ರಾಜಕೀಯದ ನಡುವೆ ಪೊಲೀಸ್ ಆಪರೇಷನ್; ಮಾವ ಕೆಎನ್ ರಾಜಣ್ಣ ಸಲುವಾಗಿ ಅಳಿಯನಿಗೆ ಉನ್ನತ ಸ್ಥಾನ?

Kannadaprabha News   | Kannada Prabha
Published : Apr 30, 2026, 08:36 AM IST
Sudden change in the Intelligence Department What is the secret behind it rav

ಸಾರಾಂಶ

ರಾಜ್ಯ ಗುಪ್ತದಳದ ಮುಖ್ಯಸ್ಥರಾಗಿದ್ದ ಎಸ್. ರವಿ ಅವರನ್ನು ದಿಢೀರ್ ವರ್ಗಾವಣೆ ಮಾಡಿ, ನೂತನ ಸಾರಥಿಯಾಗಿ ಲಾಭೂ ರಾಮ್ ಅವರನ್ನು ನೇಮಿಸಲಾಗಿದೆ. ಇದೇ ವೇಳೆ, ಸಚಿವ ಕೆ.ಎನ್. ರಾಜಣ್ಣ ಅವರ ಅಳಿಯ ಎಸ್. ಗಿರೀಶ್ ಅವರಿಗೆ ಪ್ರಭಾವಿ ಕೇಂದ್ರ ವಲಯ ಡಿಐಜಿ ಹುದ್ದೆ ನೀಡಲಾಗಿದೆ. 

ಬೆಂಗಳೂರು (ಏ.30): ರಾಜ್ಯ ಆಡಳಿತರೂಢ ಪಕ್ಷದಲ್ಲಿ ಅಧಿಕಾರದ ಚದುರಂಗದಾಟ ಜೋರಾಗಿರುವ ಹೊತ್ತಿನಲ್ಲೇ ರಾಜ್ಯ ಗುಪ್ತದಳ ಮುಖ್ಯಸ್ಥರನ್ನು ದಿಢೀರ್‌ ಬದಲಾಯಿಸಿದ ಸರ್ಕಾರ, ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ಅಳಿಯನಿಗೆ ಪ್ರಭಾವಿ ಹುದ್ದೆ ನೀಡಿದೆ.

ರಾಜ್ಯ ಗುಪ್ತದಳ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್‌.ರವಿ ಅವರನ್ನು ಸಶಸ್ತ್ರ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಎಡಿಐಜಿ ಹುದ್ದೆಗೆ ವರ್ಗಾವಣೆಗೊಳಿಸಿದೆ. ಗುಪ್ತದಳದ ನೂತನ ಸಾರಥಿಯಾಗಿ ಕೇಂದ್ರ ವಲಯ ಐಜಿಪಿ ಲಾಭೂ ರಾಮ್ ಅವರನ್ನು ನೇಮಿಸಿ ಮಂಗಳವಾರ ರಾತ್ರಿ ಸರ್ಕಾರ ಆದೇಶಿಸಿದೆ.

ಇನ್ನು ಕೇಂದ್ರ ವಲಯ ಡಿಐಜಿಯಾಗಿ ಮಾಜಿ ಸಚಿವ, ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಕೆ.ಎನ್‌.ರಾಜಣ್ಣ ಅವರ ಅಳಿಯ ಐಪಿಎಸ್ ಅಧಿಕಾರಿ ಎಸ್‌.ಗಿರೀಶ್‌ ಅವರನ್ನು ಸರ್ಕಾರ ನಿಯೋಜಿಸಿದೆ. ಇನ್ನು ಹಲವು ವರ್ಷಗಳಿಂದ ಕೇಂದ್ರ ವಲಯ ಐಜಿಪಿ ದರ್ಜೆಯನ್ನು ಇದೇ ಮೊದಲ ಬಾರಿ ಡಿಐಜಿ ಸ್ಥಾನದ ಕೆಳಹಂತಕ್ಕಿಳಿಸಲಾಗಿದೆ.

ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವ ಸಮಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅದರಲ್ಲೂ ರಾಜ್ಯ ಗುಪ್ತದಳದ ಮುಖ್ಯಸ್ಥರ ಸ್ಥಾನಪಲ್ಲಟ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪ್ರಶಸ್ತಿ ವಿಜೇತ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡವನ್ನು ಅಭಿನಂದನಾ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಭಿಮಾನಿಗಳ ಸಾವಿನ ಬಳಿಕ ಅಂದು ಗುಪ್ತದಳ ಮುಖ್ಯಸ್ಥ ಹೇಮಂತ್ ನಿಂಬಾಳ್ಕರ್ ಅವರನ್ನು ಬದಲಾಯಿಸಿ ರವಿ ಅವರನ್ನು ಸರ್ಕಾರ ನೇಮಿಸಿತ್ತು. ಈಗ 10 ತಿಂಗಳಲ್ಲೇ ರವಿ ಅವರು ಗುಪ್ತದಳದಿಂದ ಅನಿರೀಕ್ಷಿತ ನಿರ್ಗಮಿಸಿದ್ದಾರೆ. ಆದರೆ ಗುಪ್ತಚರ ಇಲಾಖೆಯ ಮುಂದಾಳು ಬದಲಾವಣೆ ಹಿಂದೆ ರಾಜಕೀಯ ಕಾರಣ ಅಷ್ಟೇ ಇದೆ ಎನ್ನಲಾಗಿದೆ.

