3 ವರ್ಷಗಳಿಂದ ಪೂರ್ಣಗೊಳ್ಳದ ಬೆಂಡೆಬೆಟ್ಟ ಗಿರಿಜನ ಮನೆಗಳ ಕಾಮಗಾರಿ: ನಾಪತ್ತೆಯಾಗಿರುವ ಗುತ್ತಿಗೆದಾರ!

By Govindaraj SFirst Published Nov 13, 2023, 9:23 PM IST
Highlights

ಇಂದಿಗೂ ಗುಡಿಸಲು, ಶೆಡ್ಗಳಲ್ಲಿ ಬದುಕುವ ಬುಡಕಟ್ಟು ಆದಿವಾಸಿಗಳ ಜನರಿಗೆ ವಸತಿ ಕಲ್ಪಿಸುವುದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಅವುಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕಾಗಿರುವ ಅಧಿಕಾರಿಗಳ ಎಡವಟ್ಟಿನಿಂದಾಗಿ ಆದಿವಾಸಿಗಳು ಶೆಡ್ಡಿಯನಲ್ಲಿಯೇ ಬದುಕುತ್ತಿದ್ದಾರೆ.
 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ನ.13): ಇಂದಿಗೂ ಗುಡಿಸಲು, ಶೆಡ್ಗಳಲ್ಲಿ ಬದುಕುವ ಬುಡಕಟ್ಟು ಆದಿವಾಸಿಗಳ ಜನರಿಗೆ ವಸತಿ ಕಲ್ಪಿಸುವುದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಅವುಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕಾಗಿರುವ ಅಧಿಕಾರಿಗಳ ಎಡವಟ್ಟಿನಿಂದಾಗಿ ಆದಿವಾಸಿಗಳು ಶೆಡ್ಡಿಯನಲ್ಲಿಯೇ ಬದುಕುತ್ತಿದ್ದಾರೆ. ಇಟ್ಟಿಗೆಯಿಂದ ಗೋಡೆ ಕಟ್ಟಿ ಅಷ್ಟಕ್ಕೆ ಕೆಲಸ ಸ್ಥಗಿತವಾಗಿರುವ ಮನೆಗಳು. ಸಾರಣೆಯೂ ಇಲ್ಲ, ಫ್ಲೋರಿಂಗೂ ಇಲ್ಲ. ಕಿಟಕಿ, ಬಾಗಿಲುಗಳೂ ಇಲ್ಲ. ಇದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬೆಂಡೆಬೆಟ್ಟ ಗಿರಿಜನ ಹಾಡಿಯಲ್ಲಿನ ಆದಿವಾಸಿ ಬುಡಕಟ್ಟು ಜನರ ಪರಿಸ್ಥಿತಿ. 

ಹೌದು ಬುಡಕಟ್ಟು ಆದಿವಾಸಿ ಕುಟುಂಬಗಳ ಅಭಿವೃದ್ಧಿಗಾಗಿ ಸರ್ಕಾರವೇನೋ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಅವುಗಳನ್ನು ಕಾರ್ಯಗತಗೊಳಿಸಬೇಕಾಗಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮನೆಗಳ ಬಿಲ್ಲು ಯಾವುದೋ ಗುತ್ತಿಗೆದಾರನ ಪಾಲಾಗಿದೆ. 50 ಕ್ಕೂ ಹೆಚ್ಚು ಕುಟುಂಬಗಳು ಇರುವ ಬೆಂಡೆಬೆಟ್ಟ ಹಾಡಿಯಲ್ಲಿ ಮೂರು ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿಕೊಳ್ಳಲು 18 ಕುಟುಂಬಗಳಿಗೆ ಮಂಜೂರು ಮಾಡಲಾಗಿತ್ತು. ಈ ವೇಳೆ ಚಂದ್ರ ಎನ್ನುವ ವ್ಯಕ್ತಿಯೊಬ್ಬರು ತಾನು ಮನೆ ನಿರ್ಮಿಸಿ ಕೊಡುವುದಾಗಿ ಹೇಳಿ ಎಲ್ಲರ ಮೆನಗಳ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದರು. 18 ಮನೆಗಳ ತಳಪಾಯ ಮಾಡಿ ಗೋಡೆಗಳನ್ನು ಕಟ್ಟಿ ಛಾವಣಿಯನ್ನು ಹೊದಿಸಿದ್ದಾರೆ ಅಷ್ಟೇ. 

ಆನ್‌ಲೈನ್ ವಂಚನೆ ಮಾಡ್ತಿದ್ದ 3 ವಿದೇಶಿ ಪ್ರಜೆಗಳ ಬಂಧನ: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ...

