ನಟಿ ಲೀಲಾವತಿ ಪ್ರತಿಮೆ ಅವರ ಆಸ್ಪತ್ರೆ ಮುಂದೆ ನಿರ್ಮಿಸಲು ಚಿಂತನೆ: ಡಿಕೆಶಿ

By Kannadaprabha NewsFirst Published Dec 12, 2023, 3:30 AM IST
Highlights

ದಿವಂಗತರಾದ ನಟಿ ಲೀಲಾವತಿ ಅವರು ನಿರ್ಮಿಸಿರುವ ಬೆಂಗಳೂರು ಬಳಿಯ ಸೋಲದೇನಹಳ್ಳಿಯಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆ ಮುಂಭಾಗದಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡುವ ಕುರಿತು ಮುಖ್ಯಮಂತ್ರಿ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 
 

ಸುವರ್ಣವಿಧಾನಸೌಧ (ಡಿ.11): ದಿವಂಗತರಾದ ನಟಿ ಲೀಲಾವತಿ ಅವರು ನಿರ್ಮಿಸಿರುವ ಬೆಂಗಳೂರು ಬಳಿಯ ಸೋಲದೇನಹಳ್ಳಿಯಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆ ಮುಂಭಾಗದಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡುವ ಕುರಿತು ಮುಖ್ಯಮಂತ್ರಿ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಲೀಲಾವತಿ ನಿಧನಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಿ ನುಡಿನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್‌. ಅಶೋಕ್‌ ಹಾಗೂ ಶಾಸಕಿ, ನಟಿ ಉಮಾಶ್ರೀ, ‘ಜಾನುವಾರು ರಕ್ಷಣೆಯಲ್ಲಿ ಲೀಲಾವತಿ ಪಾತ್ರ ಮಹತ್ವದ್ದು. ಅವರು ನಿರ್ಮಿಸಿರುವ ಪಶು ಆಸ್ಪತ್ರೆಯ ಮುಂದೆ ಪ್ರತಿಮೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಡಿಕೆಶಿ, ‘ಲೀಲಾವತಿ ಅವರ ಬಳಿ ಹಣವಿಲ್ಲದಿದ್ದರೂ ಹೃದಯವಂತಿಯಲ್ಲಿ ಬಹಳ ದೊಡ್ಡ ಶ್ರೀಮಂತರು. ತಮ್ಮ ಬದುಕಿನಲ್ಲಿ ಅನೇಕ ಕಷ್ಟ ಬಂದರೂ ಅವರು ಪರೋಪಕಾರಕ ಜೀವನ ನಡೆಸಿದರು.ಲೀಲಾವತಿ ಅವರ ಬಳಿ ಹಣವಿಲ್ಲದಿದ್ದರೂ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟು ಹೋಗಿದ್ದಾರೆ. ಹೀಗಾಗಿ ಅವರು ನಿಜಕ್ಕೂ ಧನವಂತರು.ಅವರು ಕಟ್ಟಿರುವ ಪಶುವೈದ್ಯ ಆಸ್ಪತ್ರೆ ಮುಂಭಾಗದಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡುವ ಕುರಿತು ಸಿಎಂ ಜತೆ ಚರ್ಚಿಸಲಾಗುವುದು’ ಎಂದರು.

ಸರ್ಕಾರ ಪತನ ಆಗಲಿದೆಯೆಂದು ಎಚ್‌ಡಿಕೆ ಕನಸು ಕಾಣುತ್ತಲೇ ಇರಲಿ: ಸಚಿವ ಚಲುವರಾಯಸ್ವಾಮಿ

ಸಂತಾಪ: ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನದಲ್ಲಿ ಸಂತಾಪ ಸೂಚಕ ನಿರ್ಣಯದ ಮೇಳೆ ಮಾತನಾಡಿದ ಸದಸ್ಯರು ಲೀಲಾವತಿ ಅವರ ಗುಣಗಾನ ಮಾಡಿದರು. ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಲೀಲಾವತಿ ಅವರು ಕೇವಲ ಕನ್ನಡ ಭಾಷೆ ಮಾತ್ರವಲ್ಲದೇ, ತಮಿಳು, ತೆಲುಗು, ತುಳು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಐದು ದಶಕಗಳ ಕಾಲ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಬಹುಭಾಷೆಗಳಲ್ಲಿ ನಟಿ ಲೀಲಾವತಿ ಅವರು ತಮ್ಮ ನಟನೆಯ ಫ್ರೌಡಿಮೆಯನ್ನು ತೋರಿಸಿದ್ದಾರೆ. ಎಲ್ಲಾ ಪಾತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಸಿನಿಮಾ ನಟನೆ ಮಾತ್ರವಲ್ಲದೇ, ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದರು. ಪಶುವೈದ್ಯಕೀಯ ಶಾಲೆಯ ಮುಂದೆ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ವಿಧಾನಪರಿಷತ್‌ನಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಹಿಳಾ ಕಲಾವಿದೆ 600 ಸಿನೇಮಾಗಳಲ್ಲಿ ನಟಿಸಿರುವುದು ಅತ್ಯಂತ ಮಹತ್ ಸಾಧನೆಯಾಗಿದೆ. ಪ್ರತಿಯೊಂದು ಪಾತ್ರದಲ್ಲಿ ವಿಶಿಷ್ಟ ಚಾಪು ಮೂಡಿಸಿದ್ದಾರೆ. ಮೇರು ನಟ ಡಾ.ರಾಜಕುಮಾರ ಅವರ ಸಿನಿಮಾಗಳಲ್ಲಿ ಸಹ ಮನಮಿಡಿಯುವಂತೆ ನಟಿಸಿ ಅಭಿನಯಶಾರದೆಯಾಗಿ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.

