ಬೇಡಿಕೆ ಈಡೇ​ರಿ​ಕೆಗೆ ಸರ್ಕಾರ ಒಪ್ಪಿಗೆ: ವೈದ್ಯರ ಮುಷ್ಕರ ವಾಪಸ್‌

By Kannadaprabha NewsFirst Published Sep 19, 2020, 10:31 AM IST
Highlights

ಅಸ​ಹ​ಕಾರ ಮುಷ್ಕರ ಅಂತ್ಯ| ಸೆ.21ರಿಂದ ಒಪಿಡಿ ಬಂದ್‌ ಇಲ್ಲ| ವೇತನ ಪರಿ​ಷ್ಕ​ರಣೆ ಸೇರಿ ವಿವಿಧ ಬೇಡಿ​ಕೆ​ಗ​ಳಿಗೆ ಸರ್ಕಾರ ಒಪ್ಪಿ​ಗೆ| ಸರ್ಕಾ​ರಿ ವೈದ್ಯ​ರ ವೇತನ 40 ಸಾವಿರ ರು.ನಷ್ಟು ಹೆಚ್ಚಳ ಸಾಧ್ಯ​ತೆ| ವೇತನ ಪರಿ​ಷ್ಕ​ರ​ಣೆ​ಗೆ ಸರ್ಕಾ​ರ​ದಿಂದ 125 ಕೋಟಿ ರು.| 
 

ಬೆಂಗಳೂರು(ಸೆ.19): ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರದಿಂದ ಅಸಹಕಾರ ಮುಷ್ಕರದಲ್ಲಿ ಭಾಗವಹಿಸಿದ್ದ ಸರ್ಕಾರಿ ವೈದ್ಯರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ. ವೇತನ ಪರಿಷ್ಕರಣೆಗೆ 125 ಕೋಟಿ ರು. ವೆಚ್ಚ ಭರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ತಮ್ಮ ಮುಷ್ಕರ ಕೈ ಬಿಟ್ಟಿರುವ ಸರ್ಕಾರಿ ವೈದ್ಯರು ಶನಿವಾರದಿಂದ ಎಂದಿನಂತೆ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.

ವೇತನ ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಸರ್ಕಾರಿ ಇಲಾಖೆ ವ್ಯಾಪ್ತಿಗೆ ಬರುವ ಸರ್ಕಾರಿ ವೈದ್ಯರ ವೇತನ 25 ರಿಂದ 40 ಸಾವಿರ ರು.ಗಳಷ್ಟು ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರಿ ವೈದ್ಯರ ಸಂಘವು ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯರ ಮಾದರಿಯಲ್ಲೇ ಆರೋಗ್ಯ ಇಲಾಖೆ ವೈದ್ಯರಿಗೂ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರದಿಂದ (ಸೆ. 15) ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಿ, ಸಾಂಕ್ರಾಮಿಕ ಹಾಗೂ ಇತರೆ ಕಾಯಿಲೆಗಳ ವರದಿ, ಕಾರ್ಯಕ್ರಮಗಳ ಅನುಷ್ಠಾನದ ಮಾಹಿತಿ ನೀಡದೆ ಅಸಹಕಾರ ಹೋರಾಟಕ್ಕೆ ಕರೆ ನೀಡಿತ್ತು. ಜತೆಗೆ, ಸೆ.21 ರಿಂದ ರಾಜ್ಯಾದ್ಯಂತ ಹೊರ ರೋಗಿ ಸೇವೆ ಬಂದ್‌ ಮಾಡುವುದಾಗಿ ಎಚ್ಚರಿಸಿತ್ತು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರು ಸರ್ಕಾರಿ ವೈದ್ಯರ ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದರು.

