ ಹನುಮಂತರಾಯಪ್ಪ ಹಾಗೂ ಕುಸುಮಾ ಸಂಚು ರೂಪಿಸಿದ್ದಾರೆ ಎಂದು ಶಾಸಕರು ಆರೋಪಿಸಿ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಅತ್ಯಾಚಾರ ಪ್ರಕರಣದ ಬಳಿಕ ಕಳೆಗುಂದಿರುವ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮೊಟ್ಟೆ ಎಸೆತ ನಾಟಕವನ್ನು ಸೃಷ್ಟಿಸಿದ್ದಾರೆ ಎಂದು ಶಾಸಕರ ವಿರುದ್ಧ ಕಾಂಗ್ರೆಸ್ ನಾಯಕರು ದೂರಿದರು.
ತಕ್ಷಣವೇ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡು ಪ್ರತಿಭಟನಾನಿರತರನ್ನು ಮನವೊಲಿಸಿದರು. ಆಗ ಧರಣಿ ಕೈಬಿಟ್ಟು ಕೆ.ಸಿ.ಜನರಲ್ ಆಸ್ಪತ್ರೆಗೆ ತೆರಳಿ ಶಾಸಕರು ಚಿಕಿತ್ಸೆ ಪಡೆದರು. ಬಳಿಕ ಲಕ್ಷ್ಮೀದೇವಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಖಾಕಿ ಪಡೆ ಕಟ್ಟೆಚ್ಚರ ವಹಿಸಿದೆ.
ಪೊಲೀಸರಿಗೆ ಮೊದಲೇ ಇತ್ತು ಮಾಹಿತಿ: ಅತ್ಯಾಚಾರ ಆರೋಪ ಹಿನ್ನೆಲೆಯಲ್ಲಿ ಶಾಸಕ ಮುನಿರತ್ನ ಮೇಲೆ ಗ್ರೀಸ್ ಬಳಿಯಲು ಅಥವಾ ಮೊಟ್ಟೆ ಎಸೆಯಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧತೆ ನಡೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಕಾರ್ಯಕ್ರಮಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಮೃತ ಮಹಿಳೆ ಕುಟುಂಬಕ್ಕೆ ಅಲ್ಲು ಅರ್ಜುನ್, ‘ಪುಷ್ಪ’ ತಂಡದಿಂದ 2 ಕೋಟಿ ರು.
ಮೊಟ್ಟೆ ಎಸೆತ ಸಂಬಂಧ ಅಧಿಕೃತವಾಗಿ ಶಾಸಕರಿಂದ ದೂರು ಬಂದಿಲ್ಲ. ಶಾಸಕರು ದೂರು ನೀಡಿದರೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ.
-ಸೈದುಲು ಅಡಾವತ್, ಡಿಸಿಪಿ, ಉತ್ತರ ವಿಭಾಗ