* ಇಂಟರ್ನೆಟ್ ವೇಗ ಏರಿಸಲು ರಾಜ್ಯಕ್ಕೆ ಬಂತು ಕಾರ್ಯಪಡೆ
* ಜನಾಶೀರ್ವಾದ ಯಾತ್ರೆ ವೇಳೆ ನೀಡಿದ್ದ ಭರವಸೆಯನ್ನು ಒಂದೇ ತಿಂಗಳಲ್ಲಿ ಈಡೇರಿಸಲು ಮುಂದಾದ ರಾಜೀವ್ ಚಂದ್ರಶೇಖರ್
* ಜನಾಶೀರ್ವಾದ ಯಾತ್ರೆಯನ್ನು ಜನಜಾತ್ರೆಗಷ್ಟೆಸೀಮಿತ ಮಾಡದೆ ಅಭಿವೃದ್ಧಿ ಕೆಲಸಕ್ಕೆ ಬಳಸಿಕೊಂಡ ಕೇಂದ್ರ ಸಚಿವರ ನಡೆಗೆ ಪ್ರಶಂಸೆ
ಹುಬ್ಬಳ್ಳಿ(ಸೆ.09): ತಿಂಗಳ ಹಿಂದೆ ಆರು ಜಿಲ್ಲೆಗಳಲ್ಲಿ ನಡೆಸಿದ್ದ ಜನಾಶೀರ್ವಾದ ಯಾತ್ರೆ ವೇಳೆ ರಾಜ್ಯದಲ್ಲಿ ಇಂಟರ್ನೆಟ್ ವೇಗ ಹೆಚ್ಚಳವೂ ಸೇರಿದಂತೆ ವಿವಿಧ ವಿಚಾರವಾಗಿ ಕೇಳಿಬಂದ ಆಗ್ರಹಕ್ಕೆ ಸಂಬಂಧಿಸಿ ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ರಾಜೀವ್ ಚಂದ್ರಶೇಖರ್ ತ್ವರಿತವಾಗಿ ಸ್ಪಂದಿಸಿದ್ದಾರೆ. ದೆಹಲಿಗೆ ತೆರಳಿದ ಬೆನ್ನಲ್ಲೇ ಇಂಟರ್ನೆಟ್ ಸ್ಪೀಡ್ ಹೆಚ್ಚಳವೂ ಸೇರಿದಂತೆ ರಾಜ್ಯದ ಬೇಡಿಕೆಗಳ ಪರಿಶೀಲನೆಗೆ ಕಾರ್ಯಪಡೆ (ಟಾಸ್ಕ್‌ಪೋರ್ಸ್)ವೊಂದನ್ನು ರಚಿಸಿದ್ದು, ಆ ತಂಡವೀಗ ಬುಧವಾರ ಹುಬ್ಬಳ್ಳಿಗೆ ಭೇಟಿ ನೀಡಿ ಉದ್ಯಮಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿದೆ. ಸಾರ್ವಜನಿಕರ ಬೇಡಿಕೆಗೆ ಕೇಂದ್ರ ಒಂದೇ ತಿಂಗಳಲ್ಲಿ ಸ್ಪಂದಿಸಿ ಕಾರ್ಯೋನ್ಮುಖರಾಗಿರುವುದು ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ನುಡಿದಂತೆ ನಡೆದ ರಾಜೀವ್ ಚಂದ್ರಶೇಖರ್, ಕರ್ನಾಟದಲ್ಲಿ ಹಳ್ಳಿಗಳಿಗೆ ನೆಟ್‌ವರ್ಕ್ ಒದಗಿಸಲು ಕಾರ್ಯಪಡೆ
undefined
ತಿಂಗಳ ಹಿಂದೆ ಹುಬ್ಬಳ್ಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಸೇರಿ ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಸಿದ್ದ ಜನಾಶೀರ್ವಾದ ಯಾತ್ರೆ ವೇಳೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಮುಂದೆ ರಾಜ್ಯದಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸುವ ಕುರಿತು ದೊಡ್ಡಮಟ್ಟದಲ್ಲಿ ಆಗ್ರಹ ಕೇಳಿಬಂದಿತ್ತು. ಇದರ ಜತೆಗೆ ಕೌಶಲ್ಯಾಭಿವೃದ್ಧಿ ಕೇಂದ್ರ, ಐಟಿ ಹಬ್‌ಗಳನ್ನು ತೆರೆಯುವ ಬೇಡಿಕೆಯೂ ಬಂದಿತ್ತು. ಈ ಬೇಡಿಕೆಗಳ ಪರಿಶೀಲನೆಗೆ ಟಾಸ್ಕ್‌ಫೋರ್ಸ್‌ವೊಂದನ್ನು ರಚಿಸುವ ಭರವಸೆಯನ್ನು ಆಗ ರಾಜೀವ್ ಚಂದ್ರಶೇಖರ್ ನೀಡಿದ್ದರು.
ಹುಬ್ಬಳ್ಳಿಗೆ ಭೇಟಿ:
ಹುಬ್ಬಳ್ಳಿಯಲ್ಲಿ ಜನಾಶೀರ್ವಾದ ಕೈಗೊಂಡ ವೇಳೆ ಇಲ್ಲಿನ ಉದ್ಯಮಿಗಳು, ಜನತೆ, ಐಟಿ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ ಕುರಿತು ಮನವಿ ಸಲ್ಲಿಸಿದ್ದರು. ಜತೆಗೆ ಇಂಟರ್ನೆಟ್ ವೇಗ ಹೆಚ್ಚಿಸುವಂತೆಯೂ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ರಾಜೀವ್ ಚಂದ್ರಶೇಖರ್ ಅವರು, ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲು ಐಟಿ ಉದ್ಯಮಕ್ಕೆ ಪೂರಕವಾದ ವಾತಾವರಣ ಇಲ್ಲಿದೆ. ಹುಬ್ಬಳ್ಳಿ-ಧಾರವಾಡವನ್ನು ಸ್ಕಿಲ್ಲಿಂಗ್ ಕ್ಯಾಪಿಟಲ್ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು. ಐಟಿ ಉದ್ಯಮಕ್ಕೆ ಉತ್ತೇಜನಕ್ಕೂ ನೆರವು ನೀಡುವುದಾಗಿ ತಿಳಿಸಿದ್ದರು.