ಮಾವನ ಸಲುವಾಗಿ ಅಳಿಯನಿಗೆ ಉನ್ನತ ಸ್ಥಾನ:

ತಮ್ಮ ಆಪ್ತನ ಮನವೊಲೈಸುವ ಸಲುವಾಗಿ ರಾಜಣ್ಣ ಅ‍ವರ ಅಳಿಯ ಹಾಗೂ ಡಿಐಜಿ ಎಸ್‌.ಗಿರೀಶ್ ಅವರಿಗೆ ಪ್ರಭಾವಿ ಹುದ್ದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಎಂಬ ಮಾತುಗಳು ಪೊಲೀಸ್ ವಲಯದಿಂದ ಕೇಳಿ ಬಂದಿವೆ.

ಕಳೆದ ಜನವರಿಯಲ್ಲಿ ಸೇವಾ ಹಿರಿತನ ಆಧಾರದ ಮೇರೆಗೆ ಎಸ್ಪಿ ಹುದ್ದೆಯಿಂದ ಡಿಐಜಿಯಾಗಿ 2012ನೇ ಸಾಲಿನ ಐಪಿಎಸ್ ಅಧಿಕಾರಿ ಗಿರೀಶ್ ಅವರಿಗೆ ಮುಂಬಡ್ತಿ ಸಿಕ್ಕಿತು. ನಂತರ ಹೊಸದಾಗಿ ರಚಿಸಲಾಗಿದ್ದ ಮಾದಕ ವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಎಫ್‌)ಯ ಮುಖ್ಯಸ್ಥ ಹೊಣೆಗಾರಿಕೆ ಅವರ ಹೆಗಲಿಗೆ ಬಿತ್ತು. ಆದರೆ ಪದೋನ್ನತಿ ಬಳಿಕ ಒಂದು ತಿಂಗಳು ಸುದೀರ್ಘ ರಜೆ ಪಡೆದಿದ್ದ ಅವರು, ವಿರಾಮದ ತರುವಾಯ ಫೆಬ್ರವರಿಯಲ್ಲಿ ಕರ್ತವ್ಯಕ್ಕೆ ಮರಳಿದ್ದರು. ಈಗ ಕೇಂದ್ರ ವಲಯ ಡಿಐಜಿಯಾಗಿ ಗಿರೀಶ್ ಅವರನ್ನು ಸರ್ಕಾರ ನೇಮಿಸಿದೆ.

ಕೇಂದ್ರ ವಲಯದ ವ್ಯಾಪ್ತಿಗೆ ರಾಜಣ್ಣ ಪ್ರತಿನಿಧಿಸುವ ಮಧುಗಿರಿ ಕ್ಷೇತ್ರ ಸಹ ಬರುತ್ತದೆ. ಇನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಎಡಿಐಜಿ (ಕಾನೂನು ಮತ್ತು ಸುವ್ಯವಸ್ಥೆ) ಅಷ್ಟೇ ಕೇಂದ್ರ ವಲಯ ಐಜಿಪಿ ಹುದ್ದೆ ಅತ್ಯಂತ ಪ್ರಭಾವಿ ಹುದ್ದೆ. ರಾಜಧಾನಿಯ ನೆರೆಹೊರೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಎಫ್‌, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳು ಕೇಂದ್ರ ವಲಯ ಸರಹದ್ದಿಗೊಳಪಡುತ್ತವೆ. ಹೀಗಾಗಿ ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಕೇಂದ್ರ ವಲಯ ಪವರ್‌ ಪುಲ್ ಸ್ಥಾನ. ಈ ಹಿನ್ನೆಲೆಯಲ್ಲಿ ಹಿರಿಯ ಐಜಿಪಿಗಳಿಗೆ ಕೇಂದ್ರ ವಲಯ ಹೊಣೆಗಾರಿಕೆ ನೀಡಲಾಗುತ್ತಿತ್ತು. ಆದರೆ ಈ ಹುದ್ದೆಯನ್ನು ನಾಲ್ಕು ತಿಂಗಳ ಹಿಂದಷ್ಟೇ ಎಸ್ಪಿ ಸ್ಥಾನದಿಂದ ಮುಂಬಡ್ತಿ ಪಡೆದ ಅಧಿಕಾರಿಗೆ ವಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ರಾಜಕೀಯದ ನಡುವೆ ಪೊಲೀಸ್ ಆಪರೇಷನ್; ಮಾವ ಕೆಎನ್ ರಾಜಣ್ಣ ಸಲುವಾಗಿ ಅಳಿಯನಿಗೆ ಉನ್ನತ ಸ್ಥಾನ?
ಸೌಜನ್ಯ ಅ*ತ್ಯಾಚಾರ-ಕೊ*ಲೆ ಪ್ರಕರಣ: ಸುಪ್ರೀಂ ಅಂಗಳದಲ್ಲಿ ಮಹತ್ವದ ತಿರುವು ಪಡೆದುಕೊಂಡ ಕೇಸ್‌!