ಶಿರಸಿಯಲ್ಲಿ ಪಾಳು ಬಿದ್ದಿದೆ ರಾಜ್ಯದ ಪ್ರಥಮ ಮೊಲ ಸಾಕಾಣಿಕಾ ಕೇಂದ್ರ!

By Ravi JanekalFirst Published Oct 17, 2023, 9:29 AM IST
Highlights

5 ವರ್ಷಗಳ ಹಿಂದೆ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭವಾದ ಶಿರಸಿಯ ಮೊಲ ಸಾಕಾಣಿಕಾ ಕೇಂದ್ರ ಇದೀಗ ಅನಾಥವಾಗಿದೆ. ರಾಜ್ಯದಲ್ಲಿ ಎರಡು ಕಡೆ ಮಾತ್ರ ಮೊಲ ಸಾಕಾಣಿಕೆ ಕೇಂದ್ರವಿದ್ದು, ಅತ್ಯಂತ ಸುಂದರವಾದ ಮೊಲ ಬೆಳೆಸಿ, ಅಭಿವೃದ್ದಿಪಡಿಸಲು ಇಲ್ಲಿ ಕಟ್ಟಡ ಸಹಿತ ವ್ಯವಸ್ಥೆಯಿದೆ. ಆದರೆ, ಸರ್ಕಾರದ ವಿಶೇಷ ಅನುದಾನವಿಲ್ಲದೇ, ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮೊಲ ಸಾಕಾಣಿಕೆ ಕೇಂದ್ರ ದಿನೇ ದಿನೇ ಸೊರಗುವಂತಾಗಿದೆ. 

ಶಿರಸಿ (ಅ.17): ಸುಮಾರು 25 ವರ್ಷಗಳ ಹಿಂದೆ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭವಾದ ಶಿರಸಿಯ ಮೊಲ ಸಾಕಾಣಿಕಾ ಕೇಂದ್ರ ಇದೀಗ ಅನಾಥವಾಗಿದೆ. ರಾಜ್ಯದಲ್ಲಿ ಎರಡು ಕಡೆ ಮಾತ್ರ ಮೊಲ ಸಾಕಾಣಿಕೆ ಕೇಂದ್ರವಿದ್ದು, ಅತ್ಯಂತ ಸುಂದರವಾದ ಮೊಲ ಬೆಳೆಸಿ, ಅಭಿವೃದ್ದಿಪಡಿಸಲು ಇಲ್ಲಿ ಕಟ್ಟಡ ಸಹಿತ ವ್ಯವಸ್ಥೆಯಿದೆ. ಆದರೆ, ಸರ್ಕಾರದ ವಿಶೇಷ ಅನುದಾನವಿಲ್ಲದೇ, ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮೊಲ ಸಾಕಾಣಿಕೆ ಕೇಂದ್ರ ದಿನೇ ದಿನೇ ಸೊರಗುವಂತಾಗಿದೆ. 

ಹೌದು, 1984 ರಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಮೊಲ ಸಾಕಾಣಿಕಾ ಕೇಂದ್ರ ಪ್ರಾರಂಭವಾಯಿತು. ಬಳಿಕ ರಾಜ್ಯದ ವಿವಿಧೆಡೆ ಕೂಡಾ  ಮೊಲ ಸಾಕಾಣಿಕೆ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿತ್ತು. ಸದ್ಯ ಹಾವೇರಿಯ ಬಂಕಾಪುರ ಬಿಟ್ಟರೆ, ಶಿರಸಿಯಲ್ಲಿ ಮಾತ್ರ ಈ ಸಾಕಾಣಿಕಾ ಕೇಂದ್ರವಿದೆ. ಮೊದಲು ಈ ಕೇಂದ್ರಕ್ಕೆ ಒಬ್ಬ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿತ್ತಾದ್ರೂ 2003ರಲ್ಲಿ ಈ ಕೇಂದ್ರದಲ್ಲಿ ನೇಮಕವಾಗಿದ್ದ ಸಿಬ್ಬಂದಿಯನ್ನು ಸರ್ಕಾರ ರದ್ದು ಮಾಡಿತ್ತು.

ಇದು ಮೊಲದ ವರ್ಷ! ಚೈನೀಸ್‌ ಜ್ಯೋತಿಷ್ಯದ ಪ್ರಕಾರ ನಿಮ್ಮ ವರ್ಷ, ಭವಿಷ್ಯ ಇಲ್ಲಿದೆ ನೋಡಿ!

 ಈ ಕೇಂದ್ರ ಪಶುಸಂಗೋಪನಾ ಇಲಾಖಾ ಅಧೀನದಲ್ಲಿದ್ದು, ಇಲ್ಲಿಗೆ ಪ್ರತ್ಯೇಕ ಸಿಬ್ಬಂದಿ ಬೇಕಿದ್ದರೂ ಸಿಬ್ಬಂದಿ ಮಾತ್ರ ನೇಮಕವಾಗಿಲ್ಲ. ಸದ್ಯ ಪಶು ಇಲಾಖೆಯ 'ಡಿ' ಗ್ರೂಪ್ ನ ಒಬ್ಬರೇ ಸಿಬ್ಬಂದಿ ಎಲ್ಲ ನಿರ್ವಹಿಸಬೇಕಿದೆ. ಇಲ್ಲಿ  5 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಮೊಲಗಳನ್ನು ಸಾಕಲಾಗುತ್ತಿದ್ದು, ಸದ್ಯ ಈ ಮೊಲ ಸಾಕಾಣಿಕೆ ಕೇಂದ್ರದಲ್ಲಿ ಅಂದಾಜು 50-60 ಮೊಲಗಳು ಮಾತ್ರ ಇವೆ. ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ಈ ಕೇಂದ್ರದ ನಿರ್ವಹಣೆ ಕಷ್ಟವಾಗಿದ್ದು, ಮಾರುಕಟ್ಟೆಯ ಅಲಭ್ಯತೆಯಿಂದ ಮೊಲ ಸಾಕಾಣಿಕಾ ಕೇಂದ್ರ ಉತ್ತಮ ಸ್ಥಿತಿಯಲ್ಲಿ‌ ಇಲ್ಲ ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಜಾನನ ಹೊಸ್ಮನಿ.‌

