ಹಳ್ಳಿ, ಪಟ್ಟಣಕ್ಕೆ ನೀರೊದಗಿಸಲು 2,500 ಕೋಟಿ: ಸಿಎಂ ಬೊಮ್ಮಾಯಿ

By Kannadaprabha News  |  First Published Jul 2, 2022, 3:30 AM IST

*   ಜಲಮಿಷನ್‌ನಡಿ ಬಹುಗ್ರಾಮ ಕುಡಿವ ನೀರು ಯೋಜನೆ ಅನುಷ್ಠಾನ
*   ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ
*  ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ 
 


ಬೆಂಗಳೂರು(ಜು.02):  ಜಲಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಯಲ್ಲಿ 2500 ಕೋಟಿ ರು.ಗಳಿಗಿಂತ ಹೆಚ್ಚು ಮೊತ್ತದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ಹಲವು ಜಿಲ್ಲೆಯಲ್ಲಿ ಕುಡಿಯುವ ನೀರು ಕಲ್ಪಿಸುವ ಸಂಬಂಧ ಅನುಮೋದನೆ ನೀಡಲಾಗಿದೆ. ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಮತ್ತು ಮೂರು ನಗರ ಸ್ಥಳೀಯ ಸಂಸ್ಥೆಗಳಾದ ಕಕ್ಕೇರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 2054 ಕೋಟಿ ರು.ನ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

Tap to resize

Latest Videos

ಬೊಮ್ಮಾಯಿ ಜಿಎಸ್‌ಟಿ ವರದಿಗೆ ಮೆಚ್ಚುಗೆ: ಚರ್ಚೆ ನಡೆಸದೇ ಸರ್ವಾನುಮತದಿಂದ ಅಂಗೀಕಾರ..!

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಅಣೆಕಟ್ಟಿನಿಂದ ಗಾಣದಾಳು, ಹೊಯ್ಸಳಕಟ್ಟೆ, ಕೆಂಕೆರೆ, ಬರಕನಾಳು, ದೊಡ್ಡಬಿದರೆ ಮತ್ತು ದಸೂಡಿ ಗ್ರಾಮ ಪಂಚಾಯಿತಿಗಳ 147 ಜನವಸತಿಗಳಿಗೆ 115 ಕೋಟಿ ರು. ಅಂದಾಜು ಮೊತ್ತದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ. ತಿಪಟೂರು ತಾಲೂಕಿನ 398 ಜನವಸತಿಗಳಿಗೆ ಹೇಮಾವತಿ ನದಿಯಿಂದ ಯೋಜನೆಯನ್ನು ಡಿಬಿಒಟಿ ಆಧಾರದ ಮೇಲೆ 435 ಕೊಟಿ ರು. ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕುಗಳಲ್ಲಿನ ಎಲ್ಲಾ ಗ್ರಾಮೀಣ ಜನವಸತಿಗಳು ಮತ್ತು ಮುದ್ದೇಬಿಹಾಳ ಹಾಗೂ ಸಿಂದಗಿ ಟೌನ್‌ಗಳು, ಇತರೆ ನಾಲ್ಕು ನಗರ ಸ್ಥಳೀಯ ಸಂಸ್ಥೆಯಾದ ದೇವರಹಿಪ್ಪರಗಿ, ಆಲಮೇಲ, ತಾಳಿಕೋಟಿ ಮತ್ತು ನಾಲತವಾಡ ಒಳಗೊಂಡಂತೆ ಯೋಜನೆಯನ್ನು 1385 ಕೋಟಿ ರು. ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ. ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಗ್ರಾಮದ ಹತ್ತಿರ ವೇದಾವತಿ ನದಿಗೆ ಅಡ್ಡಲಾಗಿ ಬಿಡ್ಜ್‌ ಕಂ ಬ್ಯಾರೇಜ್‌ ಅನ್ನು 19.90 ಕೋಟಿ ರು. ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
 

click me!