
ಬೆಂಗಳೂರು (ಆ.15): ಧರ್ಮಸ್ಥಳ ಆಡಳಿತ ಮಂಡಳಿ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದ್ದು, ಈ ವಿಚಾರದಲ್ಲಿ ದಾರಿ ತಪ್ಪಿಸುತ್ತಿರುವವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಪತ್ತೆ ಪ್ರಕರಣ ಖಾಲಿ ಟ್ರಂಕ್‌ನಂತಹ ಪ್ರಕರಣವಾಗಿದ್ದು, ಹೆಚ್ಚು ಸದ್ದು ಮಾಡುತ್ತಿದೆಯಷ್ಟೇ ಎಂದೂ ತೀಕ್ಷ್ಣವಾಗಿ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದ್ದು, ಅದನ್ನು ಯಾರು ಮಾಡಿದ್ದಾರೆಂದು ಹೇಳುವುದಿಲ್ಲ. ಧರ್ಮಸ್ಥಳ ಆಡಳಿತ ಮಂಡಳಿ ಮೇಲೆ ಕಪ್ಪುಚುಕ್ಕೆ ತರಲು ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಪಿತೂರಿ ಮಾಡಲಾಗಿದೆ. ಧರ್ಮಸ್ಥಳ ಆಡಳಿತ ಮಂಡಳಿಯ ತೇಜೋವಧೆ ಮಾಡಲು, ನೂರಾರು ವರ್ಷಗಳಿಂದ ನಡೆದು ಬಂದಿರುವ ಪರಂಪರೆ ಹಾಳು ಮಾಡಲು ಹೊರಟಿದ್ದಾರೆ. ಅದನ್ನು ನಾವು ಸಹಿಸಲ್ಲ ಎಂದರು.
ಅನಾಮಿಕ ವ್ಯಕ್ತಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರ ಸತ್ಯಾಸತ್ಯತೆ ಅರಿಯಲು ಎಸ್‌ಐಟಿ ರಚಿಸಲಾಯಿತು. ಎಸ್‌ಐಟಿ ಈಗ ತನಿಖೆ ಮಾಡುತ್ತಿದೆ. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ರೂಪಿಸಿದವರು, ದಾರಿ ತಪ್ಪಿಸಿದವರ ಪತ್ತೆಗೆ ಆಳವಾಗಿ ತನಿಖೆ ನಡೆಸಿ, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಗೃಹ ಇಲಾಖೆ ಕೆಲಸ ಮಾಡುತ್ತಿದೆ. ಧರ್ಮಸ್ಥಳ ಪ್ರಕರಣ ಖಾಲಿ ಟ್ರಂಕ್ ಇದ್ದಂತೆ. ಅದು ಜಾಸ್ತಿ ಸದ್ದು ಮಾಡುತ್ತಿದೆಯಷ್ಟೇ ಎಂದು ಹೇಳಿದರು.
ಶಿಕ್ಷೆ ಆಗಲೇಬೇಕು:
ಯಾವುದೇ ಧರ್ಮದ ಭಾವನೆಗೆ ಚ್ಯುತಿ ಬರಬಾರದು, ನಂಬಿಕೆ ಉಳಿಯಬೇಕು ಎಂಬ ಕಾರಣಕ್ಕಾಗಿ ಸರ್ಕಾರ ಕ್ರಮ ಕೈಗೊಂಡಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲೇಬೇಕು. ತಪ್ಪು ಮಾಡಿದವರನ್ನು ರಕ್ಷಿಸಲೂ ಹೋಗುವುದಿಲ್ಲ. ಇನ್ನು, ಏನೂ ಇಲ್ಲದೇ ಸಮಾಜದ ದಾರಿ ತಪ್ಪಿಸುವ ಕೆಲಸ ಈ ಪ್ರಕರಣದಲ್ಲಿ ಆಗಿದೆ. ಅದರ ಅರಿವು ನಮಗಿದೆ. ನಮ್ಮ ಪಕ್ಷ-ಸರ್ಕಾರ ಯಾವ ಸಂದರ್ಭದಲ್ಲೂ ಧರ್ಮಸ್ಥಳ ಸೇರಿ ಯಾವುದೇ ಧಾರ್ಮಿಕ ಕ್ಷೇತ್ರಗಳ ಗೌರವ, ನಂಬಿಕೆ, ಸ್ವಾಭಿಮಾನಕ್ಕೆ ತೊಂದರೆ ಕೊಡಲು ಅವಕಾಶ ನೀಡುವುದಿಲ್ಲ. ನ್ಯಾಯ, ಧರ್ಮವನ್ನು ಸರಿಸಮಾನವಾಗಿ ಕಾಣಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