ಆದರೆ ಅವುಗಳಿಗೆ ಕಿಟಿಕಿ ಬಾಗಿಲುಗಳಿಲ್ಲ, ಸಾರಣೆ ಮಾಡಿಲ್ಲ. ಎಲ್ಲವನ್ನೂ ಹಾಗೆಯೇ ಬಿಡಲಾಗಿದೆ. ತಳಪಾಯ ಮಾಡಿದಾಗ ಒಂದು ಬಿಲ್ಲು, ಗೋಡೆಕಟ್ಟಿ ಛಾವಣಿ ಹೊದಿಸಿದಾಗ ಒಂದು ಬಿಲ್ಲು ಬಿಡುಗಡೆ ಮಾಡಲಾಗಿದ್ದು, ಆ ಹಣವನ್ನು ಗುತ್ತಿಗೆದಾರನಿಗೆ ಕೊಡಲಾಗಿದೆ. ಇನ್ನು ಸಾರಣೆ ಮಾಡಿದರೆ ಮಾತ್ರವೇ ಮೂರನೇ ಬಿಲ್ಲು ಬಿಡುಗಡೆಯಾಗುವುದಕ್ಕೆ ಸಾಧ್ಯ. ಆದರೆ ಗುತ್ತಿಗೆದಾರ ಕೆಲಸ ಮಾಡುತ್ತಿಲ್ಲ. ಕೆಲಸ ಮಾಡದೆ ಇಲಾಖೆ ಬಿಲ್ಲನ್ನು ಬಿಡುಗಡೆ ಮಾಡುವಂತಿಲ್ಲ. ಹೀಗಾಗಿ ಗಿರಿಜನ ಕುಟುಂಬಗಳಿಗೆ ಲೆಕ್ಕಕ್ಕೆ ಮನೆ ನಿರ್ಮಿಸಿಕೊಡಲಾಗಿದ್ದು ಅವುಗಳಲ್ಲಿ ಅವರು ನೆಮ್ಮದಿಯಿಂದ ಬದಕಲು ಅವಕಾಶ ಇಲ್ಲದಂತೆ ಆಗಿದೆ. ಹೀಗಾಗಿ ಹಿಂದಿನಿಂದಲೂ ಬದುಕುತ್ತಿರುವ ಹಳೆಯದಾದ ಗುಡಿಸಲುಗಳಲ್ಲೇ ಬದುಕು ದೂಡುತ್ತಿದ್ದೇವೆ ಎನ್ನುತ್ತಾರೆ ಆದಿವಾಸಿ ಮಹಿಳೆ ಕುಮಾರಿ. 

18 ಮನೆಗಳ ಕಾಮಗಾರಿ ಪೂರ್ಣಗೊಳ್ಳದಿರುವುದು ಒಂದೆಡೆಯಾದರೆ ಮತ್ತೊಂದೆಡೆ ಹಾಡಿಯ ಬಹುತೇಕ ಮನೆಗಳಿಗೆ ಇಂದಿಗೂ ವಿದ್ಯುತ್ ಸಂಪರ್ಕವೇ ಇಲ್ಲ. ಗ್ರಾಮದಲ್ಲಿ ವಿದ್ಯುತ್ ಲೈನ್ ಇದೆಯಾದರೂ ಮನೆಗಳಿಗೆ ವಿದ್ಯುತ್ ಬೆಳಕಿನ ಭಾಗ್ಯವಿಲ್ಲ. 30 ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರೂ ಅನಿವಾರ್ಯವಾಗಿ ದೀಪದ ಬೆಳಕಿನಲ್ಲಿ ಓದಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಸೀಮೆ ಎಣ್ಣೆಯನ್ನೂ ಕೊಡದಿರುವುದರಿಂದ ಇನ್ನು ಕೆಲವು ಮನೆಗಳಲ್ಲಿ ಕತ್ತಲಾಗುವಷ್ಟರಲ್ಲಿ ಅಡುಗೆ ಮಾಡಿ ಊಟ ಮಾಡಿ ಮಲಗಿಬಿಡುತ್ತಾರೆ. ಕಾಡಂಚಿನ ಗ್ರಾಮ ಆಗಿರುವುದರಿಂದ ಆನೆ, ಕಾಡು ಪ್ರಾಣಿಗಳು ಗ್ರಾಮಕ್ಕೆ ನುಗ್ಗಬಾರದೆಂದು ಸೋಲಾರ್ ಬೇಲಿ ಹಾಕಲಾಗಿದೆ. 

ಏನ್‌ ಗ್ರೇಟರ್ ಬೆಂಗಳೂರು ಮಾಡ್ತಾರೋ ಮಾಡಲಿ: ಡಿಕೆಶಿಗೆ ಎಚ್ಡಿಕೆ ಟಾಂಗ್

ಆದರೆ ಅವುಗಳೆಲ್ಲಾ ಮುರಿದು ಹಾಳಾಗಿ ಹೋಗಿದ್ದು ಗ್ರಾಮಕ್ಕೆ ಆನೆಗಳು ಹಗಲು ಹೊತ್ತಿನಲ್ಲೂ ನುಗ್ಗುತ್ತಿವೆ. ಹೀಗಾಗಿ ಹಾಡಿಯ ಜನರು ಜೀವವನ್ನು ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ಇದೆ. ಚುನಾವಣೆ ಬಂದಾಗ ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳು ಆ ನಂತರ ಇತ್ತ ತಿರುಗಿ ನೋಡುವುದಿಲ್ಲ. ಅಧಿಕಾರಿಗಳು ಅವರ ಇಷ್ಟದ ಕೆಲಸ ಮಾಡುತ್ತಾರೆ ಎಂದು ಹಾಡಿಯ ಯುವಕ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಒಟ್ಟಿನಲ್ಲಿ ದೇವರು ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವಂತೆ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಡಿಯ ಜನರು ಇಂದಿಗೂ ಸಂಕಷ್ಟದ ಬದುಕು ದೂಡುವಂತೆ ಆಗಿದೆ.

click me!