ದೆಹಲಿ ಮಾದರಿ: ಕರ್ನಾಟಕದಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪನೆಗೆ ರಾಜ್ಯ ಸಂಪುಟ ಅಸ್ತು

By Kannadaprabha NewsFirst Published Jul 2, 2022, 5:32 AM IST
Highlights

*  ದೆಹಲಿಯ ಮೊಹಲ್ಲಾ ಕ್ಲಿನಿಕ್‌ ಮಾದರಿ
*  ಬಡವರ್ಗದ ಜನರಿಗಾಗಿ ರಾಜ್ಯಾದ್ಯಂತ 438 ಕ್ಲಿನಿಕ್‌ ಆರಂಭ
*  ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗೆ ಸಚಿವ ಸಂಪುಟ ನಿಶಾನೆ
 

ಬೆಂಗಳೂರು(ಜು.02): ಬಡ ವರ್ಗದವರಿಗೆ ಅನುಕೂಲವಾಗಲೆಂದು ದೆಹಲಿ ಸರ್ಕಾರ ಸ್ಥಾಪಿಸಿರುವ ‘ಮೊಹಲ್ಲಾ ಕ್ಲಿನಿಕ್‌’ ಮಾದರಿಯಲ್ಲಿಯೇ ರಾಜ್ಯದಲ್ಲಿಯೇ ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲು ಸಚಿವ ಸಚಿವ ಸಂಪುಟ ಸಭೆ ಮಹತ್ವ ನಿರ್ಧಾರ ಕೈಗೊಂಡಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿರುವಂತೆ ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲಾಗುವುದು. ಎಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲವೋ ಅಲ್ಲಿ ಇವು ಕಾರ್ಯನಿರ್ವಹಿಸಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವುಗಳ ಮೇಲುಸ್ತುವಾರಿ ವಹಿಸಲಿವೆ. ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ‘ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ 155.77 ಕೋಟಿ ರು. ವೆಚ್ಚದಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪಿಸಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. 438 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕ್ಲಿನಿಕ್‌ಗಳಿಗೆ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕರು ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿಯನ್ನು ಸಭೆಯಲ್ಲಿ ನೀಡಲಾಗಿದೆ’ ಎಂದು ವಿವರಿಸಿದರು.

Karnataka Budget 2022-23: ಮೊಹಲ್ಲಾ ಕ್ಲಿನಿಕ್‌ ರೀತಿ ನಮ್ಮ ಕ್ಲಿನಿಕ್‌: ಸಿಎಂ ಬೊಮ್ಮಾಯಿ

‘ನಮ್ಮ ಕ್ಲಿನಿಕ್‌ಗಳ ಸ್ಥಾಪನೆಯಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಮಾತ್ರವಲ್ಲ, ಜನರಿಗೆ ಸ್ಥಳೀಯ ಮಟ್ಟದಲ್ಲಿಯೇ ಆರೋಗ್ಯ ಸೇವೆ ದೊರೆಯಲಿದೆ. ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳಲ್ಲಿ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಥಾಪಿಸಲಾಗುವುದು’ ಎಂದು ಹೇಳಿದರು.

ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊಹಲ್ಲಾ ಕ್ಲಿನಿಕ್‌ಗಳನ್ನು ಆರಂಭಿಸಿದ್ದು, ದೇಶದ ಅನೇಕ ರಾಜ್ಯಗಳ ಗಮನ ಸೆಳೆದಿದೆ.

ಏನಿದು ನಮ್ಮ ಕ್ಲಿನಿಕ್‌?

ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಾಗಿ ನಗರ, ಪಟ್ಟಣಗಳ ವಾರ್ಡ್‌ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುವ ಕೇಂದ್ರ

ಯಾಕೆ ಈ ಕ್ಲಿನಿಕ್‌?

ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು. ಹಾಗೂ, ಜನರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ

ಎಲ್ಲೆಲ್ಲಿ ಆರಂಭ?

ಬೆಂಗಳೂರು ಮಹಾನಗರದ ಎಲ್ಲ ವಾರ್ಡ್‌ಗಳು ಸೇರಿದಂತೆ ರಾಜ್ಯದ ವಿವಿಧೆಡೆ 155.77 ಕೋಟಿ ರು. ವೆಚ್ಚದಲ್ಲಿ 438 ನಮ್ಮ ಕ್ಲಿನಿಕ್‌ ಆರಂಭ

ಯಾರಾರ‍ಯರು ಇರ್ತಾರೆ?

ಪ್ರತಿ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕ ಮತ್ತು ದ್ವಿತೀಯ ದರ್ಜೆ ಸಹಾಯಕರು ಲಭ್ಯ. ಇವರೆಲ್ಲ ಗುತ್ತಿಗೆ ಆಧಾರದ ಮೇಲೆ ನೇಮಕ.
 

click me!