
ಬೆಳಗಾವಿ (ಡಿ.30): ರಾಜ್ಯ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ಬೆಳಗಾವಿಯ ಅತಿವೃಷ್ಟಿ ಸಂತ್ರಸ್ತರು ಇದೀಗ ಬೀದಿಗಿಳಿದಿದ್ದಾರೆ. ಬೆಂಗಳೂರಿನ ಕೋಗಿಲು ಕ್ರಾಸ್‌ನಲ್ಲಿ ಮನೆ ಕಳೆದುಕೊಂಡವರಿಗೆ ಬಯ್ಯಪ್ಪನಹಳ್ಳಿಯಲ್ಲಿ ಫ್ಲ್ಯಾಟ್ ನೀಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ, ಬೆಳಗಾವಿಯ ಸಂತ್ರಸ್ತರ ಕಣ್ಣೀರು ಕಾಣಿಸುತ್ತಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.
ಬೆಂಗಳೂರಿನಲ್ಲಿ ಮನೆ ಕಳೆದುಕೊಂಡ ಕೇರಳ ಮೂಲದ ವಲಸಿಗರಿಗೆ ಸಿದ್ದರಾಮಯ್ಯ ಸರ್ಕಾರವು ಅತ್ಯಂತ ವೇಗವಾಗಿ ಬಯ್ಯಪ್ಪನಹಳ್ಳಿಯಲ್ಲಿ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಆದರೆ, ಇದೇ ಪ್ರೀತಿ ಮತ್ತು ಕಾಳಜಿ ಬೆಳಗಾವಿಯ ಪ್ರವಾಹ ಪೀಡಿತರ ಮೇಲೆ ಏಕಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಂತ ನಾಡಿನವರನ್ನು ಮರೆತು ವಲಸಿಗರಿಗೆ ಮಣೆ ಹಾಕುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 381 ಮನೆಗಳು ಸಂಪೂರ್ಣ ಅಥವಾ ಭಾಗಶಃ ಹಾನಿಗೊಳಗಾಗಿವೆ. ಆದರೆ, ಸರ್ಕಾರವು ಎನ್‌ಡಿಆರ್‌ಎಫ್ (NDRF) ನಿಯಮದಡಿ ಕೇವಲ 1.20 ಲಕ್ಷ ರೂಪಾಯಿ ಪರಿಹಾರ ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಈ ಅಲ್ಪ ಮೊತ್ತದಲ್ಲಿ ಹೊಸ ಮನೆ ಕಟ್ಟುವುದು ಹಾಗಿರಲಿ, ಹಳೆಯ ಮನೆಯ ದುರಸ್ತಿ ಕೂಡ ಸಾಧ್ಯವಿಲ್ಲದಂತಾಗಿದೆ.
ಮನೆ ಕೊಡುವುದಾಗಿ ಘೋಷಿಸಿ ಸೈಲೆಂಟ್ ಆದ ಸಿದ್ದರಾಮಯ್ಯ ಸರ್ಕಾರ
ಪ್ರವಾಹದ ಸಮಯದಲ್ಲಿ ಸಂತ್ರಸ್ತರಿಗೆ ಹೊಸ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಸರ್ಕಾರ, ಈಗ ಸಂಪೂರ್ಣ ಮೌನಕ್ಕೆ ಶರಣಾಗಿದೆ. ಭರವಸೆಗಳು ಕೇವಲ ಘೋಷಣೆಗಳಾಗಿ ಉಳಿದಿವೆಯೇ ಹೊರತು, ನೆಲಮಟ್ಟದಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರದ ಈ 'ಸೈಲೆಂಟ್' ಧೋರಣೆ ಸಂತ್ರಸ್ತರ ಬದುಕನ್ನು ಮೂರಾಬಟ್ಟೆ ಮಾಡಿದೆ.
ಕಲ್ಯಾಣ ನಗರದಲ್ಲಿ ಸಂತ್ರಸ್ತರ ಕಣ್ಣೀರು; ಅಧಿಕಾರಿಗಳ ನಿರ್ಲಕ್ಷ್ಯ
ಬೆಳಗಾವಿಯ ಕಲ್ಯಾಣ ನಗರದ ಸಂತ್ರಸ್ತರ ಸ್ಥಿತಿ ಅತಂತ್ರವಾಗಿದೆ. ಮನೆ ಪರಿಹಾರಕ್ಕಾಗಿ ಇಲ್ಲಿನ ನಿವಾಸಿಗಳು ದಿನನಿತ್ಯ ಅಧಿಕಾರಿಗಳ ಕಚೇರಿಗೆ ಅಲೆಯುತ್ತಿದ್ದಾರೆ. ಕೇವಲ ಒಂದು ಕಂತಿನ 1.20 ಲಕ್ಷ ರೂಪಾಯಿ ಹಣ ಹಾಕಿ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಉಳಿದ ಹಣ ಮತ್ತು ಮನೆ ನಿರ್ಮಾಣದ ಬಗ್ಗೆ ಕೇಳಿದರೆ ಯಾವುದೇ ಸ್ಪಷ್ಟ ಉತ್ತರ ನೀಡುತ್ತಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಮನೆ ಇಲ್ಲದೇ ಪರದಾಡುತ್ತಿರುವ ರೇಣುಕಾ ಮತ್ತು ಈರವ್ವ
ಸಂತ್ರಸ್ತರಾದ ರೇಣುಕಾ ಮಳ್ಳಿ ಮತ್ತು ಈರವ್ವ ಮಳ್ಳಿ ಎಂಬುವವರ ಬದುಕು ಈಗ ಬೀದಿಗೆ ಬಂದಿದೆ. ರೇಣುಕಾ ಅವರು ಅನಿವಾರ್ಯವಾಗಿ ಸ್ಥಳೀಯ ಮಠವೊಂದರಲ್ಲಿ ಆಶ್ರಯ ಪಡೆದಿದ್ದರೆ, ಈರವ್ವ ಅವರು ಬಾಡಿಗೆ ಹಣ ಕಟ್ಟಲಾಗದೆ ಪರದಾಡುತ್ತಿದ್ದಾರೆ. ದಿನಗೂಳಿ ಮಾಡಿ ಜೀವನ ಸಾಗಿಸುವ ಈ ಕುಟುಂಬಗಳಿಗೆ ನೆಲೆ ಇಲ್ಲದಂತಾಗಿರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