ಅರ್ಹತೆ ಇಲ್ಲದೆ ಶಸ್ತ್ರ ಚಿಕಿತ್ಸೆ ವಂಚನೆಗೆ ಸಮ : ಹೈಕೋರ್ಟ್‌

Kannadaprabha News   | Kannada Prabha
Published : Mar 16, 2026, 08:28 AM IST
Karnataka High Court

ಸಾರಾಂಶ

ವೈದ್ಯಕೀಯ ಅರ್ಹತೆಯಿಲ್ಲದೆಯೇ ಪಿಸ್ತುಲ್ಲಾಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಅರ್ಹತೆಯಿಲ್ಲದೆ ಪಿಸ್ತುಲಾ ಶಸ್ತ್ರ ಚಿಕಿತ್ಸೆ ನಡೆಸುವುದು ವಂಚನೆಯಲ್ಲದೆ ಮತ್ತೇನು ಎಂದು ಖಾರವಾಗಿ ಪ್ರಶ್ನಿಸಿದೆ.

ಬೆಂಗಳೂರು : ವೈದ್ಯಕೀಯ ಅರ್ಹತೆಯಿಲ್ಲದೆಯೇ ಪಿಸ್ತುಲ್ಲಾಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಅರ್ಹತೆಯಿಲ್ಲದೆ ಪಿಸ್ತುಲ್ಲಾ ಶಸ್ತ್ರ ಚಿಕಿತ್ಸೆ ನಡೆಸುವುದು ವಂಚನೆಯಲ್ಲದೆ ಮತ್ತೇನು ಎಂದು ಖಾರವಾಗಿ ಪ್ರಶ್ನಿಸಿದೆ.

ಕಾನೂನುಬಾಹಿರವಾಗಿ ಕ್ಲಿನಿಕ್‌ ನಡೆಸುತ್ತಿರುವುದು ಮತ್ತು ಜನರಿಗೆ ವಂಚಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ಚಿತ್ರದುರ್ಗದ ಹಿರಿಯೂರಿನ ಟೌನ್‌ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದು ಕೋರಿ ಹಿರಿಯೂರು ತಾಲೂಕಿನ ಜಯನಗರದ ನಯನಾ ಕ್ಲಿನಿಕ್‌ನ ಡಾ.ಎಂ.ಕೆ.ಮಂಡಲ್‌ (ಮಿಲನ್‌ ಮಂಡಲ್‌) ಎಂಬಾತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿದೆ.

ಇದಕ್ಕೂ ಮುನ್ನ ಅರ್ಜಿ ವಿಚಾರಣೆಗೆ ಆರಂಭವಾದಾಗ ನ್ಯಾಯಮೂರ್ತಿ ಪ್ರತಿಕ್ರಿಯಿಸಿ, ಅರ್ಜಿದಾರರು ‘ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘ’ದಿಂದ ಸರ್ಟಿಫಿಕೇಟ್‌ ಪಡೆಯಲಾಗಿದೆ. ಅರ್ಜಿದಾರರಿಗೆ ಡಾಕ್ಟರೇಟ್‌ ನೀಡಿದ್ದು ಯಾರು, ಯಾರು ಯಾರನ್ನು ವೈದ್ಯರು ಎಂದು ಕರೆದುಕೊಳ್ಳಬಹುದು’ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು, ಕರ್ನಾಟಕ ಪ್ರೈವೇಟ್‌ ಮೆಡಿಕಲ್‌ ಎಸ್ಟಾಬ್ಲಿಷ್ಮೆಂಟ್‌ ಆಕ್ಟ್‌ನ (ಕೆಪಿಎಂ ಕಾಯ್ದೆ) ಸೆಕ್ಷನ್‌ 4ರ ಅಡಿ ಅರ್ಜಿದಾರರಿಗೆ ಸರ್ಟಿಫಿಕೇಟ್‌ ನೀಡಲಾಗಿದೆ. ಅಲೋಪಥಿಗಿಂತ ಇಲ್ಲಿನ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠವು ಪಾರಂಪರಿಕ, ನಾಟಿ, ಆರ್‌ಎಂಪಿ, ಪಿಎಂಪಿ ಅಂತ ಹೇಳಿದ್ದೀರಿ. ಆರ್‌ಎಂಪಿ ಎಂದರೆ ರಿಜಿಸ್ಟರ್ಡ್‌ ಮೆಡಿಕಲ್‌ ಪ್ರಾಕ್ಟೀಷನರ್‌ ಎಂದು ಹೇಳಿದ್ದೀರಿ. ಪಿಎಂಪಿ ಎಂದರೇನು, ಪೈಲ್ಸ್‌ ಮೆಡಿಕಲ್‌ ಪ್ರಾಕ್ಟಿಷನರೇ? ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು.

