
ಕಾರವಾರ, ಉತ್ತರಕನ್ನಡ (ಡಿ.30): ಅಕ್ಷರ ಕಲಿಸಬೇಕಾದ ಗುರುಗಳೇ ಮಕ್ಕಳ ಕೈಗೆ ಬಕೆಟ್ ಮತ್ತು ಬ್ರಷ್ ನೀಡಿ ತಮ್ಮ ಕಾರು ತೊಳೆಯಲು ಹಚ್ಚಿರುವ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಶಿಕ್ಷಕನ ಈ ವರ್ತನೆಗೆ ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಳಿಯಾಳ ತಾಲೂಕಿನ ಬಿಕೆ ಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯಲ್ಲಿ, ಶಾಲೆಯ ಶಿಕ್ಷಕ ಉದಯ್ ಎಂಬಾತ ವಿದ್ಯಾರ್ಥಿಗಳನ್ನು ತನ್ನ ಕಾರು ತೊಳೆಯಲು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಪಾಠ ಮಾಡಬೇಕಾದ ಸಮಯದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದು ತಮ್ಮ ವೈಯಕ್ತಿಕ ಕಾರನ್ನು ತೊಳೆಯುವಂತೆ ಸೂಚನೆ ನೀಡುವ ಮೂಲಕ ಶಿಕ್ಷಣ ವ್ಯವಸ್ಥೆ, ಶಿಕ್ಷಕ ವೃತ್ತಿಗೆ ಕಳಂಕ ತಂದಿದ್ದಾರೆ.
ಮಕ್ಕಳು ಬಿಸಿಲಿನಲ್ಲಿ ನಿಂತು ಕಾರನ್ನು ಉಜ್ಜಿ ಉಜ್ಜಿ ಸ್ವಚ್ಛ ಮಾಡುತ್ತಿರುವುದು ಶಾಲಾ ಅವಧಿಯಲ್ಲೇ ನಡೆದಿದೆ. ವಿದ್ಯಾರ್ಥಿಗಳು ಬಕೆಟ್ ಹಿಡಿದು ಕಾರಿಗೆ ನೀರು ಹಾಕಿ ತೊರೆಯುತ್ತಿರುವುದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಇದನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಶಿಕ್ಷಕ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಇದು ಇವತ್ತಿನ ಕಥೆಯಲ್ಲ; ಶಿಕ್ಷಕನ ಹಳೇ ಚಾಳಿ!
ಗ್ರಾಮಸ್ಥರ ಆರೋಪದ ಪ್ರಕಾರ, ಶಿಕ್ಷಕ ಉದಯ್ ಅವರಿಗೆ ಇದು ಮೊದಲ ಬಾರಿಯಲ್ಲ. ಈ ಹಿಂದಿನಿಂದಲೂ ಅವರು ಶಾಲಾ ಮಕ್ಕಳನ್ನು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು. ಪದೇ ಪದೇ ಮಕ್ಕಳ ಕೈಯಿಂದಲೇ ತಮ್ಮ ಕಾರನ್ನು ತೊಳೆಯಿಸುತ್ತಾ ಬಂದಿದ್ದರು ಎಂಬ ಗಂಭೀರ ಆರೋಪಗಳು ಈಗ ಕೇಳಿಬರುತ್ತಿವೆ.
ವರದಿ ಕೇಳಿದ ಬಿಇಒ
ಘಟನೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಹಳಿಯಾಳ ಬಿಇಒ ಪ್ರಮೋದ ಮಹಾಲೆ ಅವರು ಎಚ್ಚೆತ್ತುಕೊಂಡಿದ್ದಾರೆ. ಶಾಲಾ ಮಕ್ಕಳನ್ನು ಇಂತಹ ಕೆಲಸಕ್ಕೆ ಹಚ್ಚುವುದು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಬಿಇಒ ಸೂಚನೆ ನೀಡಿದ್ದಾರೆ.
ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಪೋಷಕರ ಆಗ್ರಹ
ಮಕ್ಕಳನ್ನು ಶಾಲೆಗೆ ಕಳುಹಿಸುವುದು ವಿದ್ಯೆ ಕಲಿಯಲಿಕ್ಕೇ ಹೊರತು ಶಿಕ್ಷಕರ ಕಾರು ತೊಳೆಯಲಿಕ್ಕಲ್ಲ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳ ಹಕ್ಕುಗಳನ್ನು ಕಸಿದುಕೊಂಡು, ಅವರನ್ನು ಕಾರ್ಮಿಕರಂತೆ ಬಳಸಿಕೊಂಡ ಶಿಕ್ಷಕ ಉದಯ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