ಪಟ್ಟಣ ಸೇರಿ ತಾಲೂಕಿನ 89 ಗ್ರಾಮಗಳಿಗೆ ಹಾಗೂ ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪ್ರಸಿದ್ಧ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂದು ಶಿವಮೊಗ್ಗದ ಜಿಲ್ಲಾ ಸರ್ವೇಕ್ಷಣಾ ಇಲಾಖೆ ವರದಿ ನೀಡಿದ ನಂತರ ಸೊಳೆಕೆರೆ ನೀರು ವಿಷಯುಕ್ತವಾದ ಪ್ರಮುಖ ಅಂಶಗಳಲ್ಲಿ ಇವುಗಳು ಒಳಗೊಂಡಿದೆ.
ಬಾ.ರಾ.ಮಹೇಶ್ ಚನ್ನಗಿರಿ
ಚನ್ನಗಿರಿ (ಆ.15) : ಪಟ್ಟಣ ಸೇರಿ ತಾಲೂಕಿನ 89 ಗ್ರಾಮಗಳಿಗೆ ಹಾಗೂ ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪ್ರಸಿದ್ಧ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ ಎಂದು ಶಿವಮೊಗ್ಗದ ಜಿಲ್ಲಾ ಸರ್ವೇಕ್ಷಣಾ ಇಲಾಖೆ ವರದಿ ನೀಡಿದ ನಂತರ ಸೊಳೆಕೆರೆ ನೀರು ವಿಷಯುಕ್ತವಾದ ಪ್ರಮುಖ ಅಂಶಗಳಲ್ಲಿ ಇವುಗಳು ಒಳಗೊಂಡಿದೆ.
ಚರಂಡಿ ನೀರು ಸೇರ್ಪಡೆ:
ಚನ್ನಗಿರಿ ಪಟ್ಟಣ ಸೇರಿದಂತೆ ಕೆರೆಯ ಸುತ್ತಲಿನ ಗ್ರಾಮಗಳಲ್ಲಿ ಜನರು ಬಳಸಿದ ಕಲುಷಿತ ನೀರು ಮತ್ತು ಪಟ್ಟಣದ ಚರಂಡಿ ನೀರು ಇಲ್ಲಿನ ಹರಿದ್ರಾವತಿ ಹಳ್ಳಕ್ಕೆ ಸೇರುತ್ತಿದ್ದು ಅಲ್ಲಿಂದ ನೇರ ಸೂಳೆಕೆರೆಗೆ ಸೇರುವುದರಿಂದ ಸೂಳೆಕೆರೆ ನೀರು ವಿಷಯುಕ್ತವಾಗಲು ಪ್ರಮುಖ ಕಾರಣಗಳಲ್ಲೊಂದು. ಕಳೆದ 3-4 ವರ್ಷದ ಹಿಂದೆ ಪಟ್ಟಣದ ಹಲವು ಬಡಾವಣೆಗಳ ಚರಂಡಿಗಳ ನೀರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದ ಕೆರೆಗೆ ಸೇರುತ್ತಿದ್ದವು. ಕೆರೆ ಆಧುನೀಕರಣಗೊಳಿಸುವ ಸಂದರ್ಭದಲ್ಲಿ ಕೆರೆಗೆ ಸೇರುತ್ತಿದ್ದ ಕೊಳಚೆ ನೀರನ್ನು ಪೈಪ್‌ಗಳ ಮುಖಾಂತರ ಹರಿದ್ರಾವತಿ ಹಳ್ಳ ಸೇರುವಂತೆ ಮಾಡಲಾಗಿತ್ತು. ಕೆರೆಯ ಸುತ್ತಮುತ್ತಲಿನ ಸುಮಾರು 30ರಿಂದ 35ಗ್ರಾಮಗಳ ಚರಂಡಿ ನೀರುಗಳು ಸೂಳೆಕೆರೆ ಸೇರುತ್ತಿದ್ದು ಘನತ್ಯಾಜ್ಯಗಳ ತುಂಬುವ ಡಸ್ಟ್‌ಬಿನ್ ಆಗಿದೆ ಎಂದು ಸೊಳೆಕೆರೆಯ ದಡದ ಕೆರೆಬಿಳಚಿ ಗ್ರಾಮದ ಆಸ್ಲಾಂ ಹೇಳುತ್ತಾರೆ.