ಅಲ್ಲದೆ, ಅರ್ಜಿದಾರರು ಡಾಕ್ಟರ್‌ ಪಿಸ್ತುಲ್ಲಾ ಅರ್ಹತೆ ಇಲ್ಲದೇ ಪಿಸ್ತುಲ್ಲಾ ಶಸ್ತ್ರಚಿಕಿತ್ಸೆ ಮಾಡಿದ್ದೀರಿ. ಇದು ವಂಚನೆಯಲ್ಲದೇ ಇನ್ನೇನು? ಕ್ಲಿನಿಕ್‌ನಲ್ಲಿ ಕುಲ್ತಾಬ್‌ ಟ್ಯಾಬ್ಲೆಟ್‌, ಸರ್ಜಿಕಲ್‌ ಸ್ಪಿರಿಟ್‌, ಸೀಸರ್ಸ್‌ ಸಿಕ್ಕಿದೆ. ಶಸ್ತ್ರಚಿಕಿತ್ಸೆಯನ್ನೇ ಮಾಡುವುದಿಲ್ಲ ಎನ್ನುವುದಾದರೆ ಇದೆಲ್ಲಾ ಏತಕ್ಕೆ ಕ್ಲಿನಿಕ್‌ನಲ್ಲಿ ಸಿಕ್ಕಿದೆ ಎಂದು ಹೇಳಿತು.

ನಂತರ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಪೀಠ, ಪಿಸ್ತುಲ್ಲಾ ಸರ್ಜರಿ ಮಾಡೋಣ ಎಂದು ಮೌಖಿಕವಾಗಿ ಲಘುದಾಟಿಯಲ್ಲಿ ಹೇಳಿತು.

ಪ್ರಕರಣವೇನು?:

ಹಿರಿಯೂರು ಟೌನ್‌ ನಿವಾಸಿ ವಿರೇಶ್‌ ಎಂಬುವವರು ಹಿರಿಯೂರು ಸರ್ಕಾರಿ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಜಿ.ವೆಂಕಟೇಶ್‌ ಅವರಿಗೆ ದೂರು ನೀಡಿದ್ದರು. ವೈದ್ಯ ಡಾ.ಮಿಲನ್‌ ಮಡಲ್‌ ಅವರು ಹುಳಿಯಾರು ರಸ್ತೆಯ ಎಸ್‌ಬಿಐ ಬ್ಯಾಂಕ್‌ ಪಕ್ಕದಲ್ಲಿರುವ ನಯನಾ ಕ್ಲಿನಿಕ್‌ ನಡೆಸುತ್ತಿದ್ದಾರೆ. ಅವರು ಯಾವುದೇ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆಯದೆ ಕೆಪಿಎಂಇ ಪ್ರಾಧಿಕಾರದಿಂದ ನೋಂದಣಿಯಾಗದೆ, ವೈದ್ಯಕೀಯ ನಿಪುಣತೆಯಿಲ್ಲದೆ ಹಾಗೂ ಆರೋಗ್ಯ ಇಲಾಖೆಯಿಂದ ಪರವಾನಗಿ ಪಡೆಯದೆ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ನಮ್ಮ ತಂದೆಯಾದ ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯ ಪಾಂಡುರಂಗಪ್ಪ ಶನಿದೇವರಹಟ್ಟಿ ಅವರಿಗೆ ಡಾ.ಮಂಡಲ್‌ 2021ರ ಜ.21ರಂದು ಪಿಸ್ತೂಲ್ಲಾ ಕಾಯಿಲೆಗೆ ಆಪರೇಷನ್‌ ಮಾಡಿದ್ದಾರೆ. ಆದರೆ, ರೋಗಿಗೆ ಆಂತರಿಕ ಸ್ಪಿಂಕ್ಚರ್‌ಗೆ ಹಾಳಾಗಿದೆ ಎಂದು ದೂರಿನಲ್ಲಿ ವಿರೇಶ್‌ ಆರೋಪಿಸಿದ್ದರು.

2025ರ ನ.25ರಂದು ಹಿರಿಯೂರು ಟೌನ್‌ ಠಾಣೆಗೆ ದೂರು

ಈ ದೂರು ಆಧರಿಸಿ ಜಿ.ವೆಂಕಟೇಶ್‌ ಅವರು 2025ರ ನ.25ರಂದು ಹಿರಿಯೂರು ಟೌನ್‌ ಠಾಣೆಗೆ ದೂರು ನೀಡಿದ್ದರು. ಇದರಿಂದ ಪೊಲೀಸರು, ಮಿಲನ್‌ ಮಂಡಲ್‌ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಸೆಕ್ಷನ್‌ 19, ಬಿಎನ್‌ಎಸ್‌ ಸೆಕ್ಷನ್‌ಗಳಾದ -318(2), 319(2)ರ ಅಡಿ ಕಾನೂನುಬಾಹಿರವಾಗಿ ಕ್ಲಿನಿಕ್‌ ನಡೆಸುತ್ತಿರುವುದು ಮತ್ತು ಸಕ್ಷಮ ಪ್ರಾಧಿಕಾರದಿಂದ ಸರ್ಟಿಫಿಕೇಟ್‌ ಹಾಗೂ ಅನುಮತಿ ಪಡೆಯದೆ ವೈದ್ಯಕೀಯ ಚಿಕಿತ್ಸೆ ನೀಡಿ ಸಾರ್ವಜನಿಕರಿಗೆ ವಂಚಿಸಿದ ಆರೋಪ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು. ಈ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಮಿಲನ್‌ ಮಂಡಲ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: ಅರ್ಹತೆ ಇಲ್ಲದೆ ಶಸ್ತ್ರ ಚಿಕಿತ್ಸೆ ವಂಚನೆಗೆ ಸಮ - ಹೈಕೋರ್ಟ್‌
ಎಲ್‌ಪಿಜಿ ಪೂರೈಕೆ ಸುಧಾರಣೆ : ಸಪ್ಲೈ ಶೇ.20ರಷ್ಟು ಏರಿಕೆ