ಮಂಡ್ಯ ವಿಶ್ವವಿದ್ಯಾಲಯದಲ್ಲೂ ಬೋಧಕ ಹುದ್ದೆ ಖಾಲಿ: ಶಿಕ್ಷಣ, ಸಂಶೋಧನೆಗೆ ಸಿಗದ ಆದ್ಯತೆ

ರಾಜ್ಯದ ನೂತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಡ್ಯ ವಿಶ್ವವಿದ್ಯಾಲಯವನ್ನೂ ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. 345 ಬೋಧಕ, ಬೋಧಕೇತರ ಹುದ್ದೆ ಮಂಜೂರಾಗಿದ್ದರೂ ಸರ್ಕಾರ ಭರ್ತಿಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅತಿಥಿ ಬೋಧಕರ ಮೇಲೆ ಅವಲಂಬಿತವಾಗಿದೆ. 


ಮಂಡ್ಯ ಮಂಜುನಾಥ

ಮಂಡ್ಯ (ಮಾ.16): ರಾಜ್ಯದ ನೂತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಡ್ಯ ವಿಶ್ವವಿದ್ಯಾಲಯವನ್ನೂ ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆ ಕಾಡುತ್ತಿದೆ. 345 ಬೋಧಕ, ಬೋಧಕೇತರ ಹುದ್ದೆ ಮಂಜೂರಾಗಿದ್ದರೂ ಸರ್ಕಾರ ಭರ್ತಿಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅತಿಥಿ ಬೋಧಕರ ಮೇಲೆ ಅವಲಂಬಿತವಾಗಿದೆ. ಪರಿಣಾಮ ಶೈಕ್ಷಣಿಕ ಗುಣಮಟ್ಟದ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿವೆ. ವಿಶ್ವವಿದ್ಯಾಲಯ ಸ್ಥಾಪನೆಯಾದ ದಿನದಿಂದ ವಿಶ್ವವಿದ್ಯಾಲಯಕ್ಕೆ 92 ಬೋಧಕ ಹಾಗೂ 253 ಬೋಧಕೇತರ ಹುದ್ದೆ ಮಂಜೂರಾಗಿದೆ. ಆದರೆ, ಈ ಪೈಕಿ ಒಂದೂ ಕಾಯಂ ಬೋಧಕ ಹುದ್ದೆಯನ್ನೂ ನೇಮಿಸಿಲ್ಲ. ವಿಶ್ವವಿದ್ಯಾಲಯದ ಕುಲಪತಿ ಸಹ ಪ್ರಭಾರ ಹುದ್ದೆಯಲ್ಲಿದ್ದಾರೆ.

Latest Videos

ಕಾಲೇಜು ಶಿಕ್ಷಣ ಇಲಾಖೆಗೆ ಸೇರಿದ 17 ಮಂದಿ, ತೂಬಿನಕೆರೆ ಸ್ನಾತಕೋತ್ತರ ಕೇಂದ್ರದಲ್ಲಿರುವ 11 ಮಂದಿ ಸೇರಿ 28 ಮಂದಿ ಮಾತ್ರ ಕಾಯಂ ಬೋಧಕ ಸಿಬ್ಬಂದಿ. ಇನ್ನು ಬೋಧಕೇತರ ಸಿಬ್ಬಂದಿಯ 253 ಮಂಜೂರಾತಿ ಹುದ್ದೆ ಪೈಕಿ 55 ಜನರನ್ನು ಮಾತ್ರ ನೇಮಿಸಿಕೊಳ್ಳಲಾಗಿದೆ. ಉಳಿದಂತೆ ಎಲ್ಲಾ ಬೋಧಕ ಹಾಗೂ ಬೋಧಕೇತರ ಕಾಯಂ ಹುದ್ದೆಗಳು ಖಾಲಿ ಉಳಿದಿವೆ. ಪ್ರತಿ ವರ್ಷ 135 ಮಂದಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದು, ವಿಶ್ವವಿದ್ಯಾಲಯಕ್ಕೆ ಅತಿಥಿ ಉಪನ್ಯಾಸಕರೇ ಆಧಾರ ಎಂಬಂತಾಗಿದೆ.

