ಮೇಲ್ಮನವಿ ಸಲ್ಲಿಸದಿದ್ದರೂ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್!

Published : Jul 03, 2023, 07:30 AM IST
ಮೇಲ್ಮನವಿ ಸಲ್ಲಿಸದಿದ್ದರೂ ಶಿಕ್ಷೆ ರದ್ದುಪಡಿಸಿದ  ಹೈಕೋರ್ಟ್!

ಸಾರಾಂಶ

ಆಸ್ತಿ ಪಾಲು ವಿಚಾರದಲ್ಲಿ ಮಲ ಸಹೋದರನನ್ನು ಕೊಲೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ ಇಬ್ಬರನ್ನು ಖುಲಾಸೆಗೊಳಿಸಿದ  ಹೈಕೋರ್ಟ್, ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರೂ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸದ ಇನ್ನೊಬ್ಬ ಆರೋಪಿಯನ್ನು ಸಹ ಶಿಕ್ಷೆಯಿಂದ ಪಾರು ಮಾಡಿ ಅಪರೂಪದ ಆದೇಶ ಹೊರಡಿಸಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಜು.3) ಆಸ್ತಿ ಪಾಲು ವಿಚಾರದಲ್ಲಿ ಮಲ ಸಹೋದರನನ್ನು ಕೊಲೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದ ಇಬ್ಬರನ್ನು ಖುಲಾಸೆಗೊಳಿಸಿದ ಹೈಕೋರ್ಚ್‌, ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರೂ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸದ ಇನ್ನೊಬ್ಬ ಆರೋಪಿಯನ್ನು ಸಹ ಶಿಕ್ಷೆಯಿಂದ ಪಾರು ಮಾಡಿ ಅಪರೂಪದ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ಮೊದಲ ಆರೋಪಿಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ತಾಲೂಕಿನ ಕರಿಯಪ್ಪನಹಳ್ಳಿ ಗ್ರಾಮದ ಮೋಹನ್‌ ಕುಮಾರ್‌ (ಮೃತ ರವಿಶಂಕರ್‌ ಮಲ ಸಹೋದರ) ಮತ್ತು ಮೂರನೇ ಆರೋಪಿಯಾದ ಬೆಂಗಳೂರು ನಗರದ ಬನ್ನೇರುಘಟ್ಟಸಮೀಪದ ದೇವರಚಿಕ್ಕನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಹಿಂದುಗಳ ತಾಳ್ಮೆ ಯಾಕೆ ಪರೀಕ್ಷೆ ಮಾಡ್ತೀರಿ?, ಪುಣ್ಯಕ್ಕೆ ಅವರು ಕಾನೂನು ಮುರಿಯೋದಿಲ್ಲ: ಅಲಹಾಬಾದ್ ಹೈಕೋರ್ಟ್‌

ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ ಮೊದಲ ಮತ್ತು ಮೂರನೇ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ  ಹೈಕೋರ್ಟ್(Karnataka hihcourt) ಖುಲಾಸೆಗೊಳಿಸಿತು. ಆದರೆ, ಮೊದಲ ಆರೋಪಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ಎರಡನೇ ಆರೋಪಿ ಹರೀಶ ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಹೈಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಿಲ್ಲ. ಆತ ಸಹ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪವಿದೆ. ಮೇಲ್ಮನವಿದಾರರಿಬ್ಬರನ್ನು ಖುಲಾಸೆ ಮಾಡಿರುವುದರಿಂದ ಹರೀಶನನ್ನೂ ದೋಷಮುಕ್ತಗೊಳಿಸಿ ಶಿಕ್ಷೆ ರದ್ದುಪಡಿಸುವಂತೆ ಕೋರಿದರು.

