
ಬೆಂಗಳೂರು(ಅ.11): ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದೀಚೆಗೆ ಭರ್ಜರಿ ಮಳೆಯಾಗಿದ್ದು, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಯಲ್ಲಿ ಸಿಡಿಲಬ್ಬರಕ್ಕೆ ತಾಯಿ, ಮಗಳು ಸೇರಿ ಮೂವರು ಬಲಿಯಾಗಿದ್ದಾರೆ. ಚಿತ್ರದುರ್ಗದಲ್ಲಿ ಹಲವು ಕೆರೆಗಳ ಕೋಡಿ ಹರಿದು ತಗ್ಗುಪ್ರದೇಶಗಳಿಗೆ ನೀರು ನುಗ್ಗಿದರೆ, ಗದಗ ಜಿಲ್ಲೆಯ ನರಗುಂದದಲ್ಲಿ ಸರ್ಕಾರಿ ಆಸ್ಪತ್ರೆಯೊಂದಕ್ಕೆ ನೀರು ನುಗ್ಗಿ ಪರದಾಡಬೇಕಾಯಿತು.
"
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಮಹಾದೇವಿ ವೆಂಕಪ್ಪ ಭಜಂತ್ರಿ(40), ಪುತ್ರಿ ಸೋನಿ(12), ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಿದ್ದಾಪುರ ಗ್ರಾಮದ ಗಾಳೆಪ್ಪ(49) ಸಿಡಿಲಿಗೆ ಬಲಿಯಾದವರು. ಚಿತ್ರದುರ್ಗ ನಗರವೊಂದರಲ್ಲೇ ಒಂದೇ ದಿನ 145 ಮಿ.ಮೀ. ಮಳೆಯಾಗಿದ್ದು, 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಹತ್ತಾರು ಕೆರೆಗಳು ಕೋಡಿಬಿದ್ದಿದ್ದು, 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
"
ಉತ್ತರ ಕರ್ನಾಟಕದ ಧಾರವಾಡ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯಲ್ಲೂ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೂ ಉತ್ತಮ ಮಳೆಯಾಗಿದೆ. ಬಳ್ಳಾರಿಯ ವಿದ್ಯಾನಗರ, ದೇವಿನಗರ, ಎಸ್.ಆರ್. ಕಾಲೋನಿ, ಅಂಬೇಡ್ಕರ್ ಕಾಲೊನಿ, ರೇಣಕಾ ನಗರ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದೆ. ಗದಗದಲ್ಲಿ ನರಗುಂದ ತಾಲೂಕು ಆಸ್ಪತ್ರೆಯ ಆವರಣಕ್ಕೆ ಮಳೆ ನೀರು ನುಗ್ಗಿ ರೋಗಿಗಳು ಕೆಲಕಾಲ ಪರದಾಡಬೇಕಾಯಿತು.
"
ವರುಣನ ಅಬ್ಬರಕ್ಕೆ ನಡುಗಿದ ಬೆಂಗಳೂರು: ಹೈರಾಣಾದ ಜನತೆ
ಮೈಸೂರಿನ ಮಾರ್ಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೋ, ಬೆಂಡೆಕಾಯಿ, ನುಗ್ಗೇಕಾಯಿ ಸೇರಿ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಗದಗ, ಹಾವೇರಿಯಲ್ಲೂ ಬೆಳೆ ಹಾನಿಯಾದ ವರದಿಯಾಗಿದೆ. ದಾವಣಗೆರೆಯಲ್ಲಿ ಸುರಿದ ಭರ್ಜರಿ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, 7.67 ಲಕ್ಷ ರು. ನಷ್ಟಸಂಭವಿಸಿದೆ. ಅದೇ ರೀತಿ ವಿಜಯಪುರ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಹಾಗೂ ಬೆಂಗಳೂರಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ.
"
ಇನ್ನೂ 3 ದಿನ ಭಾರೀ ಮಳೆ ‘ಆರೆಂಜ್ ಅಲರ್ಟ್’
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲಿ ಅ.13ರವರೆಗೆ ಭಾರಿ ಹಾಗೂ ಅತೀ ಭಾರಿ ಮಳೆ ಸುರಿಯುವ ಸಂಭವವಿದ್ದು, ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
"
ಗುಡುಗು ಸಹಿತ ಅತೀ ಭಾರಿ ಮಳೆ ಆಗುವ ಕಾರಣಕ್ಕೆ ಅ.11ರಂದು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’, ಇದೇ ದಿನ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ‘ಯಲ್ಲೋ ಅಲರ್ಟ್’ ಘೋಷಿಸಲಾಗಿದೆ.
"
"
ಅ.12 ಹಾಗು 13ರಂದು ಸಹ ಅತೀ ಭಾರಿ ಮಳೆ ಸುರಿಯುವ ಸಂಭವವಿರುವ ಕಾರಣ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ, ಬೀದರ್, ಯಾದಗಿರಿ, ಕೊಪ್ಪಳ, ಕಲಬುರಗಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಜೊತೆಗೆ ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ ಇತರ ಕೆಲ ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್’ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
"
ಮಳೆ ಸುರಿದ ವಿವರ:
ಅ.10ರ ಬೆಳಗ್ಗೆ 8.30ರವರೆಗಿನ ಹಿಂದಿನ 24 ಗಂಟೆಗಳ ಅವಧಿಯಲ್ಲಿ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ 13 ಸೆಂ.ಮೀ, ಚಿತ್ರದುರ್ಗ 10, ಹಾಸನ 9, ಚಾಮರಾಜಪೇಟೆ, ತುಮಕೂರಿನ ಸಿಎನ್ ಹಳ್ಳಿ ತಲಾ 8, ಕೊಪ್ಪಳದ ಬೇವೂರು ಮತ್ತು ದಾವಣಗೆರೆಯ ಸಂತೆಬೆನ್ನೂರಿನಲ್ಲಿ ತಲಾ 7 ಸೆಂ.ಮೀ ಮಳೆ ಸುರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