Davanagere: ಏಷ್ಯಾದ 2ನೇ ಅತೀ ದೊಡ್ಡ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ!
ಸಾಕಷ್ಟುಪ್ರಮಾಣದ ಮೀನುಗಳಿಲ್ಲ:
ಪಟ್ಟಣದ ಚರಂಡಿ ನೀರನ್ನು ಪರಿಷ್ಕರಿಸದೆ ನೇರವಾಗಿ ಸೂಳೆಕೆರೆಗೆ ಹರಿಸುವುದು ಸರಿಯಾದ ಕ್ರಮವಲ್ಲ. ತಾಲೂಕಿನ ಸೂಳೆಕೆರೆಯಲ್ಲಿ 2 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕೆರೆಯ ನೀರಿನ ಸಾಮರ್ಥ್ಯಕ್ಕೆ ತಕ್ಕಂತೆ ಸಮಾನವಾಗಿ ನೀರಿನ ಕೊಳಚೆ ಶುದ್ಧೀಕರಣವಾಗಲು ಅಷ್ಟುಪ್ರಮಾಣದಲ್ಲಿ ಮೀನುಗಳಿಲ್ಲ. ದೇಶದಲ್ಲೇ ಪ್ರಖ್ಯಾತಿ ಪಡೆದ ಕೆರೆಯ ನೀರು ವಿಷಯುಕ್ತವಾಗದಂತೆ ಮಾಡುವ ಜವಾಬ್ದಾರಿ ತಾಲೂಕು ಪಂಚಾಯಿತಿ, ಪುರಸಭೆ ಮತ್ತು ತಾಲೂಕು ಆಡಳಿತ, ಜಿಲ್ಲಾಡಳಿತ ಅಧಿಕಾರಿಗಳ ಮೇಲಿದೆ. ಪಟ್ಟಣದ ಯಾವ-ಯಾವ ಗ್ರಾಮಗಳ ಚರಂಡಿ ನೀರು ಸೊಳೆಕೆರೆಗೆ ಸೇರುತ್ತಿದೆ ಎಂಬುದು ಗಮನಿಸಿ ಸೂಕ್ತ ಕ್ರಮ ವಹಿಸದಿದ್ದರೆ ಸೂಳೆಕೆರೆ ನೀರು ಎಂದರೆ ಜನರು ಬೆಚ್ಚಿ ಬೀಳಲಿದ್ದಾರೆ ಎಂದು ಶ್ರೀನಿವಾಸ್, ಪ್ರಸನ್ನ ಕುಮಾರ್, ಇಸ್ಮಾಯಿಲ್ ಶೇಖ್ ಹೇಳುತ್ತಾರೆ.
ಕೆರೆ ಒತ್ತುವರಿ, ನೀರು ಕಲುಷಿತವಾದರೂ ಅಧಿಕಾರಿಗಳು ಗಮನಿಸಿಲ್ಲ
ಸೂಳೆಕೆರೆಯ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕಾಳಜಿ ವಹಿಸದೆ ಕಣ್ಣು ಮುಂದೆಯೇ ಕೆರೆ ಒತ್ತುವರಿ, ನೀರು ಕಲುಷಿತವಾಗುತ್ತಿದ್ದರೂ ಯಾವುದೇ ಕ್ರಮಗಳ ಕೈಗೊಳ್ಳದೇ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ. ಕೆರೆಯಲ್ಲಿ ಸುಮಾರು 5-6 ಅಡಿಗಳಷ್ಟುಹೂಳು ತುಂಬಿದ್ದು ನೀರಿನ ಸಂಗ್ರಹ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇಷ್ಟೆಲ್ಲಾ ಆದರೂ ನೀರಾವರಿ ಇಲಾಖೆಯ ಯಾವ ಅಧಿಕಾರಿಗಳು ಇತ್ತ ಗಮನಹರಿಸದಿರುವುದು ಶೋಚನೀಯ ಸಂಗತಿ ಎಂದು ಕೆರೆ ಅಚ್ಚುಕಟ್ಟು ಪ್ರದೇಶದ ರೈತ ಸಿದ್ಧನಗೌಡ ಹೇಳುತ್ತಾರೆ.
