
ಬೆಂಗಳೂರು (ಆ.18) : ವಾಸ್ತು ದೋಷವಿದೆ ಎಂದು ನೆಪ ಹೇಳಿ ಪರಿಚಿತ ವೃದ್ಧೆಯೊಬ್ಬರಿಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಮನೆಯನ್ನು ಮಾರಾಟ ಮಾಡಿಸಿ ಬಳಿಕ ಅವರಿಗೆ ವಂಚಿಸಿ ಮೂರೂವರೆ ಕೋಟಿ ರು. ದೋಚಿದ್ದ ಪ್ರತಿಷ್ಠಿತ ಖಾಸಗಿ ಬ್ಯಾಂಕ್‌ನ ಇಬ್ಬರು ಮಹಿಳಾ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರನ್ನು ಬನಶಂಕರಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ನಾಗರಬಾವಿಯ ರಾಕೇಶ್, ಆತನ ಪತ್ನಿ ಆರುಂಧತಿ, ಶಿವಮೊಗ್ಗ ಜಿಲ್ಲೆಯ ಆರ್.ವಿಶಾಲಾ ಹಾಗೂ ಆಕೆಯ ಮಗಳು ಅಪೂರ್ವ ಬಂಧಿತರಾಗಿದ್ದು, ಆರೋಪಿಗಳಿಂದ ಒಂದೂವರೆ ಕೋಟಿ ರು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಸಂಜೀವಪ್ಪ ಹಾಗೂ ಪರಿಮಳ ಪತ್ತೆಗೆ ತನಿಖೆ ನಡೆದಿದೆ.
‘ಒನ್ ಇಂಡಿಯಾ ಒನ್ ಕಾರ್ಡ್’ ಹೆಸರಲ್ಲಿ ವಂಚನೆ: ಖದೀಮರ ಜಾಲ ಪತ್ತೆ ಹಚ್ಚಿದ ವಿಜಯಪುರ ಪೊಲೀಸರು..!
ಕೆಲ ದಿನಗಳ ಹಿಂದೆ ತಮಗೆ ಪರಿಚಿತ ಪದ್ಮನಾಭನಗರದ ಶಾಂತಾ (65) ಅವರಿಗೆ ವಿಮೆ ಮಾಡಿಸುವ ನೆಪದಲ್ಲಿ ಬ್ಯಾಂಕ್ ಉದ್ಯೋಗಿಗಳಾದ ಅಪೂರ್ವ ಹಾಗೂ ಆರುಂಧತಿ ವಂಚಿಸಿ ಹಣ ಲಪಟಾಯಿಸಿದ್ದರು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾದ ಬಳಿಕ ಪದ್ಮನಾಭನಗರದಲ್ಲಿ ತಮ್ಮ ಮಗಳ ಜತೆ ಶಾಂತಾ ನೆಲೆಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪತಿ ನಿಧನರಾಗಿದ್ದಾರೆ. ಹಲವು ವರ್ಷಗಳಿಂದ ಶಾಂತಾ ಅವರಿಗೆ ಬಸನವಗುಡಿಯ ಖಾಸಗಿ ಬ್ಯಾಂಕ್‌ನ ಉದ್ಯೋಗಿಗಳಾದ ಆರುಂಧತಿ ಹಾಗೂ ಅಪೂರ್ವ ಅವರ ಪರಿಚಯವಿತ್ತು. ಈ ಸ್ನೇಹದಲ್ಲಿ ಹಣಕಾಸು ವ್ಯವಹಾರವನ್ನು ಆ ಇಬ್ಬರ ಜತೆ ಅಜ್ಜಿ ಚರ್ಚಿಸುತ್ತಿದ್ದರು.