ಪಂಚಾಯ್ತಿ ತೆರಿಗೆಗೂ ಮಂಗಳೂರು ವಿವಿಯಲ್ಲಿ ದುಡ್ಡಿಲ್ಲ: ಮೂಲನಿಧಿ ಸೇರಿದಂತೆ ಎಲ್ಲವೂ ಖಾಲಿ!

ನೇಮಕಾತಿಗೆ ಸರ್ಕಾರ ನಿರ್ಲಕ್ಷ್ಯ: ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬನೆ ಆಗಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ. ಕಾಯಂ ನೇಮಕಾತಿ ಮಾತ್ರವಲ್ಲ, ಅತಿಥಿ ಉಪನ್ಯಾಸಕರ ನೇಮಕಾತಿಗೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕಾಲೇಜು ತರಗತಿ ಆರಂಭವಾದ ಮೂರ್ನಾಲ್ಕು ತಿಂಗಳು ತಡವಾಗಿ ನೇಮಕ ಮಾಡುತ್ತಿದೆ. ಇದರ ನಡುವೆ ಕಾಲೇಜು ಶಿಕ್ಷಣ ಇಲಾಖೆ, ಅತಿಥಿ ಉಪನ್ಯಾಸಕರ ನಡುವೆ ಮುಸುಕಿನ ಗುದ್ದಾಟ ಹಾಗೂ ಹಿಂದೆ ಮಂಡ್ಯ ವಿಶ್ವವಿದ್ಯಾನಿಲಯ ಕುಲಪತಿಗಳಾಗಿದ್ದವರ ನಡುವೆ ಸಂಘರ್ಷ, ಪರೀಕ್ಷಾ ಪ್ರಕ್ರಿಯೆಯಲ್ಲಿ ಗೊಂದಲ, ದೋಷಗಳಿಂದ ಕೂಡಿದ ಅಂಕಪಟ್ಟಿಯಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಸ್ಥಿತಿ ತಲುಪಿದೆ. ಮಂಡ್ಯ ವಿಶ್ವವಿದ್ಯಾಲಯಕ್ಕೆ ಪೂರಕ ಅನುದಾನ, ಸೌಲಭ್ಯ, ಬೋಧಕ-ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಂಡು ಬಲವರ್ಧನೆಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳೂ ವ್ಯಕ್ತವಾಗಿವೆ.

ಯಾವಾಗ ಸ್ಥಾಪನೆ?: ರಾಷ್ಟ್ರೀಯ ಉಚ್ಚತರ್ ಶಿಕ್ಷಣ ಅಭಿಯಾನ (ರೂಸಾ)ದಡಿ ಯುಜಿಸಿಯಿಂದ ಮಂಡ್ಯ ವಿಶ್ವವಿದ್ಯಾನಿಲಯ ಏಕೀಕೃತ ವಿಶ್ವವಿದ್ಯಾನಿಲಯವಾಗಿ 2019ರಲ್ಲಿ ಹೊರಹೊಮ್ಮಿತು. 2023-24ನೇ ಸಾಲಿನಲ್ಲಿ ಸಂಯೋಜಿತ ವಿಶ್ವವಿದ್ಯಾಲಯವಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ವಿಭಜನೆಗೊಂಡಿತು. ಮಂಡ್ಯ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ 47 ಕಾಲೇಜುಗಳು, 1 ಸ್ವಾಯತ್ತ ಕಾಲೇಜು, 1 ಸ್ನಾತಕೋತ್ತರ ಕೇಂದ್ರ ಸೇರಿ 49 ಕಾಲೇಜುಗಳು ಸೇರ್ಪಡೆಯಾಗಿವೆ. ಇನ್ನೂ 2 ಕಾಲೇಜುಗಳನ್ನು ಸೇರ್ಪಡೆ ಮಾಡಿಕೊಳ್ಳುವಂತೆ ವಿವಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಬಿ.ಎ, ಬಿಎಸ್ಸಿ, ಬಿ.ಕಾಂ., ಬಿಬಿಎ, ಬಿಸಿಎ, ಬಿಎಫ್‌ಎಸ್‌ಐ, ಬಿಎಸ್ಸಿ, ಬಿಎಸ್‌ಡಬ್ಲ್ಯು, ಎಂ.ಎ, ಎಂ.ಎಸ್ಸಿ, ಎಂ.ಕಾಂ, ಎಂಎಸ್‌ಡಬ್ಲ್ಯು ಕೋರ್ಸ್‌ಗಳಿವೆ. ಪದವಿ ತರಗತಿಯಲ್ಲಿ 3348 ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 548 ವಿದ್ಯಾರ್ಥಿಗಳು ಸೇರಿ 4,407 ಉಳಿದಂತೆ ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಯಾಗಿರುವ 47 ಕಾಲೇಜುಗಳಲ್ಲಿ ಮೊದಲ ವರ್ಷದಲ್ಲಿ 9,000 ಹಾಗೂ ಎರಡನೇ ವರ್ಷದಲ್ಲಿ 8000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

