ರಿಕ್ಷಾ, ಕ್ಯಾಬಲ್ಲಿ ಚಾಲಕರ ಮಾಹಿತಿಯೇ ಮಾಯ!

Published : Oct 24, 2022, 11:16 AM IST
ರಿಕ್ಷಾ, ಕ್ಯಾಬಲ್ಲಿ ಚಾಲಕರ ಮಾಹಿತಿಯೇ ಮಾಯ!

ಸಾರಾಂಶ

ರಿಕ್ಷಾ, ಕ್ಯಾಬಲ್ಲಿ ಚಾಲಕರ ಮಾಹಿತಿಯೇ ಮಾಯ! ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಆಟೋ, ಕ್ಯಾಬ್‌ಗಳಲ್ಲಿ ಚಾಲಕರ ಮಾಹಿತಿಯ ಡಿಸ್‌ಪ್ಲೇ ಕಾರ್ಡ್‌ ಅಳವಡಿಕೆ ಕಡ್ಡಾಯ -ದರೆ ನಗರದಲ್ಲಿ ಹೆಚ್ಚಿನ ಆಟೋ, ಕ್ಯಾಬ್‌ನಲ್ಲಿ ಕಾರ್ಡ್‌ ಇಲ್ಲ

ಮೋಹನ್ (ಹಂಡ್ರಂಗಿ

ಬೆಂಗಳೂರು ಅ.24) ರಾಜಧಾನಿಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಜಾರಿಗೊಳಿಸಿರುವ ಆಟೋರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಚಾಲಕನ ಮಾಹಿತಿವುಳ್ಳ ‘ಡಿಸ್‌ ಪ್ಲೇ ಕಾರ್ಡ್‌’ ಅಳವಡಿಕೆ ನಿಯಮ ಉಲ್ಲಂಘನೆ ಹೆಚ್ಚಳವಾಗಿದೆ.

ಕೊನೆಗೂ ಓಲಾ ಆಟೋ ದರ ಇಳಿಕೆ: ಮೀಟರ್‌ ದರಕ್ಕಿಂತ ಕೊಂಚ ಅಧಿಕ ದರಕ್ಕೆ ಓಲಾ

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ದಶಕದ ಹಿಂದೆಯೇ ಆಟೋ ರಿಕ್ಷಾ, ಕ್ಯಾಬ್‌ಗಳಲ್ಲಿ ಡಿಸ್‌ ಪ್ಲೇ ಕಾರ್ಡ್‌ ಅಳವಡಿಕೆ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಈ ಡಿಸ್‌ ಪ್ಲೇ ಕಾರ್ಡ್‌ನಲ್ಲಿ ಚಾಲಕನ ಹೆಸರು, ಭಾವಚಿತ್ರ, ಬ್ಯಾಡ್ಜ್‌ ಸಂಖ್ಯೆ, ಚಾಲನ ಪರವಾನಗಿ ಸಂಖ್ಯೆ, ವಿಳಾಸ, ರಕ್ತದ ಗುಂಪು ಇತರೆ ಮಾಹಿತಿ ಇರಲಿದೆ. ಈ ಡಿಸ್‌ ಪ್ಲೇ ಕಾರ್ಡನ್ನು ಪ್ರಯಾಣಿಕರಿಗೆ ಕಾಣುವ ಹಾಗೆ ಆಟೋ ರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಅಳವಡಿಸಬೇಕು. ಆದರೆ, ನಗರದಲ್ಲಿ ಸಂಚರಿಸುವ ಬಹುತೇಕ ಆಟೋ ರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಈ ಡಿಸ್‌ ಪ್ಲೇ ಕಾರ್ಡ್‌ ಕಾಣಸಿಗುವುದಿಲ್ಲ.

ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರದಲ್ಲಿ ಹಗಲು-ರಾತ್ರಿ ಲೆಕ್ಕಿಸದೆ ಜನ ಸಂಚರಿಸುತ್ತಾರೆ. ಅದರಲ್ಲೂ ಉದ್ಯೋಗ ಸೇರಿದಂತೆ ಇತರೆ ಕಾರಣಗಳಿಂದ ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಕ್ಯಾಬ್‌ಗಳು ಹಾಗೂ ಆಟೋ ರಿಕ್ಷಾಗಳಲ್ಲಿ ಸಂಚರಿಸುತ್ತಾರೆ. ಹಲವು ಬಾರಿ ಆಟೋ ಚಾಲಕರು, ಕ್ಯಾಬ್‌ ಚಾಲಕರು ಮಹಿಳಾ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸಿರುವ ಘಟನೆಗಳು ಜರುಗಿವೆ. ಕೆಲ ಪ್ರಕರಣಗಳಲ್ಲಿ ಯುವತಿಯ ಜತೆ ಕ್ಯಾಬ್‌ ಚಾಲಕ ದುವರ್ತನೆ ತೋರಿ ಮಾರ್ಗ ಮಧ್ಯೆಯೇ ಯುವತಿಯನ್ನು ಇಳಿಸಿ ಪರಾರಿಯಾಗಿರುವ ಘಟನೆಗಳೂ ಇವೆ. ಕೆಲ ಪ್ರಕರಣಗಳಲ್ಲಿ ಪೊಲೀಸರಿಗೆ ಚಾಲಕನ ಪತ್ತೆ ಸವಾಲಾಗಿದೆ.

ಚಾಲಕನೇ ಬೇರೆ!

ಹಲವು ಆಟೋ ರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಡಿಸ್‌ ಪ್ಲೇ ಕಾರ್ಡ್‌ ಅಳವಡಿಸಲಾಗಿದೆ. ಆದರೆ, ಡಿಸ್‌ ಪ್ಲೇ ಕಾರ್ಡ್‌ನಲ್ಲಿರುವ ಚಾಲಕ ವಾಸ್ತವದಲ್ಲಿ ವಾಹನ ಚಲಾಯಿಸುವ ಚಾಲಕ ಬೇರೆಯೇ ಇರುತ್ತಾರೆ. ಇದು ಸಹ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಹಲವು ಪ್ರಯಾಣಿಕರು ಈ ಬಗ್ಗೆ ಆಟೋ ಹಾಗೂ ಕ್ಯಾಬ್‌ ಚಾಲಕರನ್ನೇ ಪ್ರಶ್ನಿಸಿದ್ದಾರೆ. ಕೆಲವು ಆಟೋ ಹಾಗೂ ಕ್ಯಾಬ್‌ ಮಾಲಿಕರು ತಮ್ಮ ವಾಹನಗಳಿಗೆ ತಮ್ಮದೇ ಮಾಹಿತಿಯ ಡಿಸ್‌ ಪ್ಲೇ ಕಾರ್ಡ್‌ ಅಳವಡಿಸಿದ್ದಾರೆ. ಆದರೆ, ಬಾಡಿಗೆಗೆ ಚಾಲಕರಿಗೆ ವಾಹನ ನೀಡುತ್ತಿದ್ದಾರೆ. ಕೆಲವು ಬಾರಿ ಪ್ರತಿ ದಿನ ಚಾಲಕ ಬದಲಾಗುತಿರುತ್ತಾರೆ. ಈ ಬಗ್ಗೆ ನಗರ ಸಂಚಾರ ಪೊಲೀಸರು ಯಾವುದೇ ಗಮನ ಹರಿಸುತ್ತಿಲ್ಲ.

Bengaluru: ಮೀಟರ್‌ ಹಾಕದೇ ಆಟೋ ಚಾಲಕರ ಸುಲಿಗೆ!

ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್‌ ಅಂತ್ಯದವರೆಗೆ ಡಿಸ್‌ ಪ್ಲೇ ಕಾರ್ಡ್‌ ಅಳವಡಿಸದ ಚಾಲಕರ ವಿರುದ್ಧ ಕೇವಲ ಏಳು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಸ್ಥಳದಲ್ಲೇ ದಂಡ ವಿಧಿಸಲು ಅವಕಾಶವಿಲ್ಲ. ಪ್ರಕರಣ ದಾಖಲಿಸಿದ ಬಳಿಕ ಚಾಲಕ ನ್ಯಾಯಾಲಯದಲ್ಲಿ ದಂಡದ ಮೊತ್ತ ಪಾವತಿಸುವ ವ್ಯವಸ್ಥೆಯಿದೆ.

ಡಿಸ್‌ ಪ್ಲೇ ಕಾರ್ಡ್‌ ಜಾರಿಗೆ ಕಾರಣ

ರಾಜಧಾನಿಯಲ್ಲಿ 2005ರ ಡಿ.13ರಂದು ಬಿಪಿಒ ಮಹಿಳಾ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ(27) ಅವರನ್ನು ಕ್ಯಾಬ್‌ ಚಾಲಕ ಅತ್ಯಾಚಾರ ಮಾಡಿ ಬಳಿಕ ಕೊಲೆಗೈದು ಶವವನ್ನು ನಿರ್ಜನಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಹರಸಾಹಸಪಟ್ಟಿದ್ದರು. ಕೊನೆಗೂ ಕ್ಯಾಬ್‌ ಚಾಲಕ ಶಿವಕುಮಾರ್‌ ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ನಗರದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಪ್ರಮುಖವಾಗಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕ್ಯಾಬ್‌ ಹಾಗೂ ಆಟೋ ರಿಕ್ಷಾಗಳಲ್ಲಿ ಚಾಲಕನ ಭಾವಚಿತ್ರ ಸಹಿತ ಮಾಹಿತಿಯಿರುವ ಡಿಸ್‌ ಪ್ಲೇ ಕಾರ್ಡ್‌ ಅಳವಡಿಕೆ ಜಾರಿಗೊಳಿಸಲಾಗಿತ್ತು.

ಆಟೋರಿಕ್ಷಾ ಹಾಗೂ ಕ್ಯಾಬ್‌ಗಳಲ್ಲಿ ಚಾಲಕರ ಮಾಹಿತಿವುಳ್ಳ ಡಿಸ್‌ ಪ್ಲೇ ಕಾರ್ಡ್‌ ಅಳವಡಿಕೆ ಕಡ್ಡಾಯ. ಇದನ್ನು ಪಾಲಿಸದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಮುಂದೆ ತಪಾಸಣೆ ಮತ್ತಷ್ಟುಚರುಕುಗೊಳಿಸಲಾಗುವುದು.

-ಡಾ ಬಿ.ಆರ್‌.ರವಿಕಾಂತೇಗೌಡ, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ.

 

ಚಾಲಕರ ಮಾಹಿತಿವುಳ್ಳ ಡಿಸ್‌ ಪ್ಲೇ ಕಾರ್ಡ್‌ ಅಳವಡಿಕೆಯ ಉದ್ದೇಶ ಉತ್ತಮವಾಗಿದೆ. ಡಿಸ್‌ ಪ್ಲೇ ಕಾರ್ಡ್‌ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಸಂಚಾರ ಪೊಲೀಸರು ಆ ಗೊಂದಲಗಳನ್ನು ಪರಿಹರಿಸಬೇಕು. ನಗರ ಸಂಚಾರ ವಿಭಾಗ ವ್ಯಾಪ್ತಿಯಲ್ಲಿ ಡಿಸ್‌ ಪ್ಲೇ ಕಾರ್ಡ್‌ ವಿತರಣೆ, ಅಪ್‌ಡೇಟ್‌ಗೆ ಅವಕಾಶ ನೀಡಬೇಕು.

-ಮಂಜುನಾಥ್‌, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಯೂನಿಯನ್‌ ಅಧ್ಯಕ್ಷ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!