ನನ್ನನ್ನು ಗೇಲಿ ಮಾಡಿದವರಿಗೆ ಈಗ ಉತ್ತರ ಸಿಕ್ಕಿದೆ: ಸಚಿವ ಶ್ರೀರಾಮುಲು

By Kannadaprabha News  |  First Published Oct 9, 2022, 9:57 AM IST

ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಸಂಬಂಧ ನನ್ನನ್ನು ಗೇಲಿ ಮಾಡಿದವರಿಗೆ ಇಂದು ಉತ್ತರ ದೊರೆತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.


ಬೆಂಗಳೂರು (ಅ.09): ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಸಂಬಂಧ ನನ್ನನ್ನು ಗೇಲಿ ಮಾಡಿದವರಿಗೆ ಇಂದು ಉತ್ತರ ದೊರೆತಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ನುಡಿದಂತೆ ನಡೆದ ಸರ್ಕಾರ. ವಾಲ್ಮೀಕಿ ಸಮುದಾಯ ಸೇರಿದಂತೆ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಇದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.

ಎಸ್‌ಸಿ ಹಾಗೂ ಎಸ್‌ಟಿಯಲ್ಲಿ 151 ಜಾತಿಗಳು ಬರುತ್ತವೆ. ಮೀಸಲಾತಿ ಹೆಚ್ಚಿಸುವ ಕುರಿತ ಹೋರಾಟ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಹಿಂದಿನ ಸರ್ಕಾರಗಳು ಕ್ರಮ ಕೈಗೊಂಡಿರಲಿಲ್ಲ. ಇದೀಗ ನಮ್ಮ ಸರ್ಕಾರ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ, ಎಸ್‌ಟಿ ಮೀಸಲಾತಿ ಶೇ.3ರಿಂದ 7ಕ್ಕೆ ಹೆಚ್ಚಳ ಮಾಡಿದೆ. ಶ್ರೀರಾಮುಲು ಕೇವಲ ಮಾತನಾಡುತ್ತಾರೆ, ಕೆಲಸ ಮಾಡಲ್ಲ ಎಂದು ಗೇಲಿ ಮಾಡಿದವರಿಗೆ, ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಹೀಯಾಳಿಸುತ್ತಿದ್ದವರಿಗೆ ಇಂದು ಉತ್ತರ ದೊರೆತಿದೆ ಎಂದು ಹೇಳಿದರು.

Tap to resize

Latest Videos

241 ದಿನಗಳ ವಾಲ್ಮೀಕಿ ಶ್ರೀ ಮೀಸಲು ಧರಣಿ ಅಂತ್ಯ

ಬಿಜೆಪಿಯಿಂದ ವಿಜಯೋತ್ಸವ: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ಯಾದಗಿರಿ, ಬಳ್ಳಾರಿ, ಹುಬ್ಬಳ್ಳಿ, ಹೊಸಪೇಟೆ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಯ ಕಾರಟಗಿ ಸೇರಿ ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ವಿಜಯೋತ್ಸವ ಆಚರಿಸಿದರು. 

ಎಸ್ಸಿ-ಎಸ್ಟಿಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ನ್ಯಾ. ನಾಗಮೋಹನ್‌ದಾಸ್‌ ನೀಡಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿರುವುದು ಸ್ವಾಗತಾರ್ಹ. ಸರ್ಕಾರದ ಈ ನಿರ್ಧಾರದಿಂದ ಇಡೀ ರಾಜ್ಯದ ಶೋಷಿತ ಸಮುದಾಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಈಗ ಒಳಮೀಸಲಾತಿ ಅಸ್ತ್ರಕ್ಕೆ ಬಿಜೆಪಿ ಸರ್ಕಾರದಿಂದ ಸಿದ್ಧತೆ

ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹಾಲೆರೆದ ಶಾಸಕ ಜಿ.ಸೋಮಶೇಖರ ರೆಡ್ಡಿ ಹಾಗೂ ಪಕ್ಷದ ನಾಯಕರು, ಕಾರ್ಯಕರ್ತರು ಬಳಿಕ ಸಿ.ಎಂ.ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಬಿ.ಶ್ರೀರಾಮುಲು ಅವರ ಬ್ಯಾನರ್‌ಗೆ ಹಾಲೆರೆದು ಸಂಭ್ರಮಿಸಿದರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರು 101 ತೆಂಗಿನಕಾಯಿಗಳನ್ನು ಒಡೆದು ಪಟಾಕಿ ಸಿಡಿಸಿದರಲ್ಲದೆ, ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಇನ್ನು ವಿಜಯನಗರ, ಹಾವೇರಿ, ಬಾಗಲಕೋಟೆ, ಯಾದಗಿರಿ ಮತ್ತಿತರ ಕಡೆಯೂ ಪಟಾಕಿ ಸಿಡಿಸಿ, ಸಿಹಿಹಂಚಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜೈಕಾರ ಹಾಕುವ ಮೂಲಕ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಸಂಭ್ರಮಿಸಿದರು.

click me!