40 ಮಂದಿಯಿಂದ ಸಂಶೋಧನೆ: ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಅರ್ಥಶಾಸ್ತ್ರ, ವಾಣಿಜ್ಯ, ಕನ್ನಡ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಷಯಗಳಲ್ಲಿ ಒಟ್ಟು 40 ಮಂದಿ ಪಿಎಚ್‌.ಡಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದ್ದರೆ, ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದ್ದಾರೆ.

ವಾರ್ಷಿಕ ಆದಾಯ ₹7 ಕೋಟಿ: ಮಂಡ್ಯ ವಿಶ್ವವಿದ್ಯಾಲಯದ ವಾರ್ಷಿಕ ಆದಾಯ 7 ಕೋಟಿ ರು. ವೇತನದ ವೆಚ್ಚವೇ 4 ರಿಂದ ₹5 ಕೋಟಿ ತಲುಪುವುದಾಗಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರ ವೇತನವನ್ನು ಕಾಲೇಜು ಶಿಕ್ಷಣ ಇಲಾಖೆ ಭರಿಸುತ್ತಿದೆ. ಅವರ ವೇತನವೇ ತಿಂಗಳಿಗೆ 35 ಲಕ್ಷ ರು.ನಿಂದ 40 ಲಕ್ಷ ರು.ಗಳಾಗುತ್ತದೆ. ಮಂಡ್ಯ ವಿವಿ ವ್ಯಾಪ್ತಿಯ 55 ಮಂದಿ ವೇತನಕ್ಕಾಗಿಯೇ 12 ಲಕ್ಷ ರು. ವೆಚ್ಚ ಇದೆ ಎಂದು ಹೇಳಿದರು. ವಿಶ್ವವಿದ್ಯಾಲಯದ ಆಂತರಿಕ ಆದಾಯದ ಹಣವನ್ನು ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗಿ ವಿನಿಯೋಗಿಸಲಾಗುತ್ತಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಮಂಡ್ಯ ವಿಶ್ವವಿದ್ಯಾಲಯ ತೃತೀಯ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ. ಪದವಿ ತರಗತಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಶೇ.80ರಷ್ಟು ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಿದ್ದು, ಇದರ ಜತೆಗೆ ವಿಶ್ವವಿದ್ಯಾಲಯದಲ್ಲಿರುವ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ರಚನಾತ್ಮಕ ಚಟುವಟಿಕೆಗಳಿಂದ ಗಮನಸೆಳೆಯುತ್ತಿವೆ. ಒಟ್ಟಾರೆ ಮಂಡ್ಯ ವಿಶ್ವವಿದ್ಯಾಲಯದ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಂಶೋಧನೆಗೆ ಸಿಗದ ಪ್ರಾಮುಖ್ಯತೆ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲ. ಇತಿಹಾಸ, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಷಯಗಳಲ್ಲಿ ಒಟ್ಟು 40 ಮಂದಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಸಂಶೋಧನೆಗೆ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಗದಿರುವುದರಿಂದ ಇರುವ ವ್ಯವಸ್ಥೆಯಲ್ಲೇ ಸಂಶೋಧನೆ ನಡೆಸುವುದು ಅನಿವಾರ್ಯ. ಸರ್ಕಾರದಿಂದ ಹೆಚ್ಚಿನ ಅನುದಾನ ಕೊಟ್ಟು ವಿದ್ಯಾರ್ಥಿಗಳ ಸಂಶೋಧನೆಗೆ ಉತ್ತೇಜನ ನೀಡುವಂತಾದರೆ ಸಾಕಷ್ಟು ವಿದ್ಯಾರ್ಥಿಗಳು ಸಂಶೋಧನೆ ಕಡೆ ಮುಖಮಾಡುವರು. ಸಂಶೋಧನೆಯಲ್ಲಿ ತೊಡಗುವವರಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತಿದೆ. ಆದರೆ, ಹಣಕಾಸಿನ ಕೊರತೆ ವಿದ್ಯಾರ್ಥಿಗಳನ್ನು ಸಂಶೋಧನೆಯಿಂದ ದೂರ ಉಳಿಯುವಂತೆ ಮಾಡಿದೆ.

