Covid 19 Threat: ಶಾಲೆ ಬಂದ್‌ಗೆ ಶಿಕ್ಷಕರ ವಿರೋಧ: ಪೋಷಕರು, ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ!

Published : Jan 06, 2022, 10:20 AM IST
Covid 19 Threat: ಶಾಲೆ ಬಂದ್‌ಗೆ ಶಿಕ್ಷಕರ ವಿರೋಧ: ಪೋಷಕರು, ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ!

ಸಾರಾಂಶ

*ಶಾಲೆ ಬಂದ್‌ಗೆ ಶಿಕ್ಷಕರು, ಸಂಘಟನೆಗಳ ವಿರೋಧ *ಪೋಷಕರು, ವಿದ್ಯಾರ್ಥಿಗಳಿಂದ ಮಿಶ್ರ ಪ್ರತಿಕ್ರಿಯೆ *ಶಾಲೆಗೆ ರಜೆ ಕೊಟ್ಟಮಾತ್ರಕ್ಕೆ ಮಕ್ಕಳು ಸೇಫಾ: ಒಕ್ಕೂಟ  

ಬೆಂಗಳೂರು (ಜ. 5): ಕೋವಿಡ್‌ ಮೂರನೇ ಅಲೆ (Covid 3rd Wave) ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಜ.6ರಿಂದ 14 ದಿನಗಳ ಕಾಲ ಶಾಲೆಗಳ ಬಂದ್‌ (Closure of Schools ) ಮಾಡಿರುವ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲಾ ಸಂಘಟನೆಗಳು, ಶಾಲಾ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ವಿದ್ಯಾರ್ಥಿಗಳು ಮತ್ತು ಪೋಷಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಕ್ಕಳು ಶಾಲೆ, ಕಾಲೇಜಿನಲ್ಲೇ ಹೆಚ್ಚು ಸುರಕ್ಷಿತವಾಗಿರುತ್ತಿದ್ದರು. ಸರ್ಕಾರದ ನಿರ್ಧಾರದಿಂದ ಮಕ್ಕಳು ಪೋಷಕರು, ಸಂಬಂಧಿಕರು, ಸ್ನೇಹಿತರೊಂದಿಗೆ ಎಲ್ಲಿಗೆ ಬೇಕಾದರೂ ಓಡಾಡಲು ಅವಕಾಶ ನೀಡಿದಂತಾಗಿದೆ. ಶಾಲೆ, ಕಾಲೇಜು ಬಂದ್‌ ಮಾಡಿದ ಮಾತ್ರಕ್ಕೆ ಮಕ್ಕಳು ಮನೆಯಲ್ಲಿ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿರಲು ಸಾಧ್ಯ. ಎಷ್ಟುಮಕ್ಕಳು ಎಲ್ಲೂ ಹೋಗದೆ ಮನೆಯಲ್ಲೇ ಇರುತ್ತಾರೆ. ಉಳಿದೆಲ್ಲಾ ಚಟುವಟಿಕೆಗಳನ್ನು ನಿಬಂರ್‍ಧಿಸದೆ ಶಾಲೆ, ಕಾಲೇಜುಗಳನ್ನು ಮಾತ್ರ ಸಂಪೂರ್ಣ ನಿರ್ಬಧಿಸಿರುವ ಸರ್ಕಾರದ ಕ್ರಮ ಸಂಪೂರ್ಣ ಅವೈಜ್ಞಾನಿಕ ಎಂಬ ಅಸಮಾಧಾನ, ಅಭಿಪ್ರಾಯಗಳು ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳಿಂದ ವ್ಯಾಪಕವಾಗಿ ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: Weekend Curfew: ಸಂಚಾರಕ್ಕೆ ಯಾವುದೇ ಪಾಸ್‌ ಇಲ್ಲ: ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಕ್ರಿಮಿನಲ್‌ ಕೇಸ್‌!

