
ಬೆಳ್ತಂಗಡಿ (ಆ.28): ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 2003ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ತಾಯಿ ಸುಜಾತ ಭಟ್‌ರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಮೂರನೇ ದಿನವೂ ತೀವ್ರ ವಿಚಾರಣೆಗೊಳಪಡಿಸಿದೆ. ಬೆಳ್ತಂಗಡಿಯ ಎಸ್‌ಐಟಿ ಪೊಲೀಸ್ ಠಾಣೆಗೆ ಆಟೋ ರಿಕ್ಷಾದಲ್ಲಿ ಆಗಮಿಸಿದ ಸುಜಾತ ಭಟ್, ತನಿಖಾಧಿಕಾರಿ ಗುಣಪಾಲ ಜೆ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಗಲಿಬಿಲಿಗೊಂಡಿದ್ದಾರೆ.
ತನಿಖೆಯ ವಿವರ:
ಮೊದಲ ದಿನದ ವಿಚಾರಣೆಯಲ್ಲಿ ಸುಜಾತ ಭಟ್ ಕಡಿಮೆ ಮಾಹಿತಿ ನೀಡಿದ್ದು, ಹೆಚ್ಚು ಗೊಂದಲ ಸೃಷ್ಟಿಸಿದ್ದರು. ಎರಡನೇ ದಿನದಲ್ಲಿ ಶಿವಮೊಗ್ಗದ ರಿಪ್ಪನ್‌ಪೇಟೆಯ ವಾಸ, ಪ್ರಭಾಕರ ಬಾಳಿಗರ ಜೊತೆಗಿನ ಲಿವ್-ಇನ್ ಸಂಬಂಧ, ಮತ್ತು ಬೆಂಗಳೂರಿನ ಲಿವ್-ಇನ್ ಜೀವನದ ಬಗ್ಗೆ ಎಸ್‌ಐಟಿ ಮಾಹಿತಿ ಸಂಗ್ರಹಿಸಿತು. ಇದರ ಜೊತೆಗೆ, 1989ರಲ್ಲಿ ಉಡುಪಿಯ ನಿಟ್ಟೂರಿನ ಸ್ಟೇಟ್ ಹೋಂನಲ್ಲಿ ಸುಜಾತ ರಿಹ್ಯಾಬಿಲಿಟೇಶನ್ ಸೆಂಟರ್‌ನಲ್ಲಿದ್ದ ಬಗ್ಗೆಯೂ ತನಿಖಾ ತಂಡ ಮಾಹಿತಿ ಪಡೆದಿದೆ.
ಅನನ್ಯ ಭಟ್‌ರ ಕಾಲ್ಪನಿಕ ಪಾತ್ರ ಸೃಷ್ಟಿಸಿದ್ದು ಯಾರು?
ತನಿಖೆಯ ಕೇಂದ್ರಬಿಂದುವಾಗಿರುವ ಅನನ್ಯ ಭಟ್ ಎಂಬುದು ಕಾಲ್ಪನಿಕ ಪಾತ್ರ ಎಂಬ ಅಂಶ ಈಗ ಬಹಿರಂಗವಾಗಿದೆ. ಈ ಪಾತ್ರವನ್ನು ಸೃಷ್ಟಿಸಿದ್ದು ಯಾರು? ಯಾಕೆ? ಎಂಬ ಬಗ್ಗೆ ಎಸ್‌ಐಟಿ ತೀವ್ರವಾಗಿ ಪ್ರಶ್ನಿಸುತ್ತಿದೆ. ಸುಜಾತ ಭಟ್, ತನ್ನ ಪತಿ ಅನಿಲ್ ಭಟ್ ಹಾಗೂ ಭೂ ವಿವಾದಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದನ್ನೆಲ್ಲಾ ನನ್ನಿಂದ ಹೇಳಿಸಲಾಗಿದೆ, ನನ್ನ ಹಾದಿಯನ್ನು ತಪ್ಪಿಸಲಾಗಿದೆ ಎಂದು ಸುಜಾತ ಭಟ್ ಗೊಂದಲ ಸೃಷ್ಟಿಸುವ ಹೇಳಿಕೆ ನೀಡದ್ದಾರೆ.
ಎಸ್‌ಐಟಿಯ ತನಿಖೆಯ ತೀವ್ರತೆ:
ಎಸ್‌ಐಟಿ ತಾವು ಸಂಗ್ರಹಿಸಿದ ಮಾಹಿತಿಯನ್ನು ಕ್ರಾಸ್-ಚೆಕ್ ಮಾಡಿಕೊಳ್ಳುತ್ತಿದ್ದು, ಈಗಾಗಲೇ ಭೂ ವಿವಾದಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಿದೆ. ಸುಜಾತ ಭಟ್ ಈ ಹಿಂದೆ ಒಂದು ಪ್ರಕರಣದಲ್ಲಿ ಸಿಲುಕಿ ಸ್ಟೇಟ್ ಹೋಂಗೆ ಸೇರಿದ್ದ ವಿಷಯವೂ ತನಿಖೆಯಲ್ಲಿ ಬಯಲಾಗಿದೆ. ಇಂದಿನ ವಿಚಾರಣೆಯನ್ನು ತನಿಖಾಧಿಕಾರಿ ಗುಣಪಾಲ ಜೆ. ನಡೆಸುತ್ತಿದ್ದು, ಜಿತೇಂದ್ರ ಕುಮಾರ್ ದಯಾಮ್ ರಜೆಯ ಮೇಲೆ ತೆರಳಿರುವ ಕಾರಣ ಅವರು ಇಂದಿನ ತನಿಖೆಯಲ್ಲಿ ಭಾಗಿಯಾಗಿಲ್ಲ.
ಇಂದು ಸಂಜೆವರೆಗೂ ಸುಜಾತ ಭಟ್ ವಿಚಾರಣೆ:
ಇಂದು ಸಂಜೆವರೆಗೂ ಸುಜಾತ ಭಟ್‌ರ ವಿಚಾರಣೆ ಮುಂದುವರಿಯುವ ಸಾಧ್ಯತೆ ಇದೆ. ಅನನ್ಯ ಭಟ್‌ರ ನಾಪತ್ತೆ ರಹಸ್ಯಕ್ಕೆ ಸಂಬಂಧಿಸಿದಂತೆ ಇಂದು ಕೆಲವು ನಿರ್ಣಾಯಕ ಮಾಹಿತಿಗಳನ್ನು ದೃಢಪಡಿಸಲು ಸುಜಾತ ಭಟ್‌ರಿಂದ ಎಸ್‌ಐಟಿ ಪ್ರಯತ್ನಿಸಲಿದೆ. ಈ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿಯ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿರುವ ಸುಜಾತ ಭಟ್, ಈ ರಹಸ್ಯವನ್ನು ಬಿಡಿಸಲು ಯಾವೆಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಮುಂದುವರಿದ ತನಿಖೆಗಾಗಿ ಎಸ್‌ಐಟಿಯ ಮುಂದಿನ ಕ್ರಮಗಳೇನು?
ಪ್ರಕರಣದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಎಸ್‌ಐಟಿ ತನ್ನ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಏಷಿಯಾನೆಟ್ ಸುವರ್ಣನ್ಯೂಸ್‌ನೊಂದಿಗೆ ಸಂಫರ್ಕದಲ್ಲಿರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