ಗಣಿ ಕೇಸು: ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ| ಆರೋಪ ಸಾಬೀತಾದರೆ ರೆಡ್ಡಿಗೆ ಜೀವಾವಧಿ ಶಿಕ್ಷೆ| ನಂಬಿಕೆ ದ್ರೋಹ ಆರೋಪ ಕೈಬಿಟ್ಟಿದ್ದ ವಿಶೇಷ ಕೋರ್ಟ್‌ನ ಆದೇಶ ಹೈಕೋರ್ಟಲ್ಲಿ ರದ್ದು

ಬೆಂಗಳೂರು[ಅ.19]: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌-409 ಅಡಿ (ನಂಬಿಕೆ ದ್ರೋಹ) ಆರೋಪವನ್ನು ಕೈಬಿಟ್ಟು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಳೆದ ವರ್ಷ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಶುಕ್ರವಾರ ರದ್ದುಪಡಿಸಿದೆ.

ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಈ ಆದೇಶ ಹೊರಡಿಸಿದೆ. ಮೆಸರ್ಸ್‌ ಡ್ರೀಮ್‌ ಲಾಜಿಸ್ಟಿಕ್‌ ಕಂಪನಿ (ಇಂಡಿಯಾ) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು 2009ರ ಜ.1ರಿಂದ 2010ರ ಮೇ 31ರ ಅವಧಿಯಲ್ಲಿ ಬೇಲೆಕೇರಿ ಬಂದರು ಮೂಲಕ 9.16 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಸೆ.13ರಿಂದ ಸಿಬಿಐ ತನಿಖೆ ನಡೆಸಿತ್ತು. 2013ರಲ್ಲಿ ಪ್ರಕರಣ ಸಂಬಂಧ ಜನಾರ್ದನ ರೆಡ್ಡಿ ಹಾಗೂ ಇತರರ ವಿರುದ್ಧ ಚಾಜ್‌ರ್‍ಶೀಟ್‌ ಸಲ್ಲಿಸಿತ್ತು.

ಈ ಮಧ್ಯೆ ತಮ್ಮನ್ನು ಸೆಕ್ಷನ್‌ 409ರ ಆರೋಪಗಳಿಂದ ಮುಕ್ತಗೊಳಿಸಬೇಕೆಂದು ಕೋರಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಪುರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐಪಿಸಿ ಸೆಕ್ಷನ್‌ 409 ಅಡಿಯ ಆರೋಪದಿಂದ ಜನಾರ್ದನ ರೆಡ್ಡಿಯನ್ನು ಮುಕ್ತಗೊಳಿಸಿ 2018ರ ಸೆ.18ರಂದು ಆದೇಶಿಸಿತ್ತು. ಈ ಆದೇಶವನ್ನು ಇದೀಗ ಹೈಕೋರ್ಟ್‌ ರದ್ದುಪಡಿಸಿದೆ.

ಐಪಿಸಿ ಸೆಕ್ಷನ್‌ 409 ಅಡಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಆಧರಿಸಿ ಸಾಕ್ಷಿ ವಿಚಾರಣೆಯನ್ನು ವಿಶೇಷ ನ್ಯಾಯಾಲಯವು ನಡೆಸಿತ್ತು. ಆ ಬಳಿಕ ಜನಾರ್ದನ ರೆಡ್ಡಿಯ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಅವರ ವಿರುದ್ಧದ ನಂಬಿಕೆ ದ್ರೋಹ ಆರೋಪಗಳನ್ನು ಕೈಬಿಟ್ಟಿದೆ. ವಿಚಾರಣಾ ನ್ಯಾಯಾಲಯವು ಒಂದು ಬಾರಿ ದೋಷಾರೋಪ ಹೊರಿಸಿ, ಸಾಕ್ಷಿ ವಿಚಾರಣೆ ನಡೆಸಿದ ಮೇಲೆ ನಂತರ ಆರೋಪಗಳನ್ನು ಕೈಬಿಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ವಿಶೇಷ ನ್ಯಾಯಾಲಯದ ಆದೇಶ ಕಾನೂನುಬಾಹಿರ ಹಾಗೂ ದೋಷಪೂರಿತವಾಗಿದೆ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ.

ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ವಾದ ಮಂಡಿಸಿ, ಐಪಿಸಿ ಸೆಕ್ಷನ್‌ 409 ಅಡಿಯಲ್ಲಿ ಆರೋಪ ಸಾಬೀತಾದರೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಸಿಬಿಐ ಈಗಾಗಲೇ ದೋಷಾರೋಪಪಟ್ಟಿಸಲ್ಲಿಸಿದೆ. ವಿಶೇಷ ನ್ಯಾಯಾಲಯ ವಿಚಾರಣೆ ಆರಂಭಿಸಿ ಸಾಕ್ಷಿಗಳ ಹೇಳಿಕೆಯನ್ನೂ ದಾಖಲಿಸಿಕೊಂಡಿದೆ. ಈ ಹಂತದಲ್ಲಿ ಆರೋಪ ಮಾರ್ಪಾಡು ಮಾಡುವ ನೆಪದಲ್ಲಿ ಸೆಕ್ಷನ್‌ 409 ತೆಗೆದುಹಾಕಲು ಅವಕಾಶವಿಲ್ಲ. ವಿಶೇಷ ನ್ಯಾಯಾಲಯದ ಈ ಆದೇಶ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಗೊಳಿಸಬೇಕೆಂದು ಕೋರಿದರು. ಸಿಬಿಐನ ವಾದ ಪರಿಗಣಿಸಿದ ಹೈಕೋರ್ಟ್‌ ಈ ಆದೇಶ ಮಾಡಿತು.