ಶಾಲೆ, ಕಾಲೇಜು ಬಂದ್‌ ಕ್ರಮವನ್ನು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌), ರಾಜ್ಯ ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ರುಪ್ಸಾ), ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಮನ್ವಯ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

"

ಮಿಶ್ರ ಪ್ರತಿಕ್ರಿಯೆ:

ವಿದ್ಯಾರ್ಥಿಗಳ ವಲಯದಲ್ಲಿ ಬಹಳಷ್ಟುವಿದ್ಯಾರ್ಥಿಗಳು ಭೌತಿಕ ತರಗತಿಗಳು ಆರಂಭವಾಗಿ ಕೆಲ ತಿಂಗಳಷ್ಟೇ ಆಗಿದೆ. ಅರ್ಧದಷ್ಟುಪಠ್ಯ ಬೋಧನೆ ಪೂರ್ಣಗೊಂಡಿದೆ. ಇನ್ನೂ ಅರ್ಧ ಬಾಕಿ ಇದೆ. ಬಾಕಿ ಇರುವ ಪಠ್ಯವನ್ನು ಆನ್‌ಲೈನ್‌ನಲ್ಲಿ ಕೇಳಲು ಆಸಕ್ತಿಯೇ ಬರುವುದಿಲ್ಲ. ಈಗಾಗಲೇ ಕೋವಿಡ್‌ ಎರಡನೇ ಅಲೆ ವೇಳೆ ಆನ್‌ಲೈನ್‌ ಶಿಕ್ಷಣವನ್ನು ನೋಡಿದ್ದೇವೆ. ಇದು ಭೌತಿಕ ತರಗತಿಯ ಅರ್ಧದಷ್ಟೂಅರ್ಥವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ಮಾತ್ರ ನಾವು ಆನ್‌ಲೈನ್‌ ಶಿಕ್ಷಣಕ್ಕೂ ಸಿದ್ಧ. ಕೋವಿಡ್‌ ಕಡಿಮೆಯಾಗುವವರೆಗೆ ಆನ್‌ಲೈನ್‌ ಶಿಕ್ಷಣ ನಡೆಸುವುದೇ ಸರಿ. ನಮಗೆ ಇದು ತರಗತಿ ಪಾಠದಷ್ಟೇ ಸರಿಯಾಗಿ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಉದ್ಯೋಗ ನಷ್ಟದ ಆತಂಕ:

ಖಾಸಗಿ ಶಾಲಾ ಶಿಕ್ಷಕರು, ಶಾಲೆ ಬಂದ್‌ನಿಂದ ಮತ್ತೆ ನಾವು ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟದ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ. ಸರ್ಕಾರ ನಮಗೆ ಯಾವುದೇ ಪರಿಹಾರವನ್ನೂ ನೀಡಿಲ್ಲ. ಕಳೆದ ವರ್ಷ ಘೋಷಿಸಿದ ಪರಿಹಾರವೇ ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಮನೆಗಿಂತ ಶಾಲೆಯಲ್ಲೇ ಹೆಚ್ಚು ಸುರಕ್ಷಿತ

ಮಕ್ಕಳು ಮನೆಗಿಂತ ಶಾಲೆಯಲ್ಲೇ ಹೆಚ್ಚು ಸುರಕ್ಷಿತವಾಗಿರುತ್ತಾರೆ ಎಂಬುದು ಸರ್ಕಾರಕ್ಕೂ ಗೊತ್ತು. ಆದರೂ, ಶಾಲೆ ಬಂದ್‌ ಮಾಡಿರುವುದರಿಂದ ರಾಜ್ಯಕ್ಕೆ ಆರ್ಥಿಕ ಸಂಕಷ್ಟದ ಜತೆಗೆ ದೊಡ್ಡ ಶೈಕ್ಷಣಿಕ ಸಂಕಷ್ಟಕ್ಕೂ ದಾರಿಯಾಗಲಿದೆ. ಈಗಾಗಲೇ ನಿರಂತರ ಕಲಿಕೆಯಿಂದ ವಂಚಿತರಾಗಿರುವ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಮತ್ತಷ್ಟುಬರೆ ಬೀಳಲಿದೆ. ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿ ಶಾಲೆ, ಕಾಲೇಜು ಬಂದ್‌ ಮಾಡಿರುವುದು ಅವೈಜ್ಞಾನಿಕ. ಬೇಕಿದ್ದರೆ ಎಲ್ಲವನ್ನೂ ಬಂದ್‌ ಮಾಡಿ ಶಾಲೆ ಕಾಲೇಜು ನಡೆಸಲಿ ಎಂದು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ  ಡಿ. ಶಶಿಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿCoronavirus ಕೊರೋನಾ ನಿಯಂತ್ರಣಕ್ಕೆ ನೋಡಲ್‌ ಅಧಿಕಾರಿಗಳನ್ನ ನೇಮಿಸಿದ ರಾಜ್ಯ ಸರ್ಕಾರ