 ಶಿರಸಿಯ ದೊಡ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಮೊಲ ಸಾಕಾಣಿಕಾ ಕೇಂದ್ರವಿದ್ದು, ಗ್ರಾಮೀಣ ಭಾಗದಲ್ಲಿದ್ದರೂ ಮೊದಲು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗಿತ್ತು. ಇಲ್ಲಿ ಮೊಲದ ದರ 150ರೂ.ನಿಂದ ಆರಂಭಗೊಂಡು 500ರೂ. ವರೆಗೂ ನಿಗದಿಪಡಿಸಲಾಗುತ್ತದೆ. ಪ್ರಾರಂಭದಲ್ಲಿ ಮೊಲಗಳ ಬೇಡಿಕೆ ಬಹಳವಿದ್ದರೂ ಸದ್ಯ ಅಂತಹ ಬೇಡಿಕೆ ಇಲ್ಲವೆಂದು ಹೇಳಲಾಗುತ್ತಿದೆ. ಚಂದದ ಪ್ರಾಣಿ ಮೊಲ ಅಂತ ಸಾಕುವವರು ಇದ್ದರೆ, ಇದನ್ನು ತಿನ್ನುವವರು ಕೂಡಾ ಇರುವುದರಿಂದ ಮೊಲಕ್ಕೆ ಬೇಡಿಕೆ ಕೂಡಾ ಆಗಾಗ ಬರುತ್ತದೆ. ಸರಕಾರದಿಂದ ಮೊಲದ ಆಹಾರಕ್ಕೆ ಅನುದಾನವಿದ್ದರೂ, ಕಟ್ಟಡ ನಿರ್ವಹಣೆ ಹಾಗೂ ಇತರ ವಿಷಯಗಳಿಗೆ ಯಾವುದೇ ಅನುದಾನ ಬರುತ್ತಿಲ್ಲ. 

ಮೊಲ ಆಮೆಯ ಓಟದ ಕತೆ ಕೇಳಿದ್ದೀರಾ.... ಈ ಕತೆ ನಿಜ ಅಂತ ಹೇಳ್ತಿರುವ ವೀಡಿಯೋ ಇಲ್ಲಿದೆ ನೋಡಿ

ಮೊಲವನ್ನು ಸಾಕುವ ಪಂಜರಗಳಂತೂ ಸಂಪೂರ್ಣ ಶಿಥಿಲಗೊಂಡಿವೆ. ಈ ಪ್ರದೇಶ ಮೂಲತಃ ಅರಣ್ಯ ಇಲಾಖೆಯ ಗಾಂವ್‌ಠಾಣಾ ಜಾಗವಾಗಿದ್ದು, ಪ್ರಸ್ತುತ, ಕಾಟಾಚಾರಕ್ಕೆ ಮೊಲ ಸಾಕಾಣಿಕೆ ಇರುವ ಕಾರಣ ಜಾಗದ ದುರುಪಯೋಗದ ಸಾಧ್ಯತೆಯೂ ಇದೆ. ಇದರಿಂದ ಜಾಗವನ್ನು ಸದ್ಭಳಕೆ ಮಾಡಿಕೊಳ್ಳುವತ್ತ ಸರ್ಕಾರ ಯೋಚಿಸಲಿ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ.‌

ಒಟ್ಟಾರೆಯಾಗಿ ಜಿಲ್ಲೆಯ ಶಿರಸಿಯಲ್ಲಿ ಮಾತ್ರವಿರುವ ಮೊಲ ಸಾಕಾಣಿಕ ಕೇಂದ್ರವನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಶಾಸಕರು, ಉಸ್ತುವಾರಿ ಸಚಿವರು ವಿಶೇಷ ಆಸಕ್ತಿ ವಹಿಸಬೇಕಿದೆ. ವಿಶೇಷ ಅನುದಾನವನ್ನು ಈ ಕೇಂದ್ರಕ್ಕೆ ನೀಡಿದಲ್ಲಿ ಇನ್ನೂ ಹೆಚ್ಚಿನ ಮೊಲಗಳ ತಳಿಗಳ ಸಾಕಾಣಿಕೆ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಬಹುದಾಗಿದೆ. ಆ ಮೂಲಕ ಭವಿಷ್ಯದಲ್ಲಿ ಈ ಕೇಂದ್ರದ ಜತೆಗೆ ಪಶು ಆಸ್ಪತ್ರೆ ಸಹ ಇಲ್ಲೇ ಅಭಿವೃದ್ಧಿಪಡಿಸಬಹುದಾಗಿದೆ.

click me!