ಜಾತಿ ಗಣತಿಯಲ್ಲೇನಿದೆ ಅಂತ ಗೊತ್ತಿಲ್ಲ: ಸಿದ್ದರಾಮಯ್ಯ

By Kannadaprabha NewsFirst Published Sep 9, 2021, 7:51 AM IST
Highlights

*   ಎಚ್ಡಿಡಿ-ಖರ್ಗೆ ಮೈತ್ರಿ ಮಾತುಕತೆ ಗೊತ್ತಿಲ್ಲ
*   ಜಾತಿ ಜನಗಣತಿ ವರದಿ ಸೋರಿಕೆ ಆಗಿಲ್ಲ
*   ಎಚ್‌ಡಿಕೆ ಮುಖ್ಯಮಂತ್ರಿಯಾಗಿದ್ದಾಗ ವರದಿ ಸ್ವೀಕಾರ ಮಾಡಲು ಒಪ್ಪಿಗೆ ಸೂಚಿಸಲಿಲ್ಲ

ಬೆಂಗಳೂರು(ಸೆ.09): ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯ ವರದಿಯಲ್ಲಿ ಏನಿದೆ ಎನ್ನುವುದೇ ನನಗೆ ಗೊತ್ತಿಲ್ಲ. ನನ್ನ ಆಡಳಿತಾವಧಿಯಲ್ಲಿ ವರದಿ ಸಿದ್ಧವಾಗಿರಲಿಲ್ಲ. ಸಿದ್ಧವಾಗಿದ್ದರೆ ಸ್ವೀಕಾರ ಮಾಡುತ್ತಿದ್ದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವರದಿ ಸ್ವೀಕಾರ ಮಾಡಲು ಒಪ್ಪಿಗೆ ಸೂಚಿಸಲಿಲ್ಲ ಎಂದೂ ಅವರು ಹೇಳಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಏನಿದೆ ಎಂದು ತಿಳಿದುಕೊಳ್ಳುವುದಕ್ಕಾಗಿ ಸಮೀಕ್ಷೆ ಮಾಡಲಾಗಿದೆ. ಸಾಮಾಜಿಕ ನ್ಯಾಯ ಸಿಗಬೇಕಾದರೆ ದಾಖಲಾತಿಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಅಪ್ಘನ್‌ನಲ್ಲಿ ವಿಧ್ವಂಸಕರ ಸರ್ಕಾರ,  ಬಗೆಹರಿಯದ ಜಾತಿ ಗಣತಿ ಲೆಕ್ಕಾಚಾರ!

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನನಗೆ ಗೊತ್ತಿರುವ ಪ್ರಕಾರ ಜಾತಿ ಜನಗಣತಿ ವರದಿ ಸೋರಿಕೆ ಆಗಿಲ್ಲ. ಬಡವರಿಗೆ ಸಾಮಾಜಿಕ ನ್ಯಾಯ ನೀಡುವ ಉದ್ದೇಶದಿಂದ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಯಾವ ಜಾತಿ, ಯಾವ ವರ್ಗದ ವಿರುದ್ಧವೂ ನಾವಿಲ್ಲ. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಸಮೀಕ್ಷೆ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರವಿದ್ದಾಗ ಕುಮಾರ ಸ್ವಾಮಿ ವರದಿ ಸ್ವೀಕಾರ ಮಾಡಲು ಒಪ್ಪಿಲಿಲ್ಲ. ಆದ್ದರಿಂದ ಈಗಲೂ ವರದಿ ಹಾಗೆಯೇ ಇದೆ ಎಂದು ವಿವರಿಸಿದರು.

ಎಚ್ಡಿಡಿ-ಖರ್ಗೆ ಮೈತ್ರಿ ಮಾತುಕತೆ ಗೊತ್ತಿಲ್ಲ

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ಇಬ್ಬರೂ ಮುಖಂಡರು ಮಾತನಾಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಏನು ಮಾಡಬೇಕು ಎಂದು ಪಕ್ಷದ ವೇದಿಕೆಯಲ್ಲಿ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
 

click me!