* 50-100 ಎಕರೆ ಜಾಗದಲ್ಲಿ 1000 ಗೋವುಗಳ ಪೋಷಣೆಗೆ ವ್ಯವಸ್ಥೆ
* ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ
* ಗೋಮಾಳ ಜಮೀನು ಇಲ್ಲದ ಕಡೆ ಅರಣ್ಯ ಜಮೀನು ಬಳಕೆ
ಬೆಂಗಳೂರು(ಜ.06): 2022ರ ಜನವರಿ ಅಂತ್ಯದ ವೇಳೆಗೆ ರಾಜ್ಯದ(Karnataka) ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ(Gaushala) ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಗೋಮಾಳ ಜಮೀನು ಲಭ್ಯವಿಲ್ಲದ ಜಿಲ್ಲೆಗಳಲ್ಲಿ ಅರಣ್ಯ ಜಮೀನು ಪಡೆದುಕೊಳ್ಳು ಕ್ರಮ ವಹಿಸಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್(Prabhu Chauhan) ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರದ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಪಶುಸಂಗೋಪನಾ ಇಲಾಖೆಯ(Department of Animal Husbandry) ಜಿಲ್ಲಾ ಉಪನಿರ್ದೇಶಕರ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರದ ಗೋಶಾಲೆ ನಿರ್ಮಾಣವಾಗಬೇಕು. ಯಾವುದೇ ಗೋವನ್ನು(Cow) ಕಸಾಯಿಖಾನೆಗೆ ತಳ್ಳುವಂತಾಗಬಾರದು. ಆದ್ದರಿಂದ ಜನವರಿ ಅಂತ್ಯದ ವೇಳೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಗೋಶಾಲೆ ನಿರ್ಮಾಣಕ್ಕೆ ಜಮೀನು ಪಡೆಯಬೇಕು.
ಪ್ರತಿ ಜಿಲ್ಲೆಯಲ್ಲೂ 100 ಎಕರೆ ವಿಸ್ತೀರ್ಣದ ಗೋಶಾಲೆ : ಚವ್ಹಾಣ್
ಪ್ರತಿ ಜಿಲ್ಲೆಗೆ ಕನಿಷ್ಠ 50 ರಿಂದ 100 ಎಕರೆ ಜಮೀನನ್ನು ಪಡೆದುಕೊಳ್ಳಬೇಕು. ಪ್ರತಿ ಗೋಶಾಲೆಯಲ್ಲಿ 1 ಸಾವಿರ ಗೋವುಗಳ ಪೋಷಣೆಗೆ ವ್ಯವಸ್ಥೆ ಮಾಡಬೇಕು. ಗೋಶಾಲೆಗಳ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಂದ ಅನುಮತಿ ಪಡೆದು ನರೇಗಾ ಯೋಜನೆಯಲ್ಲಿ ಕಾಮಗಾರಿ ನಡೆಸಬೇಕು. ಈ ಸಂಬಂಧ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವರು ನಿರ್ದೇಶಿಸಿದರು.
ಪ್ರತಿ ಜಿಲ್ಲೆಗೆ 36 ಲಕ್ಷ:
ಗೋಶಾಲೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ 50 ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಈ ಮೊತ್ತದಲ್ಲಿ ಈಗಾಗಲೇ 36 ಲಕ್ಷ ಬಿಡುಗಡೆ ಮಾಡಿದ್ದು, ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ತಕ್ಷಣ ಅವರ ವಿರುದ್ಧ ಕ್ರಮ ಕೈಗೊಂಡು ವರ್ಗಾವಣೆ ಮಾಡುವಂತೆ ಶಿಫಾರಸು ಮಾಡಲಾಗುವುದು ಎಂದರು.