ಸರ್ಕಾರಿ ವೈದ್ಯರ ‘ಅಸಹಕಾರ ಮುಷ್ಕರ’: ಸಾರ್ವಜನಿಕರೇ ಎಚ್ಚರ

ಸರ್ಕಾರಿ ವೈದ್ಯರ ಪ್ರಮುಖ ಬೇಡಿಕೆ ವೇತನ ತಾರತಮ್ಯ ಸಮಸ್ಯೆ ಬಗೆಹರಿಸಬೇಕು. ಬೆಂಗಳೂರಿನ 48 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಿಬಿಎಂಪಿಗೆ ವಿಲೀನಗೊಳಿಸದೆ ಆರೋಗ್ಯ ಇಲಾಖೆ ಬಳಿಯೇ ಉಳಿಸಿಕೊಳ್ಳಬೇಕು. ಕೊರೊನಾ ಅವಧಿಯಲ್ಲಿ ಮೃತಪಟ್ಟಕೊರೋನಾ ಹಾಗೂ ಕೊರೋನೇತರ ರೋಗ ಹೊಂದಿದ್ದ ವೈದ್ಯಕೀಯ ಸಿಬ್ಬಂದಿಗೂ ಕೊರೋನಾ ವಾರಿಯರ್‌ ಎಂದು ಪರಿಗಣಿಸಿ ಪರಿಹಾರ ನೀಡಬೇಕು. ಜೊತೆಗೆ ಸಿಬ್ಬಂದಿಗೆ ಕೊರೋನಾ ತಗುಲಿದರೆ ಪ್ರತ್ಯೇಕ ವಾರ್ಡ್‌ ನೀಡುವುದರ ಜತೆಗೆ ಉಚಿತ ಚಿಕಿತ್ಸೆ ನೀಡಬೇಕು ಎಂಬ ಬೇಡಿಕೆಗಳನ್ನು ಪದಾಧಿಕಾರಿಗಳು ಸಭೆಯ ಮುಂದಿಟ್ಟರು ಎನ್ನಲಾಗಿದೆ. ಈ ವೇಳೆ ವೈದ್ಯರ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

125 ಕೋಟಿ ರು. ಹೆಚ್ಚುವರಿ ಹೊರೆ:

ಸಭೆ ಬಳಿಕ ಮಾತನಾಡಿದ ಬಿ. ಶ್ರೀರಾಮುಲು, ವೈದ್ಯರ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಗಿದೆ. ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು ವೈದ್ಯರು ಮುಷ್ಕರ ಹಿಂಪಡೆದಿದ್ದಾರೆ. ವೇತನ ಪರಿಷ್ಕರಣೆಯಿಂದ ಸರ್ಕಾರಕ್ಕೆ 125 ಕೋಟಿ ರು. ಹೆಚ್ಚುವರಿ ಹೊರೆಯಾಗಲಿದೆ. ಕೊರೋನಾ ವೇಳೆಯಲ್ಲಿ ಹಗಲಿರುಳು ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ ಎಂದರು. ಸಭೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಸೇರಿದಂತೆ ಹಲವರು ಹಾಜರಿದ್ದರು.

ಸರ್ಕಾರಕ್ಕೆ ಧನ್ಯವಾದ

ನಮ್ಮ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ವಿವಿಧ ಹಂತದ ವೈದ್ಯರ ವೇತನ 25 ರಿಂದ 40 ಸಾವಿರದಷ್ಟುಹೆಚ್ಚಾಗಲಿದೆ. ವೈದ್ಯರು ತಪ್ಪು ಮಾಡಿದಾಗ ಆಂತರಿಕ ತನಿಖೆ ಬಳಿಕವೇ ಅಮಾನತು ಮಾಡುವುದಾಗಿ ಭರವಸೆ ನೀಡಿದೆ. ಹೀಗಾಗಿ ಮುಷ್ಕರ ವಾಪಸು ಪಡೆದಿದ್ದೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರ ಸಂಘ ಡಾ.ಜಿ.ಎ. ಶ್ರೀನಿವಾಸ್‌ ಅವರು ತಿಳಿಸಿದ್ದಾರೆ. 
 

click me!