ಸಹಕಾರ ಕ್ಷೇತ್ರದ ಕಳ್ಳರಿಗೆ ಕ್ಷಮೆ ಬೇಡ: ಆರಗ ಜ್ಞಾನೇಂದ್ರ

By Kannadaprabha NewsFirst Published Sep 20, 2022, 8:04 AM IST
Highlights

ಯಾವ ಕಳ್ಳರನ್ನು ಬೇಕಾದರೂ ಸಹಿಸಬಹುದು, ಆದರೆ ಸಹಕಾರ ಕ್ಷೇತ್ರದ ಕಳ್ಳರನ್ನು ಮಾತ್ರ ಕ್ಷಮಿಸಬಾರದು. ಜನರಿಗೆ ಮೋಸ ಮಾಡಿದವರನ್ನು ಜೈಲಿಗೆ ಕಳುಹಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು (ಸೆ.20) : ಯಾವ ಕಳ್ಳರನ್ನು ಬೇಕಾದರೂ ಸಹಿಸಬಹುದು, ಆದರೆ ಸಹಕಾರ ಕ್ಷೇತ್ರದ ಕಳ್ಳರನ್ನು ಮಾತ್ರ ಕ್ಷಮಿಸಬಾರದು. ಜನರಿಗೆ ಮೋಸ ಮಾಡಿದವರನ್ನು ಜೈಲಿಗೆ ಕಳುಹಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಅರಮನೆ ಮೈದಾನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಕಾರ್ಯಾರಂಭಿಸಿದ್ದು ಯಶಸ್ವಿಯಾಗಿವೆ. ಆದರೆ ರೈತರು, ಷೇರುದಾರರು ಕಷ್ಟಪಟ್ಟು ತೊಡಗಿಸಿದ ಹಣವನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹವರನ್ನು ಕ್ಷಮಿಸದೇ ಜೈಲಿಗೆ ಕಳುಹಿಸಬೇಕು, ಬಹಿಷ್ಕಾರ ಹಾಕಬೇಕು ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ಇರಿತ ಕೇಸ್‌ ಆರೋಪಿಗೆ ಉಗ್ರ ನಂಟು, ಎನ್‌ಐಎ ತನಿಖೆ: ಆರಗ ಜ್ಞಾನೇಂದ್ರ

ಹಣ ದುರ್ಬಳಕೆಯಾದ ಹಿನ್ನೆಲೆಯಲ್ಲಿ 50ಕ್ಕೂ ಅಧಿಕ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇದರಿಂದಾಗಿ ಸಹಕಾರಿ ರಂಗಕ್ಕೆ ಕೆಟ್ಟಹೆಸರು ಬಂದಿದೆ. ನ್ಯಾಯಾಲಯಗಳು ಜಾಮೀನುರಹಿತ ವಾರೆಂಟ್‌ ಹೊರಡಿಸಿದ್ದರೂ ಅಕ್ರಮ ನಡೆಸಿದವರು ಮೂರ್ನಾಲ್ಕು ವರ್ಷವಾದರೂ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಆದ್ದರಿಂದ ಶೀಘ್ರದಲ್ಲೇ ಸಿಒಡಿ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಾಗೂ ಸಹಕಾರ ರಂಗದ ಪ್ರಮುಖರ ಜೊತೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಾನು ಹೋರಾಟ ನಡೆಸದೇ ಇದ್ದಿದ್ದರೆ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದ ಪ್ರಕರಣ ಬಯಲಿಗೆ ಬರುತ್ತಿರಲಿಲ್ಲ. ಎಲ್ಲವೂ ಸರ್ವನಾಶ ಆಗುತ್ತಿತ್ತು. .62 ಕೋಟಿ ಅವ್ಯವಹಾರ ನಡೆದಿದ್ದು, ಅವ್ಯವಹಾರ ನಡೆಸಿದವರು ರಾಜ್ಯದಲ್ಲಿ ದೊಡ್ಡ ನಾಯಕರಂತೆ ಓಡಾಡುತ್ತಿದ್ದರು. ರೈತರು, ಷೇರುದಾರರ ಹಿತ ಕಾಪಾಡಲಿಲ್ಲ ಎಂದು ಆರೋಪಿಸಿದರು.

ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಮಾತನಾಡಿ, ಸಹಕಾರಿ ರಂಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಕಾಯ್ದೆ ಜಾರಿಗೊಳಿಸಲು ಅಥವಾ ಇರುವ ಕಾಯ್ದೆಗೇ ತಿದ್ದುಪಡಿ ತರಲು ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಸಮಾಲೋಚನೆ ನಡೆಸುತ್ತಿದ್ದು, ಮೂರು ತಿಂಗಳಲ್ಲಿ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ. ಸಹಕಾರಿ ರಂಗದ ಅವ್ಯವಹಾರ ತಡೆಗೆ ಕೇಂದ್ರ ಸರ್ಕಾರ ಕಠಿಣ ನಿಲುವು ಕೈಗೊಳ್ಳುವ ಸಂಭವವಿದೆ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಸಹಕಾರಿಗಳ ನಿಬಂಧಕ ಡಾ ಕ್ಯಾಪ್ಟನ್‌ ರಾಜೇಂದ್ರ, ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಹಾಜರಿದ್ದರು. ಮುರುಘಾ ಶ್ರೀಗಳ ಕೇಸ್‌ನಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ: ಆರಗ

click me!