ಪಿಂಚಣಿ ಬಾರದೆ ಸಾವಿರಾರು ಫಲಾನುಭವಿಗಳ ಪರದಾಟ

By Kannadaprabha News  |  First Published Jun 19, 2023, 4:47 AM IST
  • ಪಿಂಚಣಿ ಬಾರದೆ ಸಾವಿರಾರು ಫಲಾನುಭವಿಗಳ ಪರದಾಟ
  • ವೃದ್ಧಾಪ್ಯ ವೇತನ, ವಿಧವಾ ವೇತನ ಬರು​ತ್ತಲೇ ಇಲ್ಲ
  • ಎರಡ್ಮೂರು ತಿಂಗಳಾದರೂ ಹಣ ಸಂದಾಯವಿಲ್ಲ
  • ರಾಜ್ಯದಲ್ಲಿದ್ದಾರೆ 78 ಲಕ್ಷ ಫಲಾನುಭವಿಗಳು
  • ಈ ಪೈಕಿ 64 ಸಾವಿರ ಮಂದಿಗೆ ವೇತನ ಬಂದಿ​ಲ್ಲ

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು (ಜೂ.19) ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯ ಸಹಸ್ರಾರು ಅರ್ಹ ಫಲಾನುಭವಿಗಳು ಎರಡ್ಮೂರು ತಿಂಗಳಾದರೂ ಖಾತೆಗೆ ಹಣ ಸಂದಾಯವಾಗದೇ ಪರದಾಡುವಂತಾಗಿದೆ.

Tap to resize

Latest Videos

ಕಂದಾಯ ಇಲಾಖೆಯು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಮೂಲಕ ರಾಜ್ಯದ ಸುಮಾರು 78 ಲಕ್ಷ ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಮನಸ್ವಿನಿ, ಮೈತ್ರಿ ಮತ್ತಿತರ ಯೋಜನೆಗಳಡಿ ಪ್ರತಿ ತಿಂಗಳೂ ಬ್ಯಾಂಕ್‌, ಅಂಚೆ ಖಾತೆ ಮೂಲಕ ನೇರವಾಗಿ ಹಣ ಪಾವತಿಸುತ್ತಿದ್ದು ಎರಡ್ಮೂರು ತಿಂಗಳಿನಿಂದೀಚೆಗೆ ಹಣ ಬಾರದೆ ಸಾವಿರಾರು ಫಲಾನುಭವಿಗಳು ಸಂಕಷ್ಟಅನುಭವಿಸುವಂತಾಗಿದೆ.

ಹಳೆ ಪಿಂಚಣಿ ಮರುಜಾರಿಗೆ ಸಂಪುಟದಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

‘ತಾಂತ್ರಿಕ ಕಾರಣದಿಂದಾಗಿ ಹಣ ಪಾವತಿ ವಿಳಂಬವಾಗಿದೆ. ಜೊತೆಗೆ ಫಲಾನುಭವಿಗಳು ಆಧಾರ್‌ ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಿರುವುದರಿಂದ ಯಾರು ಜೋಡಣೆ ಮಾಡಿಲ್ಲವೋ ಅಂತಹವರಿಗೆ ನಗದು ವರ್ಗಾವಣೆ ಆಗುವುದನ್ನು ತಡೆ ಹಿಡಿಯಲಾಗಿದೆ. ಅರ್ಹರಿಗೆ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಮೂಲಗಳು ಸ್ಪಷ್ಟಪಡಿಸಿವೆ.

64 ಸಾವಿರ ಪಾವತಿಗೆ ಬ್ರೇಕ್‌:

2018 ಕ್ಕೂ ಮುನ್ನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ಆಧಾರ್‌ ಜೋಡಣೆ ಕಡ್ಡಾಯ ಮಾಡಿರಲಿಲ್ಲ. ಇದರಿಂದಾಗಿ ಕೆಲವರು ಎರಡೆರಡು ಯೋಜನೆಯ ಫಲಾನುಭವಿಗಳಾಗಿದ್ದರು. ಇದನ್ನು ತಡೆಗಟ್ಟಲು ಆಧಾರ್‌ ಜೋಡಣೆ ಕಡ್ಡಾಯ ಮಾಡಿದ್ದು 2022ರ ಸೆಪ್ಟೆಂಬರ್‌ವರೆಗೂ ಅವಕಾಶ ನೀಡಲಾಗಿತ್ತು. ಬಳಿಕ ಡಿಸೆಂಬರ್‌ ಹಾಗೂ 2023​ರ ಮಾಚ್‌ರ್‍ವರೆಗೂ ವಿಸ್ತರಿಸಲಾಗಿತ್ತು. ನಂತರವೂ ಆಧಾರ್‌ ಜೋಡಣೆ ಮಾಡದ 64 ಸಾವಿರ ಫಲಾನುಭವಿಗಳಿಗೆ ಹಣ ಪಾವತಿಸುವುದನ್ನು ತಡೆ ಹಿಡಿಯಲಾಗಿದೆ.

ಅರ್ಹರು ಏನು ಮಾಡಬೇಕು ?

2022ರ ಸೆಪ್ಟೆಂಬರ್‌ ಬಳಿಕ ಆಧಾರ್‌ ಜೋಡಣೆ ಮಾಡದಿರುವ ಅರ್ಹ ಫಲಾನುಭವಿಗಳು ಸಮೀಪದ ಅಟಲ್‌ ಜೀ ಜನಸ್ನೇಹಿ ಕೇಂದ್ರ ಅಥವಾ ನಾಡ ಕಚೇರಿಗಳಿಗೆ ತೆರಳಿ ತಮ್ಮ ಆಧಾರ್‌ ಕಾರ್ಡ್‌ ಜೆರಾಕ್ಸ್‌ ನೀಡಬೇಕು ಆಗ ಅಲ್ಲಿನ ಸಿಬ್ಬಂದಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಪರಿಶೀಲಿಸಿ ಆಧಾರ್‌ ಅಪ್‌ಡೇಟ್‌ ಆಗಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತಾರೆ. ಒಂದೊಮ್ಮೆ ಆಧಾರ್‌ ಜೋಡಣೆ ಆಗಿರದಿದ್ದರೆ ಅಪ್‌ಡೇಟ್‌ ಮಾಡಿಸಿದರೆ ಹಣ ಪಾವತಿ ಆಗುವುದು ಮುಂದುವರೆಯುತ್ತದೆ. ಎಷ್ಟುತಿಂಗಳು ಪಾವತಿ ಆಗಿರುವುದಿಲ್ಲವೋ ಅಷ್ಟೂಮೊತ್ತ ಫಲಾನುಭವಿಯ ಖಾತೆಗೆ ಜಮೆ ಆಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪಿಂಚಣಿ ಉದ್ಯೋಗಿಯ ಹಕ್ಕು, ವೇತನ ಕಡಿತ ತಪ್ಪಾಯಿತೆಂದು ಅದನ್ನು ನಿರಾಕರಿಸುವಂತಿಲ್ಲ: ಸುಪ್ರೀಂ ತೀರ್ಪು

ತಾಂತ್ರಿಕ ಕಾರಣದಿಂದಾಗಿ ಹಣ ಪಾವತಿ ವಿಳಂಬವಾಗಿದ್ದು ಇದೀಗ ಅರ್ಹರ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಧಾರ್‌ ಜೋಡಣೆ ಮಾಡದ 64 ಸಾವಿರ ಜನರಿಗೆ ಹಣ ನಿಲ್ಲಿಸಲಾಗಿದೆ.

- ಬಿ.ವಿ.ಅಶ್ವಿಜ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕಿ

click me!