ವಿವಿಗೆ ಸಿಕ್ಕ ಅನುದಾನವೆಷ್ಟು?: ಮಂಡ್ಯ ವಿಶ್ವವಿದ್ಯಾನಿಲಯ ಸ್ಥಾಪನೆಯಾದ 2019-20ನೇ ಸಾಲಿನಲ್ಲಿ ರೂಸಾ ಅನುದಾನದಡಿ ₹55 ಕೋಟಿ ಬಿಡುಗಡೆ ಆಯಿತು. 21-22ನೇ ಸಾಲಿನಲ್ಲಿ ರಾಜ್ಯಸರ್ಕಾರದಿಂದ ₹1 ಕೋಟಿ, 22-23ನೇ ಸಾಲಿನಲ್ಲಿ ₹35 ಲಕ್ಷ ಬಿಡುಗಡೆ ಮಾಡಿದೆ. ಆನಂತರದ ವರ್ಷಗಳಲ್ಲಿ ಹಣ ಬಿಡುಗಡೆ ಮಾಡದೆ ಆಂತರಿಕ ಆದಾಯದಿಂದಲೇ ನಿರ್ವಹಣೆ ಮಾಡುವಂತೆ ಸರ್ಕಾರ ತಿಳಿಸಿರುವುದಾಗಿ ಗೊತ್ತಾಗಿದೆ.

ಸರ್ಕಾರಗಳಿಂದ ಸಿಗದ ಸ್ಪಂದನೆ: ಮಂಡ್ಯ ವಿಶ್ವವಿದ್ಯಾಲಯಕ್ಕೆ ಬೇಕಾದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಉನ್ನತ ಶಿಕ್ಷಣ ಇಲಾಖೆ ಮಂಜೂರಾತಿ ನೀಡಲಿಲ್ಲ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ನೇಮಕವಾಗಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 28 ಬೋಧಕ ಸಿಬ್ಬಂದಿ ಅವರ ಆಪ್ಟ್-ಇನ್ ಮತ್ತು ಆಪ್ಟ್-ಔಟ್ ವಿಚಾರದಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿಲ್ಲ. ರೂಸಾ ಅನುದಾನದಲ್ಲಿ ವಾಣಿಜ್ಯ ವಿಭಾಗದ ಕಟ್ಟಡ, ಗ್ರಂಥಾಲಯ, ಆಡಳಿತ ಕಚೇರಿ ಕಟ್ಟಡ ನಿರ್ಮಿಸಲಾಗಿದೆ. ವಾಹನಗಳ ಕೊರತೆ ಇಲ್ಲ. ಇದರ ಜೊತೆಗೆ ಆಡಿಟೋರಿಯಂ, ಕಲಾಭವನ ಸೇರಿ ಮೂಲಸೌಲಭ್ಯಗಳನ್ನು ಒಳಗೊಂಡಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ‘ಆ್ಯಪಲ್ ಲರ್ನಿಂಗ್ ಲ್ಯಾಬ್‌ ಅನ್ನು’ ವಿವಿಯಲ್ಲಿ ತೆರೆಯಲಾಗಿದೆ.