ಈ ಮನವಿ ಸಮಂಜಸವಾಗಿದ್ದು, ಪ್ರಕರಣದಲ್ಲಿ ಮೂರನೇ ಆರೋಪಿ ನಿರ್ವಹಿಸಿದ ಪಾತ್ರವನ್ನೇ ಹರೀಶ ಸಹ ನಿಭಾಯಿಸಿದ್ದಾನೆ ಎಂಬ ಆರೋಪವಿದೆ. ಸಾಕ್ಷ್ಯಧಾರಗಳಿಲ್ಲದ ಕಾರಣ ಮೂರನೇ ಆರೋಪಿಯನ್ನು ಖುಲಾಸೆ ಮಾಡಲಾಗಿದೆ. ಇದೇ ಲಾಭವನ್ನು ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸದ ಹರೀಶ್‌ಗೂ ವಿಸ್ತರಿಸುವುದು ನ್ಯಾಯಸಮ್ಮತ ಎಂದು ತೀರ್ಮಾನಿಸಿತು. ಜತೆಗೆ, ಆತನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿ, ಇತರೆ ಪ್ರಕರಣದಲ್ಲಿ ಬಂಧನವು ಅವಶ್ಯಕತೆ ಇಲ್ಲವಾದರೆ ಕೂಡಲೇ ಹರೀಶ್‌ನನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ರಾಜಮ್ಮ ಮತ್ತು ವೆಂಕಟಪ್ಪ ದಂಪತಿಗೆ ಮೋಹನ್‌ ಕುಮಾರ್‌ ಜನಿಸಿದ್ದರು. ಕೆಲ ವರ್ಷಗಳ ನಂತರ ರಾಜಮ್ಮ ವೆಂಕಟಪ್ಪನನ್ನು ತ್ಯಜಿಸಿ ಮೋಟಪ್ಪ ಎಂಬುವನೊಂದಿಗೆ ಜೀವನ ಸಾಗಿಸುತ್ತಿದ್ದರು. ಮೋಟಪ್ಪ ಅವರಿಂದ ರಾಜಮ್ಮ ರವಿಶಂಕರ್‌ಗೆ ಜನ್ಮ ನೀಡಿದ್ದರು. ಆಸ್ತಿ ಪಾಲು ವಿಚಾರವಾಗಿ ಮೋಹನ್‌ಕುಮಾರ್‌ ವಿರುದ್ಧ ರವಿಶಂಕರ್‌, ಆನೇಕಲ್‌ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಆಟೋ ಚಾಲಕನಾದ ರವಿಶಂಕರ್‌ 2013ರ ಸೆ.2ರಿಂದ ಕಾಣೆಯಾಗಿದ್ದಾನೆ ಎಂದು ತಾಯಿ ರಾಜಮ್ಮ ಬನ್ನೇರುಘಟ್ಟಪೊಲೀಸರಿಗೆ ಸೆ.4ರಂದು ದೂರು ದಾಖಲಿಸಿದ್ದರು. ಏಳು ದಿನಗಳ ನಂತರ ಆಸ್ತಿ ಪಾಲು ವಿಚಾರವಾಗಿ ರವಿಶಂಕರ್‌, ಮೋಹನ್‌ ಕುಮಾರ್‌ ವಿರುದ್ಧ ಸಿವಿಲ್‌ ದಾವೆ ಹೂಡಿದ್ದಾರೆ. ಇದರಿಂದ ರವಿಶಂಕರ್‌ ಮೇಲೆ ಮೋಹನ್‌ಗೆ ದ್ವೇಷವಿತ್ತು ಎಂದು ಸಂಶಯ ವ್ಯಕ್ತಪಡಿಸಿ ರಾಜಮ್ಮ ದೂರು ನೀಡಿದ್ದರು. ಪೊಲೀಸರು ಮೋಹನ್‌ಕುಮಾರ್‌ ಬಂಧಿಸಿ ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಹರೀಶ ಮತ್ತು ಮಂಜುನಾಥ್‌ ಜೊತೆಗೂಡಿ ರವಿಶಂಕರ್‌ನನ್ನು ನಿರ್ಜನ ಪ್ರದೇಶದ ನೀಲಗಿರಿ ತೋಪಿಗೆ ಕರೆದೊಯ್ದು ಕುತ್ತಿಗೆಗೆ ನೈಲಾನ್‌ ಹಗ್ಗ ಬಿಗಿದು ಉರುಗಟ್ಟಿಸಿ ಕೊಲೆ ಮಾಡಿ ಬಳಿಕ ತೋಪಿನಲ್ಲೇ ಶವವನ್ನು ಹೂತುಹಾಕಿದೆವು ಎಂದು ಮೋಹನ್‌ ಕುಮಾರ್‌ ತಪ್ಪೊಪ್ಪಿಕೊಂಡಿದ್ದ. 2013ರ ಸೆ.26ರಂದು ರವಿಶಂಕರ್‌ನ ಶವವನ್ನು ಹೊರತೆಗೆಯಲಾಗಿತ್ತು. ನಂತರ ಹರೀಶ್‌ ಮತ್ತು ಮಂಜುನಾಥ್‌ನನ್ನು ಬಂಧಿಸಿದ್ದ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು. 

ಹುದ್ದೆಯೇ ಇಲ್ಲದೆಡೆ 5 ಸಬ್‌ ರಿಜಿಸ್ಟ್ರಾರ್‌ಗಳ ಕೆಲಸ: ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ವಿಚಾರಣೆ ವೇಳೆ ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು. ಆದರೆ, ಮೂವರು ಆರೋಪಿಗಳನ್ನು ದೋಷಿಯಾಗಿ ಪರಿಗಣಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಚ್‌, ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಮೋಹನ್‌ಕುಮಾರ್‌ ಹಾಗೂ ಮಂಜುನಾಥ್‌ ಹೈಕೋರ್ಚ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು. ಎರಡನೇ ಆರೋಪಿ ಹರೀಶ ಮಾತ್ರ ಮೇಲ್ಮನವಿ ಸಲ್ಲಿಸಿರಲಿಲ್ಲ. ಸಾಕ್ಷ್ಯಧಾರಗಳ ಕೊರತೆಯಿಂದ ಮೇಲ್ಮನವಿದಾರರಿಬ್ಬರನ್ನು ನಿರ್ದೋಷಿಗಳೆಂದು ತೀರ್ಮಾನಿಸಿದ ಹೈಕೋರ್ಚ್‌, ಜೀವಾವಧಿ ಶಿಕ್ಷೆ ರದ್ದುಪಡಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