ಮೇಲ್ಮನೆ ಸದಸ್ಯೆ ಉಮಾಶ್ರೀ ಮಾತನಾಡಿ, ಬಾಲ್ಯದಿಂದ ಕೊನೆಯ ಜೀವನದವರೆಗೂ ಸಂಕಷ್ಟದ ಜೀವನ ನಡೆಸಿದರು. ಅವರು ಮಾಡದ ಪಾತ್ರಗಳೇ ಇಲ್ಲ. ಅವರು ಅಭಿಯನದ ಶೈಲಿ, ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ರೀತಿ ಅನನ್ಯವಾಗಿದೆ. ಅವರ ನಿಧನದಿಂದ ಮನಸಿಗೆ ನೋವಾಗಿದೆ. ನಟಿ ಲೀಲಾವತಿ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ಈ ವೇಳೆ ಸದನದ ಸದಸ್ಯರು ಮೃತರ ಗೌರವಾರ್ಥ ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು. ಅಗಲಿದ ನಾಡಿನ ಹಿರಿಯ ಕಲಾವಿದೆ ಲೀಲಾವತಿ ಅವರು ಚಿತ್ರರಂಗ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ವಿಧಾನ ಪರಿಷತ್‌ ಸ್ಮರಿಸಿಕೊಂಡು ಸಂತಾಪ ವ್ಯಕ್ತಪಡಿಸಿತು.

ಆಗ ಮುಸ್ಲಿಮರ ಓಲೈಸುತ್ತಿದ್ದ ಯತ್ನಾಳ್‌ ಈಗ ಹಿಂದೂ ಹುಲಿ: ಸಚಿವ ಎಂ.ಬಿ.ಪಾಟೀಲ್‌

ಉಪಸಭಾಪತಿ ಎಂ.ಕೆ. ಪ್ರಾಣೇಶ್‌ ಅವರು ಸಂತಾಪ ಸೂಚನೆ ಮಂಡಿಸಿ, ಲೀಲಾವತಿ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದರು. ವೈವಿಧ್ಯಮ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿಕೊಂಡರು. ಸಂತಾಪ ಸೂಚನೆಗೆ ಸಭಾನಾಯಕ ಬೋಸರಾಜು, ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿ. ಲೀಲಾವತಿ ಅವರು ತಮ್ಮ ಅಭಿನಯದ ಮೂಲಕ ಎಲ್ಲರ ಮನ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಮಾಜ ಸೇವೆಯಲ್ಲಿ ಅವರು ತೊಡಗಿದ್ದರು ಎಂದರು. ಕಾಂಗ್ರೆಸ್‌ ಸದಸ್ಯೆ ಉಮಾಶ್ರೀ ಮಾತನಾಡಿ, ವೈಯಕ್ತಿಕ ಹಾಗೂ ಚಿತ್ರರಂಗದಲ್ಲಿ ಸಂಘರ್ಷದ ಜೀವನ ನಡೆಸಿದ ಲೀಲಾವತಿ ಅವರು, ನಾಯಕಿ ನಟಿಯಾಗಿದ್ದರೂ ತಮಗೆ ಬಂದ ಎಲ್ಲ ಬಗೆಯ ಪಾತ್ರವನ್ನು ಅವರು ಮಾಡಿದ್ದರು. ಜನ ಹಾಗೂ ಜಾನುವಾರುಗಳಿಗೆ ಆಸ್ಪತ್ರೆ ಕಟ್ಟಡ ನಿರ್ಮಿಸಿ ಸರ್ಕಾರಕ್ಕೆ ನೀಡಿದರು. ಅವರು ವಾಸಿಸುತ್ತಿದ್ದ ಸೋಲದೇವನಹಳ್ಳಿಯ ಜನರು ಲೀಲಾವತಿ ಅವರನ್ನು ಸ್ಮರಿಸಿಕೊಳ್ಳುವಂತ ಕೆಲಸ ಮಾಡಿದ್ದಾರೆ ಎಂದರು.

click me!