
ಬೆಂಗಳೂರು (ಜು.18): ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಧ್ವನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಶ್ ತಮ್ಮ ಹೋರಾಟವನ್ನು ಮುಂದುವರಿಸಿದ್ದು, ರಾಜ್ಯಭವನದ ಕದ ತಟ್ಟಿದ್ದಾರೆ.
ಶನಿವಾರ ನೂತನ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ನಂತರ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ದೂರು ನೀಡಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ.
ಸುಮಲತಾ ಆಗಮನ ಸುದ್ದಿ ಸ್ಫೋಟಕಗಳನ್ನು ಅಡಗಿಸಿದ್ದ ಗಣಿ ಮಾಲಿಕರು..?
ಅಪಾಯಕಾರಿ ಸ್ಫೋಟಗಳಿಂದಾಗಿ ಕೆಆರ್‌ಎಸ್ ಜಲಾಶಯದ ಸುರಕ್ಷತೆಯ ಬಗ್ಗೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಹೊರತಾಗಿಯೂ ನಿರಂತರ ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟದ ಘಟನೆಗಳು ಜರುಗುತ್ತಿವೆ. ಮುಂಜಾನೆ ಮತ್ತು ಮುಸ್ಸಂಜೆಯ ವೇಳೆಯಲ್ಲಿ ಈ ಅಶಾಂತಿಯನ್ನುಂಟು ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ಚಟುವಟಿಕೆಯು ಮಾಲಿನ್ಯ, ಜನರು ನೆಲೆಸಿರುವ ಸ್ಥಳದಲ್ಲಿ ಪರಿಸರ ಅಪಾಯಗಳು, ಪುನರಾವರ್ತಿತ ಗರ್ಭಪಾತಗಳು, ಜಾನುವಾರುಗಳ ಆರೋಗ್ಯದ ಮೇಳೆ ವ್ಯತಿರಿಕ್ತ ಪರಿಣಾಮ, ಹಳ್ಳಿಗಳಲ್ಲಿನ ಮನೆಗಳಿಗೆ ಹಾನಿಯನ್ನುಂಟು ಮಾಡಲಾಗುತ್ತಿದೆ. ವಿವಾದಾತ್ಮಕ ಗಣಿಗಾರಿಕೆ ಸ್ಥಳಗಳಿಗೆ ಇತ್ತೀಚೆಗೆ ಭೇಟಿಯ ವೇಳೆಯಲ್ಲಿ ಇವೆಲ್ಲಾ ಸಾಕ್ಷಿಯಾಗಿವೆ. ಗ್ರಾಮಸ್ಥರು ಸಹ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖ ಮಾಡಿದ್ದಾರೆ.
KRS ವಾರ್ನಿಂಗ್ ಬೆಲ್ : ಸುಮಲತಾ ಹೋರಾಟದ ಹಿಂದಿನ ಅಸಲಿಯತ್ತೇನು?
ಗಣಿಗಾರಿಕೆಯಿಂದಾಗಿ ನೀರಿನ ಮಟ್ಟಕ್ಷೀಣಿಸಿದ್ದು, ಕೃಷಿ ಚಟುವಟಿಕೆಗಳು, ಪ್ರಕೃತಿ, ಮನುಷ್ಯರ ಮೇಲೆ ಅಡ್ಡಪರಿಣಾಮಗಳಾಗುತ್ತಿವೆ. ಹೀಗಾಗಿ ಕೆಆರ್‌ಎಸ್ ಜಲಾಶಯದ ರಚನೆಯನ್ನು ರಕ್ಷಿಸಬೇಕು ಮತ್ತು ಅಕ್ರಮ ಗಣಿಗಾರಿಕೆ ಸ್ಫೋಟವನ್ನು ನಿಲ್ಲಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.
ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಂಸದೆ ಸುಮಲತಾ, ನೂತನ ರಾಜ್ಯಪಾಲರಿಗೆ ಧನ್ಯವಾದ ಹೇಳಿದ್ದೇನೆ. ಅಲ್ಲದೇ, ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆಯೂ ಮಾಹಿತಿ ನೀಡಿ, ಸೂಕ್ತ ಕ್ರಮದ ಬಗ್ಗೆ ಮನವಿ ಮಾಡಿದ್ದೇನೆ. ಸ್ಫೋಟದಿಂದಾಗುವ ಸಮಸ್ಯೆಗಳ ಕುರಿತು ಗಮನಕ್ಕೆ ತರಲಾಗಿದೆ. ನನ್ನ ಮನವಿಗೆ ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ 30 ದಿನದಲ್ಲಿ ವರದಿಯನ್ನು ತೆಗೆದುಕೊಂಡು ಉತ್ತರ ನೀಡುವುದಾಗಿ ಅಶ್ವಾಸನೆ ನೀಡಿದ್ದಾರೆ ಎಂದರು.
ಸರ್ಕಾರವು ಈ ಬಗ್ಗೆ ಗಮನಹರಿಸಬೇಕು. ಹಳ್ಳಿಯಲ್ಲಿ ರೈತರಿಗೆ, ಪರಿಸರಕ್ಕೆ ಹಾನಿಯಾಗುತ್ತಿದೆ. ಸ್ಫೋಟದಿಂದ ಯಾವ ರೀತಿಯ ಅಪಾಯವಾಗಲಿದೆ ಎಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಏಳು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