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯನ್ನೂ ಗಮನಿಸಬೇಕು. ಇಡೀ ಬೆಂಗಳೂರಿನ ಶಾಲೆಗಳನ್ನು ಬಂದ್‌ ಮಾಡುವ ಬದಲು ವಲಯವಾರು ಕಂಟೈನ್ಮೆಂಟ್‌ ಝೋನ್‌ ಮಾಡಿ ಯಾವ್ಯಾವ ವಲಯದಲ್ಲಿ ಸೋಂಕು ಹೆಚ್ಚಿದೆ ಅಲ್ಲಿ ಬಂದ್‌ ಮಾಡಿ, ಸೋಂಕು ಕಡಿಮೆಯಾಗುತ್ತಿದ್ದಂತೆ ಅಲ್ಲದೆ ಮತ್ತೆ ಶಾಲೆ ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ಹೇಳಿದ್ದಾರೆ

ಅಭಿಪ್ರಾಯಗಳು

ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯ ವೇಳೆ ಕೆಲಸ ಕಳೆದುಕೊಂಡು ತೀವ್ರ ಸಂಕಷ್ಟಎದುರಿಸಿದ್ದೆ. ಹಲವು ತಿಂಗಳ ಬಳಿಕ ಮತ್ತೊಂದು ಕೆಲಸ ಸಿಕ್ಕಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗುತ್ತಿದ್ದೆ. ಈಗ ಮಕ್ಕಳನ್ನು ನೋಡಿಕೊಳ್ಳಲು ಕೆಲಸ ಬಿಡಬೇಕು. ಬಿಟ್ಟರೆ ಮನೆಯನ್ನು ನಡೆಸುವುದೇ ಕಷ್ಟ. ಇಂತಹ ಶಿಕ್ಷೆಗಿಂತ ಕೋವಿಡ್‌ ಎದುರಿಸಿಕೊಂಡು ಜೀವಿಸುವುದೇ ವಾಸಿ.

- ಗೀತಾ ಶಿವರಾಮ್‌. ಗಾರ್ಮೆಂಟ್ಸ್‌ ಉದ್ಯೋಗಿ

ನಮಗೆ ಮಕ್ಕಳ ಶಿಕ್ಷಣಕ್ಕಿಂತ ಸುರಕ್ಷತೆ ಮುಖ್ಯ. ನಮ್ಮ ಸಂಸ್ಥೆಯಲ್ಲಿ ಕಳೆದ ಎರಡನೇ ಅಲೆಯಲ್ಲಿ ನೀಡಿದ ವರ್ಕ್ ಫ್ರಂ ಹೋಂ ಅನ್ನು ಇಂದಿಗೂ ಮುಂದುವರೆಸಿದ್ದಾರೆ. ಮಕ್ಕಳೂ ನಮ್ಮ ಜತೆ ಮನೆಯಲ್ಲೇ ಇದ್ದರೆ ಸುರಕ್ಷಿತವಾಗಿರುತ್ತಾರೆ. ಕೋವಿಡ್‌ ಕಡಿಮೆಯಾಗುವವರೆಗೆ ಶಾಲೆ ಬಂದ್‌ ಮಾಡಿದ್ದು ಸರಿಯಾದ ಕ್ರಮ ಎನಿಸುತ್ತದೆ.

- ಎಂ. ಶಿವರಾಜ್‌, ಇನ್‌ಫೋಸಿಸ್‌ ಉದ್ಯೋಗಿ

ನನ್ನಂತಹ ಅನೇಕ ಶಿಕ್ಷಕರು ಎರಡನೇ ಅಲೆಯ ವೇಳೆ ಶಿಕ್ಷಕ ವೃತ್ತಿ ಕಳೆದುಕೊಂಡು ಜೀವನಕ್ಕಾಗಿ ಬೇರೆ ಬೇರೆ ಕೆಲಸ ಮಾಡಿದ್ದಾರೆ. ಸರ್ಕಾರದ ಈಗಿನ ನಿರ್ಧಾರದಿಂದ ಮತ್ತೆ ಅಂತಹ ಸಂಕಷ್ಟದ ಭಯ ಕಾಡುತ್ತಿದೆ. ದಯವಿಟ್ಟು ಸರ್ಕಾರ ಹೆಚ್ಚು ಕಾಲ ಶಾಲೆ, ಕಾಲೇಜು ಬಂದ್‌ ಮಾಡಬಾರದು. ಜ.15ರ ಬಳಿಕ ಪುನಾರಂಭಿಸಲಿ.

- ಮುಕೇಶ್‌, ಖಾಸಗಿ ಶಾಲಾ ಶಿಕ್ಷಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