ಹೀಗಿರುವಾಗ ಎರಡು ವರ್ಷಗಳ ಹಿಂದೆ ಪದ್ಮನಾಭನಗದಲ್ಲಿ ಅಜ್ಜಿಗೆ ಸೇರಿದ ಕೋಟ್ಯಾಂತರ ಮೌಲ್ಯದ ಮನೆ ಇರುವುದು ತಿಳಿದ ಆರೋಪಿಗಳು, ಅಜ್ಜಿ ಮನೆ ಮಾರಾಟ ಮಾಡಿಸಿ ಹಣ ಲಪಾಟಿಸಲು ಸಂಚು ರೂಪಿಸಿದ್ದರು. ಆಗ ವಾಸ್ತು ದೋಷ ಎಂದು ಹೇಳಿ ಶಾಂತಾ ಅವರಿಗೆ ಮನೆ ಮಾರಾಟ ಮಾಡುವಂತೆ ಆರುಂಧತಿ ಹಾಗೂ ಅಪೂರ್ವ ಸಲಹೆ ನೀಡಿದ್ದರು. ಬಳಿಕ ಆರುಧಂತಿ ಪತಿ ರಾಕೇಶ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಆತನ ಮೂಲಕವೇ ಅಜ್ಜಿ ಮನೆಯನ್ನು ನಾಲ್ಕೂವರೆ ಕೋಟಿ ರು.ಗೆ ಮಾರಾಟ ಮಾಡಿಸಿದ್ದರು. ಈ ಮಾರಾಟದ ಆ ಹಣವು ಅಜ್ಜಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿತ್ತು. ಈ ಹಣವನ್ನು ದೋಚಲು ದುರಾಲೋಚಿಸಿದ ಆರೋಪಿಗಳು, ನಿಮ್ಮ ಪತಿಯ ಷೇರುಗಳ ಹಣ ಕೊಡಿಸುತ್ತೇವೆ. ಆದರೆ ಬ್ಯಾಂಕ್‌ನಲ್ಲಿರುವ ನಿಮ್ಮ ಎಫ್‌ಡಿ ಖಾತೆಯನ್ನು ಮುಕ್ತಾಯಗೊಳಿಸುವಂತೆ ಅಜ್ಜಿಗೆ ಸಲಹೆ ನೀಡಿದ್ದರು. ಈ ಮಾತು ನಂಬಿದ ಶಾಂತಾ ಅವರನ್ನು ಮೇನಲ್ಲಿ ಕತ್ರಿಗುಪ್ಪೆಯಲ್ಲಿರುವ ರಾಷ್ಟ್ರೀಯ ಬ್ಯಾಂಕ್‌ನ ಶಾಖಾಗೆ ಕರೆದೊಯ್ದು 1.9 ಕೋಟಿ ರು. ಮೊತ್ತದ ಎರಡು ಎಫ್‌ಡಿ ಖಾತೆಗಳನ್ನು ಮುಕ್ತಾಯಗೊಳಿಸಿದ್ದರು. ಈ ವೇಳೆ ಶಾಂತಾ ಅವರಿಂದ ಆರು ಖಾಲಿ ಚೆಕ್ ಹಾಗೂ ಕೆಲ ದಾಖಲೆಗಳಿಗೆ ಸಹಿ ಪಡೆದರು. ಈ ಚೆಕ್‌ಗಳನ್ನು ಆರ್‌ಟಿಜಿಎಸ್ ಮಾಡಿಸಿಕೊಂಡು ಆರೋಪಿಗಳು, ಶಾಂತಾ ಅವರ ಖಾತೆಯಿಂದ ಮೂರುವರೆ ಕೋಟಿ ರು.ಗಳನ್ನು ಜೂನ್ ತಿಂಗಳಲ್ಲಿ ಅಪೂರ್ವ ತಾಯಿ ವಿಶಾಲಾ, ಮಾವ ಸಂಜೀವಪ್ಪ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಎಸ್‌ಎಂಎಸ್‌ನಿಂದ ಸಿಕ್ಕಿಬಿದ್ದ ವಂಚಕರು
ತಮ್ಮ ಮೊಬೈಲ್‌ಗೆ ಜೂನ್‌ನಲ್ಲಿ ಬ್ಯಾಂಕ್‌ನಿಂದ ಯಾವುದೇ ಎಸ್‌ಎಂಎಸ್ ಬಾರದೆ ಹೋದಾಗ ಅನುಮಾನಗೊಂಡ ಶಾಂತಾ ಅವರು, ತಮ್ಮ ಎಫ್‌ಡಿ ಖಾತೆ ಹಾಗೂ ವಿಮೆ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಿಸಿದ್ದಾರೆ. ಆಗ ಬ್ಯಾಂಕ್ ಅಧಿಕಾರಿಗಳಿಂದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಈ ಬಗ್ಗೆ ಬನಶಂಕರಿ ಠಾಣೆ ಪೊಲೀಸರಿಗೆ ಶಾಂತಾ ದೂರು ನೀಡಿದ್ದಾರೆ.
420 ಇನ್ನು ವಂಚನೆ ಅಲ್ಲ, 302 ಕೊಲೆ ಅಲ್ಲ, ಅತ್ಯಾಚಾರಕ್ಕೆ ಸೆಕ್ಷನ್ 375, 376ರಡಿ ಕೇಸ್ ಇಲ್ಲ!
ವಿಮಾ ಕಂಪನಿ ಪ್ರತಿನಿಧಿ ಸೋಗು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಹುಂಡಿಪುರ ಗ್ರಾಮದ ಆರುಂಧತಿ, ಈ ಮೊದಲು ಮೈಸೂರಿನಲ್ಲಿ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ರಾಕೇಶ್ ಜತೆ ವಿವಾಹವಾದ ಬಳಿಕ ಬೆಂಗಳೂರಿ ಗೆ ಬಂದ ಆಕೆ, ನಂತರ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದಳು. ಜೀವ ವಿಮೆ ಮಾಡಿಕೊಡುವ ನೆಪದಲ್ಲಿ ಶಾಂತಾ ಅವರನ್ನು ಆರುಂಧತಿ ದಂಪತಿ ಪರಿಚಯ ಮಾಡಿಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