ರೆಡ್ಡಿ, ರಾಮುಲು ವಿರುದ್ಧ ಐಟಿಯಿಂದಲೇ ದೂರು!

By Web DeskFirst Published Nov 17, 2019, 8:42 AM IST
Highlights

ರೆಡ್ಡಿ, ರಾಮುಲು ವಿರುದ್ಧ ಐಟಿಯಿಂದಲೇ ದೂರು| ಆರ್ಥಿಕ ಅಪರಾಧ ಕೋರ್ಟಿಗೆ ದೂರು ಸಲ್ಲಿಕೆ| ಉದ್ದೇಶಪೂರ್ವಕ ತೆರಿಗೆ ವಂಚನೆ ಮಾಡಿದ್ದಾರೆಂದು ದೂರು ಸಲ್ಲಿಕೆ| ಲಕ್ಷ್ಮೇ ಅರುಣಾ, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ವಿರುದ್ಧವೂ ದೂರು

ಬೆಂಗಳೂರು[ನ.17]: ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಆರು ಮಂದಿಯ ವಿರುದ್ಧ ಆದಾಯ ತೆರಿಗೆ ಇಲಾಖೆಯು ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದೆ.

ಐಟಿ ಅಧಿಕಾರಿಗಳ ದೂರನ್ನು ಪರಿಶೀಲನೆ ನಡೆಸಿರುವ ನ್ಯಾಯಾಲಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಡಿ.3ಕ್ಕೆ ಮುಂದೂಡಿಕೆ ಮಾಡಿದೆ. ಜನಾರ್ದನ ರೆಡ್ಡಿ ಮಾಲಿಕತ್ವದ ರಿಯಲ್‌ ಎಸ್ಟೇಟ್‌ ಕಂಪನಿ ಎನಬೆಲ್‌ ಕನ್‌ಸ್ಟ್ರಕ್ಷನ್‌ ಸಂಸ್ಥೆಯು 18.75 ಕೋಟಿ ರು. ಆದಾಯಕ್ಕೆ ತೆರಿಗೆ ಪಾವತಿಸದೆ ಉದ್ದೇಶಪೂರ್ವಕವಾಗಿ ವಂಚನೆ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ, ಆರೋಪ ಸಾಬೀತಾದ್ರೆ ಜೀವಾವಧಿ ಶಿಕ್ಷೆ!

ಜನಾರ್ದನ ರೆಡ್ಡಿಯ ಜತೆಗೆ ಕಂಪನಿಯ ಪಾಲುದಾರರಾದ ರೆಡ್ಡಿ ಪತ್ನಿ ಲಕ್ಷ್ಮೇ ಅರುಣಾ, ಸಚಿವ ಶ್ರೀರಾಮುಲು, ಮಾಜಿ ಸಚಿವರಾದ ಕರುಣಾಕರ ರೆಡ್ಡಿ, ಸೋಮಶೇಖರ್‌ ರೆಡ್ಡಿ, ಪರಮೇಶ್ವರ್‌ ರೆಡ್ಡಿ ವಿರುದ್ಧವೂ ದೂರು ದಾಖಲಾಗಿದೆ. ಅಕ್ರಮ ಗಣಿಗಾರಿಕೆ ನಡೆಸಲಾಗಿದೆ ಎಂಬ ಆರೋಪದ ಮೇಲೆ ಓಬುಳಾಪುರಂ ಮೈನಿಂಗ್‌ ಕಂಪನಿ (ಒಎಂಸಿ) ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದು, ಗಣಿಗಾರಿಕೆಯ ಹಣವನ್ನು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಇದೆ. ಎನಬೆಲ್‌ ಕನಸ್ಟ್ರಕ್ಷನ್‌ ಕಂಪನಿ 26.2 ಕೋಟಿ ರು.ಲಾಭ ಪಡೆದಿದ್ದರೂ ಕೇವಲ 4.93 ಕೋಟಿ ರು. ಆದಾಯ ಪ್ರಕಟಿಸಲಾಗಿದೆ. ಉಳಿದ 18.75 ಕೋಟಿ ರು.ಗೆ ಆದಾಯ ತೆರಿಗೆ ಪಾವತಿ ಮಾಡಿಲ್ಲ ಎಂದು ಐಟಿ ಮೂಲಗಳು ತಿಳಿಸಿವೆ.

ಗಾಲಿ ಜನಾರ್ದನ ರೆಡ್ಡಿ ಫೋನೂ ಕದ್ದಾಲಿಕೆ?

ತೆರಿಗೆ ವಂಚನೆ ಮಾಡಿದ ಆದಾಯದಲ್ಲಿ ಜಮೀನು ಖರೀದಿಸಲಾಗಿದೆ. ಮುದ್ದಿತ್‌ ಪ್ರಾಪರ್ಟಿ, ತುಬುಲಾರ್‌ ರಿವಿಟ್ಸ್‌ ಜಂಟಿ ಸಹಭಾಗಿತ್ವದಲ್ಲಿ 21.80 ಕೋಟಿ ರು.ಗೆ ಜಮೀನು ಖರೀದಿ ಮಾಡಲಾಗಿದೆ. ದಾಖಲೆಗಳಲ್ಲಿ 3.5 ಕೋಟಿ ರು. ಜಮೀನು ಖರೀದಿಸುವ ಉಲ್ಲೇಖ ಇದೆ. ನ್ಯಾಯಬದ್ಧವಾಗಿ ಹಣದ ವ್ಯವಹಾರ ನಡೆಸದೆ ತೆರಿಗೆ ವಂಚನೆ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ದೂರು ನೀಡಿದ್ದಾರೆ. ವಿಚಾರಣೆ ವೇಳೆ ಮುಂದಿನ ಆರ್ಥಿಕ ವರ್ಷದಲ್ಲಿ ಎಲ್ಲವನ್ನು ಲೆಕ್ಕಹಾಕಿ ವಂಚಿಸಿದ ತೆರಿಗೆಗೆ ದಂಡ ಪಾವತಿಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಐಟಿ ಇಲಾಖೆಯು ಮಾಹಿತಿ ನೀಡಿದೆ.

click me!