ಅಧಿಕಾರಿಗಳಿಗೆ ತರಾಟೆ:
ಜಿಲ್ಲಾಹಂತದ ಎಲ್ಲ ಅಧಿಕಾರಿಗಳು ಜಿಲ್ಲಾ ಕೇಂದ್ರ ಕಚೇರಿಯಲ್ಲಿರಬೇಕು. ಸಾರ್ವಜನಿಕರು, ರೈತರು(Farmers) ಮಾಡುವ ಕರೆಗಳಿಗೆ ತಕ್ಷಣ ಸ್ಪಂದಿಸಬೇಕು. ರೈತರಿಂದ ಸಚಿವರಿಗೆ ದೂರು ಬರದಂತೆ ನೋಡಿಕೊಳ್ಳಬೇಕು. ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಇಲಾಖೆ ಬಲವರ್ಧನೆಗೆ ಶ್ರಮಿಸಬೇಕು. ಸಭೆಗಳನ್ನು ನಡೆಸಿರುವ ಸಂಬಂಧದ ದಾಖಲೆಗಳು ಮತ್ತು ವಿಡಿಯೋ ತುಣುಕನ್ನು ವಾಸಪ್ ಸಂದೇಶ ರವಾನಿಸಬೇಕು. ಇಲ್ಲವಾದಲ್ಲಿ ಜಾಗ ಖಾಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
Prabhu Chauhan: ಉತ್ತರ ರಾಜ್ಯಗಳ ಪ್ರವಾಸದಲ್ಲಿ ಸಚಿವರು, ವಾರಣಾಸಿಯ ಕಾನ್ಹಾ ಉಪವನ ಗೋಶಾಲೆಗೆ ಭೇಟಿ
ಉತ್ತರ ಪ್ರದೇಶದಲ್ಲಿ(Uttar Pradesh) 17 ಸಾವಿರ ಜಾನುವಾರುಗಳಿಗೆ(Livestock) ಒಬ್ಬ ಪಶುವೈದ್ಯ ಇದ್ದಾರೆ. ಕರ್ನಾಟಕದಲ್ಲಿ 4 ಸಾವಿರ ಜಾನುವಾರುಗಳಿಗೆ ಒಬ್ಬ ಪಶು ವೈದ್ಯರಿದ್ದು, ಒತ್ತಡ ಕಡಿಮೆಯಿದೆ. ಕಾಲುಬಾಯಿ ರೋಗ ಪುನಃ ಮರುಕಳಿಸದಂತೆ ಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.
ರೈತರ ಜಾನುವಾರುಗಳ ಕಲ್ಯಾಣಕ್ಕಾಗಿ ಅನುಷ್ಠಾನಗೊಂಡಿರುವ ಪಶು ಸಂಜೀವಿನಿ ತುರ್ತು ಚಿಕಿತ್ಸಾ ವಾಹನಗಳ ಬಳಕೆ ಹೆಚ್ಚಳ ಮಾಡಿ ಪಶು ಕಲ್ಯಾಣ ಸಹಾಯವಾಣಿಗೆ ಬರುವ ಕರೆಗಳನ್ನ ಆಧರಿಸಿ ರೈತರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಬೇಕು ಎಂದು ಸೂಚನೆ ನೀಡಿದರು. ಇದೇ ವೇಳೆ, ಗೋಹತ್ಯೆ ನೀಷೆಧ ಜಾರಿ ಬಳಿಕ 400 ಪ್ರಕರಣಗಳು ದಾಖಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಗೋವುಗಳ ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮಾ, ಆಯುಕ್ತ ಎಚ್.ಬಸವರಾಜೇಂದ್ರ, ನಿರ್ದೇಶಕ ಡಾ.ಮಂಜುನಾಥ್ ಎಸ್. ಪಾಳೇಗಾರ್ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು ಹಾಜರಿದ್ದರು.
ನಗರ ಜಿಲ್ಲೆಯ ಅಧಿಕಾರಿಗಳ ಸಭೆ
ಬೆಂಗಳೂರು(Bengaluru) ನಗರ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ರಸ್ತೆಗಳಲ್ಲಿ ಬಿಡಾಡಿ ದನಗಳ ಸಮಸ್ಯೆ ಹಾಗೂ ಪೆಟ್ ಶಾಪ್‌ಗಳು ನೋಂದಣಿ ಮಾಡಿಕೊಳ್ಳುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು. ನಗರ ಪ್ರದೇಶಗಳಲ್ಲಿ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.