ಇನ್ನುಳಿದಂತೆ ಪ್ರವೇಶದ್ವಾರ, ಕಮಾನು ಜೊತೆಗೆ ಭದ್ರತಾ ಸಿಬ್ಬಂದಿ ಕೊಠಡಿ, ಕಾಂಪೌಂಡ್ ಗೋಡೆ ನಿರ್ಮಾಣ, ಪಾರ್ಕಿಂಗ್ ಸ್ಥಳ, ಹಳೇ ಕಟ್ಟಡಗಳಿಗೆ ಬಣ್ಣ ಸೇರಿ ಇನ್ನಿತರ ಕಾಮಗಾರಿಗಳಿಗೆ ಮಂಜೂರಾತಿ ಮತ್ತು ₹5 ಕೋಟಿ ಅನುದಾನದ ಅಗತ್ಯವಿದ್ದರೂ ಸರ್ಕಾರ ಬಿಡುಗಡೆ ಮಾಡಿಲ್ಲ. ವಿವಿದೋದ್ದೇಶದ ಕ್ರೀಡಾ ಕಾಂಪ್ಲೆಕ್ಸ್, ಶಾಪ್ಸ್, ಒಳಾಂಗಣ ಆಡಿಟೋರಿಯಂ, ಕುಲಪತಿ ಹಾಗೂ ಸಿಬ್ಬಂದಿಗೆ ವಸತಿಗೃಹ, ಸಿಂಥೆಟಿಕ್ ಟ್ರ್ಯಾಕ್, ಹೊರಾಂಗಣ ಕ್ರೀಡಾಂಗಣ ಇನ್ನಿತರ ಕಾಮಗಾರಿಗಳಿಗೆ ಅಂದಾಜು ₹75 ಕೋಟಿ ಅವಶ್ಯಕತೆ ಇರುವುದಾಗಿ ಸರ್ಕಾರಕ್ಕೆ ಮಂಡ್ಯ ವಿವಿ ಕುಲಪತಿ ಪ್ರಸ್ತಾವನೆ ಕಳುಹಿಸಿದ್ದರೂ ಈವರೆಗೆ ಸ್ಪಂದನೆಯೇ ದೊರಕದಿರುವುದು ವಿಷಾದಕರ ಸಂಗತಿ.

ಬೆಂ.ಉತ್ತರ ವಿವಿಗೆ ಅತಿಥಿ ಉಪನ್ಯಾಸಕರೇ ಆಸರೆ: ಮೂಲ ಸೌಕರ್ಯವೂ ಮರೀಚಿಕೆ

ಮಂಡ್ಯ ವಿಶ್ವವಿದ್ಯಾಲಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ಮಂಡ್ಯದಲ್ಲಿ 32 ಎಕರೆ, ತೂಬಿನಕೆರೆಯಲ್ಲಿ 99 ಎಕರೆ ಜಾಗವಿದೆ. ಕ್ಯಾಂಪಸ್‌ಗೂ ಜಾಗದ ಕೊರತೆ ಇಲ್ಲ. ಮೂಲ ಸೌಲಭ್ಯಗಳೂ ಉತ್ತಮವಾಗಿವೆ. ರಾಜ್ಯಸರ್ಕಾರ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ಮಂಜೂರು ಮಾಡಿಕೊಟ್ಟು, ಕ್ಯಾಂಪಸ್ ನಿರ್ಮಾಣಕ್ಕೆ ಅನುದಾನ ನೀಡಿದರೆ ಮಂಡ್ಯ ವಿವಿ ಬಲವರ್ಧನೆಗೊಳ್ಳುವುದರಲ್ಲಿ ಅನುಮಾನವಿಲ್ಲ.
- ಪ್ರೊ.ಕೆ.ಶಿವಚಿತ್ತಪ್ಪ, ಕುಲಸಚಿವರು, ಮಂಡ್ಯ ವಿವಿ

click me!