ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು: ಡೀಟೆಲ್ಸ್ ಇಲ್ಲಿದೆ

By Kannadaprabha NewsFirst Published Oct 24, 2021, 7:35 AM IST
Highlights
  • ನಾಳೆಯಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು
  • ಕೆಎಟಿ ತಡೆ ತೆರವು ಬೆನ್ನಲ್ಲೇ ಪರಿಷ್ಕೃತ ವೇಳಾಪಟ್ಟಿಪ್ರಕಟ
  • 72 ಸಾವಿರಕ್ಕೂ ಹೆಚ್ಚು ಶಿಕ್ಷಕರಿಂದ ವರ್ಗಾವಣೆಗೆ ಅರ್ಜಿ

ಬೆಂಗಳೂರು(ಅ.24): ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ತಡೆಯಾಜ್ಞೆ ತೆರವಾದ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ, ವರ್ಗಾವಣೆ ಪ್ರಕ್ರಿಯೆಗೆ ಪರಿಷ್ಕೃತ ವೇಳಾಪಟ್ಟಿಪ್ರಕಟಿಸಿದ್ದು, ಅ.25ರಿಂದ ಪ್ರಕ್ರಿಯೆ ಪುನಾರಂಭಗೊಳ್ಳಲಿದೆ.

ಹೊಸ ವೇಳಾಪಟ್ಟಿಪ್ರಕಾರ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ತತ್ಸಮಾನ ಹುದ್ದೆಗಳ ವರ್ಗಾವಣೆ ಪ್ರಕ್ರಿಯೆ ಅ.25ರಿಂದ 2022ರ ಫೆಬ್ರವರಿ 26ರವರೆಗೂ ನಡೆಯಲಿದೆ. ಸುಮಾರು 72 ಸಾವಿರಕ್ಕೂ ಅಧಿಕ ಶಿಕ್ಷಕರು ಈಗಾಗಲೇ ವರ್ಗಾವಣೆ ಅರ್ಜಿ ಸಲ್ಲಿಸಿದ್ದಾರೆ. ತಾಂತ್ರಿಕ ಕಾರಣದಿಂದ ಅರ್ಜಿ ತಿರಸ್ಕೃತವಾಗಿರುವವರಿಗೂ ಪುನಃ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶವನ್ನು ನೀಡಲಾಗಿತ್ತು. 2019-20ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ ಪಡೆದವರಿಗೆ ಆದ್ಯತೆ ಮೇಲೆ ತಾವು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ತಾಲೂಕು, ಜಿಲ್ಲೆಗೆ ವಾಪಸ್‌ ವರ್ಗಾವಣೆ ಪಡೆಯಲು ಅವಕಾಶ ನೀಡಲಾಗಿದೆ.

ಆಧುನಿಕ ಕೋರ್ಸ್‌ ಗಳೊಂದಿಗಿನ ತರಬೇತಿ ನ.1ರಿಂದ ಆರಂಭ: ಅಶ್ವತ್ಥನಾರಾಯಣ

ಆಯಾ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಭಾಗೀಯ ಸಹನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಅ.1ರವರೆಗೆ ವರ್ಗಾವಣೆಗೆ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಅ.25ರಂದು ಪ್ರಕಟಿಸಬೇಕು. 2019ರಲ್ಲಿ ಕಡ್ಡಾಯ ವರ್ಗಾವಣೆಗೆ ಒಳಗಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅ.26ರಿಂದ, ಪ್ರೌಢ ಶಾಲಾ ಶಿಕ್ಷಕರಿಗೆ ಅ.28ರಿಂದ ಕೌನ್ಸೆಲಿಂಗ್‌ ನಡೆಸಬೇಕು ಎಂದು ಇಲಾಖೆ ಅಧಿಸೂಚನೆ ಹೊರಡಿಸಿದೆ.

ಉಳಿದ ಶಿಕ್ಷಕರಿಗೆ ಸಾಮಾನ್ಯ ಕೋರಿಕೆ ವರ್ಗಾವಣೆ, ಪರಸ್ಪರ ವರ್ಗಾವಣೆ, ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌, ಅಂತಿಮ ಜ್ಯೇಷ್ಠತಾ ಪಟ್ಟಿಪ್ರಕಟ, ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆಗಳು, ಅಂತರ ವಿಭಾಗೀಯ ಹಂತದ ವರ್ಗಾವಣೆ ಪ್ರಕ್ರಿಯೆಗಳು, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ, ಅಧಿಕಾರಿಗಳು ಹಾಗೂ ಮುಖ್ಯಶಿಕ್ಷಕರ ವರ್ಗಾವಣೆ ಸೇರಿ ಇಡೀ ಪ್ರಕ್ರಿಯೆ 2022ರ ಫೆಬ್ರವರಿ 26ರವರೆಗೂ ನಡೆಯಲಿದೆ ಎಂದು ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

click me!