ಅದರಂತೆ ಇದೀಗ ತಮ್ಮ ಸಚಿವಾಲಯದ ಹಿರಿಯ ಅಧಿಕಾರಿಗಳ ಟಾಸ್ಕ್‌ಪೋರ್ಸ್‌ವೊಂದನ್ನು ಕಳುಹಿಸಿಕೊಟ್ಟಿದ್ದು ಎಸ್‌ಟಿಪಿಐ ಜಂಟಿ ನಿರ್ದೇಶಕ ಸುಬೋಧ ಹುನಗುಂದ, ಅಭಿಷೇಕ ಮಿಶ್ರಾ ನೇತೃತ್ವದ ತಂಡ ಬುಧವಾರ ಹುಬ್ಬಳ್ಳಿಗೆ ಭೇಟಿ ನೀಡಿದೆ. ಐಟಿ ಉದ್ಯಮಕ್ಕೆ ಯಾವ ರೀತಿ ಉತ್ತೇಜನ ನೀಡಬಹುದು, ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಪೂರಕ ವಾತಾವರಣವಿದೆಯೇ? ಕೇಂದ್ರ ಸ್ಥಾಪಿಸಿದರೆ ಯಾವ ರೀತಿ ಕೌಶಲ್ಯಗಳ ತರಬೇತಿ ನೀಡಿದರೆ ಈ ಭಾಗಕ್ಕೆ ಅನುಕೂಲವಾಗುತ್ತದೆ? ಇಂಟರ್‌ನೆಟ್ ಸ್ಪೀಡ್ ಹೆಚ್ಚಿಸುವುದರಿಂದ ಆಗುವ ಅನುಕೂಲಗಳೇನು? ಎಂಬ ಬಗ್ಗೆ ಇಲ್ಲಿನ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಿದೆ.
ಜಿಡಿಪಿ ದಾಖಲೆಯ ಏರಿಕೆ ಹಿಂದೆ ಮೋದಿ ಸರ್ಕಾರದ ನೀತಿ, ರೈತರ ದುಡಿಮೆ: ಸಚಿವ ರಾಜೀವ್ ಚಂದ್ರಶೇಖರ್
ಉದ್ಯಮಿಗಳೊಂದಿಗೆ ಸಭೆ:
ಬಳಿಕ ಅಲ್ಲಿಂದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಆಗಮಿಸಿದ ತಂಡ ಸಂಸ್ಥೆಯ ಪದಾಧಿಕಾರಿಗಳು, ಉದ್ಯಮಿಗಳೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದೆ. ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳು ಸಾಕಷ್ಟಿವೆ. ಆದರೆ ಕೇಂದ್ರ ಸರ್ಕಾರ ಸ್ಥಾಪಿಸುವ ಕೇಂದ್ರದಲ್ಲಿ ಸರ್ವ ರಂಗಕ್ಕೂ ಅನುಕೂಲವಾಗುವ ಕೌಶಲ್ಯಗಳ ತರಬೇತಿ ನೀಡುವಂತಾಗಬೇಕು. ಅತ್ಯಂತ ಸ್ಕಿಲ್ಡ್ ಕಾರ್ಮಿಕರನ್ನು ತಯಾರಿಸುವ ನಿಟ್ಟಿನಲ್ಲಿ ಇಲ್ಲಿನ ತರಬೇತಿ ಕೇಂದ್ರವಾದರೆ ಉತ್ತಮ ಎಂಬ ಸಲಹೆಯನ್ನು ಸಂಸ್ಥೆಯ ಸದಸ್ಯರು ನೀಡಿದ್ದಾರೆ.
ಸಚಿವರು ಜನಾಶೀರ್ವಾದ ಯಾತ್ರೆ ನಡೆಸಿರುವ ಉಳಿದ ಐದು ಜಿಲ್ಲೆಗಳಿಗೂ ಈ ತಂಡ ಭೇಟಿ ನೀಡಲಿದೆ. ಬಳಿಕ ವರದಿ ತಯಾರಿಸಿ ಸಚಿವರಿಗೆ ಸಲ್ಲಿಸಲಿದೆ.
ಇಷ್ಟುಬೇಗ ಸ್ಪಂದನೆ ಸಿಗುತ್ತೆಂಬ ನಿರೀಕ್ಷೆ ಇರಲಿಲ್ಲ: ಉದ್ಯಮಿಗಳು
ನಾವೆಲ್ಲರೂ ಸಲ್ಲಿಸಿದ ಮನವಿಗೆ ಕೇಂದ್ರ ಸಚಿವರು ಒಂದೇ ತಿಂಗಳಲ್ಲಿ ಸ್ಪಂದಿಸಿ ಕಾರ್ಯೋನ್ಮುಖರಾಗಿರುವುದು ಸಂತಸಕರ ಎಂದು ಹರ್ಷ ವ್ಯಕ್ತಪಡಿಸಿರುವ ಉದ್ಯಮಿಗಳು, ಇಷ್ಟುಬೇಗನೆ ಸಚಿವರು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಇದು ಆರೋಗ್ಯಕರ ಬೆಳವಣಿಗೆ ಎಂದು ತಿಳಿಸಿದ್ದಾರೆ.