ದಾವಣಗೆರೆ: ನಾಗೇನಹಳ್ಳಿ ಹಳ್ಳದಲ್ಲಿ ಅಕ್ರಮ ಮರಳುಗಾರಿಕೆ; ನಾಲ್ವರ ಬಂಧನ
ಸ್ವಾತಂತ್ರ್ಯ ದಿನವಾದ ಇಂದು ಜನಜಾಗೃತಿ
ಜನರ ವಿಚಿತ್ರ ಮನೋಭಾವನೆಗಳಿಂದಾಗಿ ಸಮೃದ್ಧವಾದ ಸೂಳೆಕೆರೆ ವಿಷಯುಕ್ತವಾಗಿದ್ದು ದೊಡ್ಡ ದುರಂತ. ಸೂಳೆಕೆರೆ ಸುತ್ತಮುತ್ತಲಿನ ಗ್ರಾಮಗಳು, ಚನ್ನಗಿರಿ ಪಟ್ಟಣದ ಕಲುಷಿತ ನೀರು ಕೆರೆಗೆ ಸೇರುತ್ತಿರುವುದೇ ವಿಷವಾಗಲು ಮುಖ್ಯಕಾರಣ. ಈಗ ಕೆರೆಯ ನೀರು ವಿಷವಾಗುವುದು ತಪ್ಪಿಸಲು ತಾಲೂಕು ಆಡಳಿತ, ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಸೂಳೆಕೆರೆ ವಿಸ್ತಾರಕ್ಕೆ ಅನುಗುಣವಾಗಿ ಮೀನಿನ ಮರಿಗಳ ಬಿಡಬೇಕು. ಈ ಬಗ್ಗೆ ಕೆರೆಯ ಸುತ್ತಲಿನ ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಲು ಸೂಳೆಕೆರೆಯಲ್ಲಿ ಮಂಗಳವಾರ ಸ್ವಾತಂತ್ರ್ಯದಿನಾಚರಣೆಯಂದು ಸೂಳೆಕೆರೆ ಸ್ವಚ್ಛವಾಗಿಡಲು ಜನಜಾಗೃತಿ ಮೂಡಿಸಲಾಗುವುದು.
ಡಾ. ಶ್ರೀಗುರುಬಸವ ಸ್ವಾಮೀಜಿ, ಪಾಂಡೋಮಟ್ಟಿವಿರಕ್ತ ಮಠ, ಗೌರವಾಧ್ಯಕ್ಷರು ಸೂಳೆಕೆರೆ ಸಂರಕ್ಷಣಾ ಸಮಿತಿ
ಜವಾಬ್ದಾರಿ ಇರಲಿ
ಸೊಳೆಕೆರೆಯ ನೀರು ಪರಿಷ್ಕರಿಸಿ ಕುಡಿಯುವ ನೀರು ವಿತರಿಸಬಹುದು. ಚರಂಡಿಯ ಕಲುಷಿತ ನೀರು ಕೆರೆಗೆ ಸೇರದಂತೆ ನೋಡಿಕೊಳ್ಳುವ ಜವಾಬ್ದಾರಿ ಪುರಸಭೆ ಮತ್ತು ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳ ಮೇಲಿದ್ದು ಜನರ ಆರೋಗ್ಯದ ಜೊತೆ ಉದಾಸೀನ ತೋರಬಾರದು.
ರಘು, ಅಧ್ಯಕ್ಷ, ಸೂಳೆಕೆರೆ ಸಂರಕ್ಷಣಾ ಸಮಿತಿ
ಹೋರಾಟ ಅನಿವಾರ್ಯ
ಸೂಳೆಕೆರೆ ಎಂದರೆ ನಮ್ಮ ಚನ್ನಗಿರಿ ತಾಲೂಕಿನ ಹಿರಿಮೆಯ ಕೆರೆ. ಮನುಷ್ಯರ ಸ್ವಾರ್ಥ ಭಾವನೆಗಳಿಗೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಯ ನೀರು ವಿಷಮಯವಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟಎಲ್ಲ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಸೂಳೆಕೆರೆ ವಿಷಮಯವಾಗುವುದು ತಪ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ.
ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಹಿರೇಮಠ ಚನ್ನಗಿರಿ, ಉಪಾಧ್ಯಕ್ಷರು ಸೂಳೆಕೆರೆ ಸಂರಕ್ಷಣಾ ಸಮಿತಿ